ಕುಂದಾಪುರ: ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಆಶ್ರಯದಲ್ಲಿ ಒಂದು ತಿಂಗಳಿನಿಂದ ಜಿಲ್ಲೆಯ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಶನಿವಾರ ತ್ರಾಸಿ ಕಡಲ ತಟದಲ್ಲಿ ವಿಶಿಷ್ಟವಾಗಿ ಸಮಾಪನಗೊಂಡಿತು.
ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿ.ಪಂ. ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಸಿಂಧು ಬಿ. ರೂಪೇಶ್, ಎಸ್‌ಪಿ ನಿಶಾ ಜೇಮ್ಸ್ ಮೊದಲಾದವರು ಭಾಗವಹಿಸಿದ್ದರು.
ಪಾಲ್ಗೊಂಡಿದ್ದ ಎಲ್ಲರೂ ಮತದಾನದ ಪಾವಿತ್ರ್ಯ ಉಳಿಸುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರು. ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಅಭಿಯಾನದ ಸಮಾಪನ ಘೋಷಿಸಲಾಯಿತು.
ಆರಂಭದಲ್ಲಿ ಗಾಯಕ ಗಣೇಶ ಗಂಗೊಳ್ಳಿ ಭಾವಗೀತೆಗಳನ್ನು, ಮತದಾನದ ಮಹತ್ವ ಸಾರುವ ಹಾಡುಗಳನ್ನು ಹಾಡಿದರು. ಕೊರಗ ತನಿಯ ಕಲಾತಂಡದ ಸದಸ್ಯರು ಡೋಲು ವಾದನ ಪ್ರಸ್ತುತ ಪಡಿಸಿದರು. ಕೋಟದ ಯಕ್ಷಪೀಠ ಯಕ್ಷಗಾನ ತಂಡ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಶ್ಯಾನುಭಾಗ್ ಪರಿಕಲ್ಪನೆಯಲ್ಲಿ ರೂಪುಗೊಂಡ “ಮತದಾನ ವಿಜಯ’ ಕಿರು ಯಕ್ಷಗಾನ ಪ್ರದರ್ಶಿಸಿದರು.
ಮರಳದಂಡೆಯಲ್ಲಿ “ಎಪ್ರಿಲ್ 23′ ಆಕೃತಿಯನ್ನು ರಚಿಸುವುದರ ಮೂಲಕ ಮತದಾನದ ದಿನವನ್ನು ನೆನಪಿಸಲಾಯಿತು. ಗಾಳಿಪಟ ಹಾರಾಟ, ಹಗ್ಗ – ಜಗ್ಗಾಟ, ಚಮಚೆ- ನಿಂಬೆ ಓಟ ನಡೆಯಿತು. ಮರಳ ದಂಡೆ ಮೇಲೆ ಮತದಾನದ ಮಹತ್ವ ಮತ್ತು ಎಲ್ಲ ಅರ್ಹ ಮತದಾರರು ತಪ್ಪದೆ ಮುಕ್ತ, ನಿರ್ಭೀತ ಮತ ಚಲಾಯಿಸುವ ಅಗತ್ಯವನ್ನು ಬಿಂಬಿಸುವ ಫಲಕಗಳನ್ನು ಇಡಲಾಗಿತ್ತು. ಯಕ್ಷಗಾನ ಕಲಾವಿದರನ್ನು ಮತ್ತು ಸ್ವೀಪ್ ಜಾಗೃತಿಯ ಯಶಸ್ಸಿಗೆ ಕಾರಣರಾದ ವರನ್ನು ಗೌರವಿಸಲಾಯಿತು.