ಸುರಪುರ: ದಿನಬಳಕೆ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ, ಬೆಂಬಲ ಬೆಲೆ ನಿಗದಿ ಮತ್ತು ಖರೀದಿ ಕೇಂದ್ರ ಆರಂಭ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡರು ಸೋಮವಾರ ಎಪಿಎಂಸಿ ಕಾರ್ಯಾಲಯದ ಎದುರು ಪ್ರತಿಭಟಿಸಿದರು.
ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಮಾತನಾಡಿ, ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇತ್ತ ರೈತರು ಬೆಳೆದಿರುವ ಶೇಂಗಾ ಮತ್ತು ಭತ್ತ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಬೀಜ ಗೊಬ್ಬರಕ್ಕೆ ಖರ್ಚು ಮಾಡಿದ ಹಣ ಕೈಗೆ ಬಾರದೇ ಮಾಡಿದ ಸಾಲ ತೀರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ರೈತರು, ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದರು.
ತಾಲೂಕು ಅಧ್ಯಕ್ಷ ಹನುಮಂತ್ರಾಯ ಮಡಿವಾಳ ಮಾತನಾಡಿ, ಅತೀ ವೃಷ್ಟಿ ಅನಾವೃಷ್ಟಿ ಒಂದೆಡೆಯಾದರೆ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದಿರುವುದು ರೈತರಿಗೆ ಗಾಯದ ಮೇಳೆ ಬರೆ ಎಳೆದಂತ್ತಾಗಿದೆ. ಶೇಂಗಾ ಮತ್ತು ಭತ್ತ ಕಟಾವಿಗೆ ಬಂದಿವೆ. ಶೇಂಗಾ ಬೀಜ 12 ಸಾವಿರ ರೂ. ಕ್ವಿಂಟಲ್ ತಂದು ಬಿತ್ತಿದ್ದಾರೆ. ಶೇಂಗಾಕ್ಕೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಪ್ರತಿ ಹಂತದಲ್ಲೂ ನಷ್ಟ ಅನುಭವಿಸುತ್ತಿರುವ ರೈತರು ಆತ್ಮಹತ್ಯೆ ಹಾದಿ ತುಳಿಯುವಂತ್ತಾಗಿದೆ ಎಂದು ದೂರಿದರು.
ಕೆಲಸಕ್ಕೆ ಬಾರದ ವಿಷಯಗಳನ್ನು ಕೆದಕುತ್ತ ಜನಪ್ರತಿನಿಧಿಗಳು ಕಾಲ ಹರಣ ಮಾಡುವುದು ಸರಿಯಲ್ಲ. ಸರಕಾರದ ಮೇಲೆ ಒತ್ತಡ ತಂದು ರೈತರ ನೆರವಿಗೆ ಬರಬೇಕು. ಶೇಂಗಾ, ಜೋಳ, ಸಜ್ಜಿ ಮತ್ತು ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿಸುವ ವ್ಯವಸ್ಥೆ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ರೈತರು ಅನಿವಾರ್ಯವಾಗಿ ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತದೆ. ಇದಕ್ಕೆ ಸರಕಾರ ನೇರ ಹೊಣೆ ಎಂದು ಎಚ್ಚರಿಸಿದರು.
ಶಿರಸ್ತೇದಾರ್ ಮಲ್ಯಯ್ಯ ದಂಡು ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮಲ್ಲಯ್ಯ ಕಮತಗಿ, ಸಾಹೇಬಗೌಡ ಮದಲಿಂಗನಾಳ, ರಾಘು ಕುಪಗಲ್, ಹನುಮಗೌಡ ನಾರಾಯಣಪುರ, ನಾಗಪ್ಪ ಕುಪಗಲ್, ಶರಣು ಮೇಟಿ, ವೆಂಕಟೇಶ ಕುಪಗಲ್ ಇತರರಿದ್ದರು.