Advertisement

ಕೆಪಿಟಿಸಿಎಲ್‌ ನೌಕರರ ಕ್ರೀಡಾಕೂಟಕ್ಕೆ ತೆರೆ

07:17 AM Jan 19, 2019 | Team Udayavani |

ಕಲಬುರಗಿ: ಕ್ರೀಡಾಕೂಟದಲ್ಲಿ ಸೋಲು ಮತ್ತು ಗೆಲುವು ಮುಖ್ಯವಲ್ಲ ಉತ್ಸಾಹದಿಂದ ಪಾಲ್ಗೊಳ್ಳುವುದು ಮುಖ್ಯ ಎಂದು ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕಿ ಡಾ| ಆರ್‌. ರಾಗಪ್ರಿಯ ತಿಳಿಸಿದರು.

Advertisement

ಜೆಸ್ಕಾಂ ಹಾಗೂ ಕೆಪಿಟಿಸಿಎಲ್‌ ಸಹಯೋಗದಲ್ಲಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ವಿದ್ಯುತ್‌ ವಿತರಣಾ ಕಂಪೆನಿಗಳ ನೌಕರರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಿತ್ಯದ ಕೆಲಸದ ಒತ್ತಡದಿಂದ ಹೊರ ಬರಲು ಕ್ರೀಡೆಗಳು ಸಹಕಾರಿ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುವುದರ ಜತೆಗೆ ದೈಹಿಕವಾಗಿ ಸದೃಢರಾಗಿರಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ ಪ್ರಧಾನ ಕಾರ್ಯದರ್ಶಿ ಎನ್‌. ಕೆಂಪೇಗೌಡ ಮಾತನಾಡಿ, ನೌಕರರ ಕ್ರೀಡಾಕೂಟಗಳು ಬಾಲ್ಯವನ್ನು ನೆನಪಿಸುವಂತಾಗಿದ್ದು, ಕ್ರೀಡೆಗಳಿಂದ ನೌಕರರಲ್ಲಿ ಬಾಂಧವ್ಯ ಮೂಡಿಸಲು ಸಾಧ್ಯ ಇದೆ ಎಂದು ಹೇಳಿದರು. ಎರಡು ದಿನಗಳ ಕ್ರೀಡಾಕೂಟದಲ್ಲಿ ವಾಲಿಬಾಲ್‌, ಬ್ಯಾಸ್ಕೆಟ್ಬಾಲ್‌, ಲಾನ್‌ ಟೆನಿಸ್‌ ಮತ್ತು ಬಾಲ್‌ ಬ್ಯಾಡ್ಮಿಂಟನ್‌ ಕ್ರೀಡೆಗಳು ನಡೆದವು. ಜೆಸ್ಕಾಂ (ಗುಲಬರ್ಗಾ), ಹೆಸ್ಕಾಂ (ಹುಬ್ಬಳ್ಳಿ), ಮೆಸ್ಕಾಂ (ಮಂಗಳೂರು), ಸೆಸ್ಕಾಂ (ಚಾಮುಂಡೇಶ್ವರಿ) ಹಾಗು ಬೆಸ್ಕಾಂ (ಬೆಂಗಳೂರು) ನಿಗಮಗಳ ನೌಕರರು ಪಾಲ್ಗೊಂಡಿದ್ದರು. ಜೆಸ್ಕಾಂನ ಪ್ರಭಾರ ಮುಖ್ಯ ಇಂಜಿನಿಯರ್‌ ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷೆ ಜೋಶಿ ಸುನಂದಾ, ತಾಂತ್ರಿಕ ನಿರ್ದೇಶಕ ಅನಿಲಕುಮಾರ ಬಬಲೇಶ್ವರ, ನೌಕರರ ಸಂಘದ ಉಪಾಧ್ಯಕ್ಷ ನೀಲಪ್ಪ ಎಸ್‌.ಧೋತ್ರೆ ಹಾಗೂ ಅಧಿಕಾರಿಗಳಿದ್ದರು.

ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣೆ
ಲಾನ್‌ ಟೆನಿಸ್‌ ಸ್ಪರ್ಧೆಯಲ್ಲಿ ಮೆಸ್ಕಾಂ ತಂಡ, ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಬೆಸ್ಕಾಂ ತಂಡ, ವಾಲಿಬಾಲ್‌ನಲ್ಲಿ ಸೆಸ್ಕಾಂ ತಂಡ ಹಾಗೂ ಬಾಸ್ಕೆಟ್ ಬಾಲ್‌ ಸ್ಪರ್ಧೆಯಲ್ಲಿ ಸೆಸ್ಕಾಂ ತಂಡ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದುಕೊಂಡವು. ವಿಜೇತ ತಂಡಗಳಿಗೆ ಡಾ| ಆರ್‌. ರಾಗಪ್ರಿಯ ಟ್ರೋಫಿ ಹಾಗೂ ಪ್ರಶಸ್ತಿಪತ್ರ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next