ಕಲಬುರಗಿ: ಸಾಲ ಮಾಡಿ ತುಪ್ಪ ತಿನ್ನಬೇಡಿ ಎನ್ನುವ ಗಾದೆ ಮಾತಿನಂತೆ ಸಾಲದಲ್ಲೇ ಉಳಿದುಕೊಂಡು ಬಸ್ಸು ಖರೀದಿ ಮಾಡಿ ಓಡಿಸುವುದು ಸೇರಿದಂತೆ ಇತರೆ ಸೌಕರ್ಯಗಳನ್ನು ಮಾಡುವುದರಿಂದ ಮುಂದೆ ಸಂಸ್ಥೆಯನ್ನೆ ಮುಚ್ಚಬೇಕಾದ ದಿನ ಬಂದೀತು ಎಂದು ಎನ್‌ಇಕೆಆರ್‌ಟಿಸಿ ಅಧ್ಯಕ್ಷ, ಅಧಿಕಾರಿಗಳಿಗೆ ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು.
ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ 36 ನಗರ ಸಾರಿಗೆ ಬಸ್ಸುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಜನಾರ್ಪಣೆ ಮಾಡಿದ ಬಳಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷರಾದ ಹೊಸ ಉಮೇದಿಯಲ್ಲಿ ನೂತನ ಅಧ್ಯಕ್ಷ ಇಲಿಯಾಸ್ ಸೇಠ್ ಬಾಗಬಾನ್ ಮತ್ತು ನಿಕಟಪೂರ್ವ ಅಧ್ಯಕ್ಷ ಭೀಮಣ್ಣ ಸಾಲಿ ಕೆಲಸ ಮಾಡಿದ್ದಾರೆ.
ಆದರೆ, ಸಂಸ್ಥೆ ಒಟ್ಟು 108 ಕೋಟಿ ರೂ. ಸಾಲದ ಹೊರೆ ಹೊತ್ತಿದೆ. ಆ ಹೊರೆಯನ್ನು ಕಡಿಮೆ ಮಾಡುವತ್ತಲೂ ನಿಗಾವಹಿಸಬೇಕು. ಇಲ್ಲದಿದ್ದರೆ ಇಷ್ಟೆಲ್ಲಾ ಹೊಸ ಬಸ್ಸುಗಳು, ಬಸ್ ನಿಲ್ದಾಣಗಳು, ಉತ್ತಮ ಸೌಕರ್ಯಗಳನ್ನು ನೀಡಿದ ಬಳಿಕ ಸಂಸ್ಥೆಯೇ ಉಳಿಸಿಕೊಳ್ಳದೆ ಇದ್ದರೆ ಹೇಗೆ. ಆದ್ದರಿಂದ ಹಂತ ಹಂತವಾಗಿ ಸಾಲದ ಹೊರೆಯಿಂದ ಸಂಸ್ಥೆಯನ್ನು ಹೊರತನ್ನಿ ಎಂದರು.
ಜನರು ಕೂಡ ಇಷ್ಟೆಲ್ಲಾ ಸೌಕರ್ಯಗಳನ್ನು ಹೊಂದಿದ ಬಳಿಕವೂ ಜೀಪು, ಟಂಟಂ ಹಾಗೂ ಆಟೋಗಳಲ್ಲಿ ಓಡಾಡುವುದನ್ನು ಬಿಡಬೇಕು. ಸ್ವಲ್ಪ ತಡವಾದರೂ ಸುರಕ್ಷಿತವಾಗಿ ನಿಮ್ಮ ಕುಟುಂಬವನ್ನು ಸೇರಿಕೊಳ್ಳುವ ದೂರದೃಷ್ಟಿಯೂ ಇರಬೇಕು ಎಂದರು. ಎನ್‌ಈಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್ ಸೇಠ್ ಬಾಗಬಾನ್ ಮಾತನಾಡಿ, ಇವತ್ತು 36 ಹೊಸ ನಗರ ಸಾರಿಗೆ ಬಸ್ಸುಗಳನ್ನು ಓಡಿಸಲಾಗುತ್ತಿದೆ.
ಇದಲ್ಲದೆ ಇನ್ನೂ ಹೊಸದಾಗಿ 1250 ಬಸ್ಸುಗಳು ಹಂತ ಹಂತವಾಗಿ ಬರಲಿದೆ. ಸಂಸ್ಥೆಯ ಒಂಭತ್ತು ವಿಭಾಗದಲ್ಲಿ 13 ಪ್ರಯಾಣಿಕರು ದಿನಾಲು ಬಸ್ಸುಗಳನ್ನು ಬಳಕೆ ಮಾಡುತ್ತಾರೆ. ಇದರಿಂದ ಪ್ರತಿ ದಿನಾಲು 4.5 ಕೋಟಿ ರೂ. ಆದಾಯ ಬರುತ್ತಿದೆ. ದಿನಾಲು 1800 ಬಸ್ಸುಗಳು ಹೋಗುತ್ತವೆ, 1800 ಬರುತ್ತವೆ. ನೂತನವಾಗಿ 52 ಬಸ್ ಶೆಲ್ಟರ್‌ಗಳನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ.
ಈಗಾಗಲೇ 35 ಬಸ್ಸುಗಳಲ್ಲಿ ಸಿಸಿ ಕ್ಯಾಮರಾಗಳನ್ನು ಹಾಕಲಾಗಿದೆ. ಒಟ್ಟು 700 ಹೊಸ ಬಸ್ಸುಗಳಿಗಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. 300 ಈಗ ಬಂದಿವೆ. ಮಲ್ಲಿಕಾರ್ಜುನ ಖರ್ಗೆ ಅವರ ಆಶಯದಂತೆ ಮತ್ತು ಈಗಾಗಲೇ ಘೋಷಿಸಿರುವಂತೆ ಇನ್ನೆರಡು ವಾರಗಳಲ್ಲಿ ಜಿಲ್ಲಾ ಕೇಂದ್ರಗಳ ಮಧ್ಯೆ ಓಡಾಡಲು 20 ಎಸಿ ಬಸ್ಸುಗಳು ಬರಲಿವೆ ಎಂದರು. ಚಿಂಚೋಳಿಯ ಶಾಸಕ ಉಮೇಶ ಜಾಧವ ಮಾತನಾಡಿದರು.
ಶಾಸಕ ದತ್ತಾತ್ರೇಯ ಪಾಟೀಲ ರೇವೂರ್ ಅಧ್ಯಕ್ಷತೆ ವಹಿಸಿದ್ದರು. ಎಂಎಲ್‌ಸಿ ಇಕºಲಾ ಅಹಮದ್ ಸರಡಗಿ, ಮಾಜಿ ಶಾಸಕ ಅಲ್ಲಂಪ್ರಭು ಪಾಟೀಲ, ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು, ಮೇಯರ್ ಶರಣು ಮೋದಿ, ನೀಲಕಂಠರಾವ್ ಮೂಲಗೆ, ರಾಘವೇಂದ್ರ ಮೈಲಾಪುರ, ಮಾಪಣ್ಣ ಗಂಜಿಗೇರಿ, ಸಜ್ಜಾದ ಅಲಿ ಇನಾಂದಾರ, ಜಾಪರ ಪಟೇಲ ಹಾಗೂ ಅಧಿಕಾರಗಳಾದ ಖಾನಪ್ಪನವರ್, ಎಂ.ವಾಸು, ಡಿ. ಕೊಟ್ಟಪ್ಪ ಇದ್ದರು. ರಹೇಮಾನ ಮಸ್ಕಿ ನಿರೂಪಿಸಿ, ವಂದಿಸಿದರು.