Advertisement

ಕಣ್‌ ತೆರೆದು ನೋಡಿ

07:26 PM Jun 26, 2019 | mahesh |

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ
ಜಗತ್ತಿನೊಳಗೊಂದು ಸುತ್ತು…

Advertisement

ಸ್ಲೋ ಮೋಷನ್ನಿನಲ್ಲಿ ಮಾತ್ರ ಕಾಣುವ ನಾಲಗೆ
ಮಕ್ಕಳು ಮೊಂಡಾಟ ಮಾಡುವಾಗ, ಅಣಕಿಸುವ ಸಲುವಾಗಿ ನಾಲಗೆ ಮುಂದಕ್ಕೆ ಚಾಚಿ ವಿಚಿತ್ರ ಮುಖಭಾವ ಮಾಡುವುದನ್ನು ನೋಡಿರಬಹುದು. ಇದರಿಂದಾಗಿ ನಾಲಗೆ ಹೊರಚಾಚುವುದೆಂದರೆ ಅದು ಅಣಕ ಮಾಡುತ್ತಿರುವುದೆಂದೇ ಭಾವಿಸಲಾಗುತ್ತದೆ. ಆದರೆ ಈ ಒಂದು ಜೀವಿ ನಾಲಗೆ ಹೊರಚಾಚುವುದನ್ನು ಅಣಕ ಎಂದು ತಿಳಿಯುವ ಹಾಗಿಲ್ಲ. ಏಕೆಂದರೆ ಈ ಜೀವಿ ನಾಲಗೆ ಹೊರಕ್ಕೆ ಚಾಚುವುದು ಹೊಟ್ಟೆಪಾಡಿಗಾಗಿ. “ಹೊಟ್ಟೆಪಾಡಿಗಾಗಿ ಏನು ಮಾಡಿದರೂ ಸಹ್ಯ’ ಎನ್ನುವುದು ಆಧುನಿಕ ಜಗತ್ತಿನ ನಾಣ್ಣುಡಿ. ನಾಲಗೆಯನ್ನು ಉದ್ದಕ್ಕೆ ಚಾಚಿ ಹುಳಹುಪ್ಪಟೆ ಹಿಡಿಯುವ ಈ ಜೀವಿ ಗೋಸುಂಬೆ. ನಿಮಗೆಲ್ಲರಿಗೂ ಅದು ತನ್ನ ದೇಹದ ಬಣ್ಣ ಬದಲಿಸುತ್ತದೆ ಎನ್ನುವ ವಿಚಾರ ಗೊತ್ತಿರುತ್ತದೆ. ಆದರೆ ಅದರ ನಾಲಗೆ, ದೇಹದ ಎರಡುಪಟ್ಟು ಉದ್ದವಿರುತ್ತದೆ ಎಂದು ಗೊತ್ತೇ? ನಾಲಗೆ ಬರೀ ಉದ್ದ ಮಾತ್ರವಲ್ಲ ಬಹಳ ಶಕ್ತಿಶಾಲಿಯೂ ಹೌದು. ಅತ್ಯಂತ ಕ್ಷಿಪ್ರಗತಿಯಲ್ಲಿ ನಾಲಗೆ ಹೊರಚಾಚಿ ಆಹಾರವನ್ನು ಬಾಯೊಳಗೆ ಎಳೆದುಕೊಂಡು ಏನೂ ಆಗೇ ಇಲ್ಲವೆನ್ನುವಂತೆ ಗಪ್‌ಚುಪ್ಪಾಗಿ ಕುಳಿತುಬಿಡುತ್ತದೆ ಗೋಸುಂಬೆ. ಅದೆಷ್ಟು ವೇಗವಾಗಿ ನಾಲಗೆಯನ್ನು ಚಾಚುತ್ತದೆಂದರೆ ಬರಿಗಣ್ಣಿಗೆ ಕಾಣಿಸದು. ಸಂಶೋಧಕರು ವಿಡಿಯೋ ರೆಕಾರ್ಡ್‌ ಮಾಡಿ ಆ ದೃಶ್ಯವನ್ನು ಸ್ಲೋ ಮೋಷನ್ನಿನಲ್ಲಿ ನೋಡಬೇಕಾಯಿತು!

