ರಾಮದುರ್ಗ: ಮೆಕ್ಕೆಜೋಳ ಹಾಗೂ ಹತ್ತಿಗೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಮತ್ತು ಡಿ.13ರಂದು ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ವೇಳೆ ಧರಣಿಗೆ ಸ್ಥಳಾವಕಾಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಟ್ರ್ಯಾಕ್ಟರಿನಲ್ಲಿ ಕಾಳು ವ್ಯಾಪಾರ ಮಾಡುವ ಮೂಲಕ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದರು.
ಮೆಕ್ಕೆಜೋಳ ಮತ್ತು ಹತ್ತಿ ಬೆಳೆ ಫಸಲು ಬಂದಿದ್ದು, ಮಾರುಕಟ್ಟೆ ದರ ಕುಸಿದಿದ್ದು, ಕೂಡಲೇ ರೈತರ ನೆರವಿಗೆ ಸರಕಾರ ಧಾವಿಸುವ ನಿಟ್ಟಿನಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ರೈತರು ಹಲವು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳ ಪರಿಹಾರಕ್ಕಾಗಿ ಸರ್ಕಾರದ ಜೊತೆ ಚರ್ಚಿಸುವುದು ಮತ್ತು ಪರಿಹಾರ ಕಂಡುಕೊಳ್ಳುವುದು ಅವಶ್ಯವಿದೆ. ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಡಿ.13ರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ಪೂರ್ವದಲ್ಲಿ ಬಗೆ ಹರಿಸಬೇಕು. ಒಂದು ವೇಳೆ ಬಗೆಹರಿಸದಿದ್ದರೆ ಡಿ.13ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಧರಣಿ ನಡೆಸುವುದಾಗಿ ಮನವಿ ಮೂಲಕ ಒತ್ತಾಯಿಸಿದರು.
ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕರ ಅಂಬಲಿ, ರಾಜ್ಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಸಿದ್ದಪ್ಪ ನವಲಗುಂದ, ಗೋವಿಂದಪ್ಪ ಪೆಟ್ಲೂರ, ರುದ್ರಗೌಡ ಪಾಟೀಲ, ಸಿದ್ದಪ್ಪ ನವಲಗುಂದ, ಪ್ರವೀಣ ಯರಗಟ್ಟಿ, ಆರಿಫ್ ಅತ್ತಾರ, ಬಸವಂತಪ್ಪ ಹೊಳೆನ್ನವರ ಸೇರಿದಂತೆ ಇತರರರಿದ್ದರು.