ನೀರು ಕುಡಿಯದೆ ಇರುವ ಪಂದ್ಯ
ಪ್ರಕೃತಿ ಎಷ್ಟು ವಿಶಿಷ್ಟವೆನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕಸಿ ಮಾಡುವ ತಂತ್ರಜ್ಞಾನದ ಕುರಿತು ನೀವು ಕೇಳಿರಬಹುದು. ಸಸ್ಯಜಗತ್ತಿನಲ್ಲಿ ಈ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ಎರಡು ಮೂರು ತಳಿಯನ್ನು ಸೇರಿಸಿ ಉತ್ತಮ ತಳಿಯ ಗಿಡ, ಬೆಳೆಯನ್ನು ಪ್ರಯೋಗಶಾಲೆಯಲ್ಲಿ ಕೃತಕವಾಗಿ ಪೋಷಿಸಲಾಗುತ್ತದೆ. ಜಾನುವಾರುಗಳ ವಿಷಯದಲ್ಲೂ ಈ ಪ್ರಯೋಗವನ್ನು ಮಾಡುವುದಿದೆ. ಎರಡು ಭಿನ್ನ ತಳಿಯ ಹಸುಗಳ ಕೂಡಿಸಿ ಹೊಸದೊಂದು ತಳಿಯನ್ನು ವಿಜ್ಞಾನಿಗಳು ಹುಟ್ಟುಹಾಕುತ್ತಾರೆ. ಕೆಲ ಪ್ರಾಣಿಗಳನ್ನು ನೋಡಿದಾಗ ಇಂಥದ್ದೇ ಒಂದು ಕಸಿಯ ಪ್ರಯೋಗ ಪ್ರಕೃತಿಯಲ್ಲಿ ನಡೆದಿರುವಂತೆ ತೋರುವುದು ಸುಳ್ಳಲ್ಲ. ಉದಾಹರಣೆಗೆ “ಕಾಂಗರೂ ಇಲಿ’. ಏನಿದು ಎರಡು ಪ್ರಾಣಿಗಳ ಹೆಸರು ಹೇಳುತ್ತಿದ್ದಾರಲ್ಲ ಎಂದುಕೊಳ್ಳದಿರಿ. ಈ ಜೀವಿಯ ಹೆಸರೇ ಕಾಂಗರೂ ಇಲಿ. ಇಲಿಯ ಪ್ರಭೇದಕ್ಕೆ ಸೇರಿದ್ದರೂ ಈ ಜೀವಿ ಇಲಿಗಳ ಹಾಗೆ ನಾಲ್ಕು ಕಾಲುಗಳಲ್ಲಿ ಓಡುವುದಿಲ್ಲ. ಬದಲಾಗಿ ಕಾಂಗರೂಗಳಂತೆ ಹಿಂಗಾಲುಗಳನ್ನು ಬಳಸಿ ನೆಗೆಯುತ್ತವೆ. ಕಾಂಗರೂ ಇಲಿಗಳ ವಾಸಸ್ಥಾನ ಮರುಭೂಮಿ. ಇವು ಹೆಚ್ಚಾಗಿ ಉತ್ತರ ಅಮೆರಿಕ ಪ್ರದೇಶದಲ್ಲಿ ಕಂಡುಬರುತ್ತವೆ. “ಮರುಭೂಮಿಯ ಹಡಗು’ ಎಂದೇ ಹೆಸರಾದ ಒಂಟೆಗಳನ್ನು ಕಾಂಗರೂ ಇಲಿಗಳು ಓಟದಲ್ಲಿ ಸೋಲಿಸುವುದು ಕಷ್ಟ. ಆದರೆ ಈ ಒಂದು ಪಂದ್ಯದಲ್ಲಿ ಸುಲಭವಾಗಿ ಸೋಲಿಸಬಲ್ಲವು. ಅದು ನೀರು ಕುಡಿಯದೇ ಇರುವ ಪಂದ್ಯ! ಒಂಟೆಗಳು ನೀರಿಲ್ಲದೆ ಎಷ್ಟು ದಿನ ಬದುಕಬಲ್ಲವೋ ಅದಕ್ಕಿಂತ ಹೆಚ್ಚು ಕಾಲ ನೀರಿಲ್ಲದೆ ಇರಬಲ್ಲ ಸಾಮರ್ಥ್ಯ ಇವುಗಳದ್ದು ಎಂದಿದ್ದಾರೆ ಸಂಶೋಧಕರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ವಿಶೇಷಣ ಇದಕ್ಕೆ ಹೆಚ್ಚು ಹೊಂದುತ್ತದೆ.

ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next