ಚಾಮರಾಜನಗರ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು 2015ರ ಜನವರಿಯಲ್ಲಿ ಅನುಷ್ಠಾನಗೊಳಿಸಿದ್ದು ಪೋಷಕರು ಈ ಯೋಜನೆಯ ಖಾತೆ ತೆರೆದು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಅಂಚೆ ಇಲಾಖೆ ಮಹಾ ನಿರ್ದೇಶಕ ಎಂ.ಬಿ.ಗಜ್ ಬಾಯಿ ತಿಳಿಸಿದರು. ತಾಲೂಕಿನ ಕೆಂಪನಪುರ ಸರ್ಕಾರಿ ಶಾಲೆಯಲ್ಲಿ ಅಂಚೆ ಇಲಾಖೆ ನಂಜನಗೂಡು ವಿಭಾಗ, ಚಾಮರಾಜನಗರ ಉಪ ವಿಭಾಗದ ವತಿಯಿಂದ ನಡೆದ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನುಅಂಚೆ ಇಲಾಖೆಯಲ್ಲಿ ಹೆಚ್ಚು ತೆರೆದಿರುವ ಈ ಗ್ರಾಮವನ್ನು “ಸಂಪೂರ್ಣ ಸುಕನ್ಯಾ ಸಮೃದ್ಧಿ ಗ್ರಾಮ ಘೋಷಣೆ’ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರ್ಷಕ್ಕೆ 250 ರೂ.:ಸುಕನ್ಯಾ ಸಮೃದ್ಧಿಹೆಣ್ಣು ಮಕ್ಕಳ ಹೆಸರಿನಲ್ಲಿ ತೆರೆಯಲಾಗುವ ಸಣ್ಣ ಉಳಿತಾಯ ಯೋಜನೆ. ಇನ್ನು ಖಾತೆ ವಂತಿಕೆದಾರರು ವರ್ಷಕ್ಕೆ ಕೇವಲ 250 ರೂ.ಗಳನ್ನು ಪಾವತಿಸಿ ಖಾತೆ ಚಾಲ್ತಿಯಲ್ಲಿಡಬಹುದಾಗಿದೆ. ಈ ಯೋಜನೆಯಡಿ ಓರ್ವ ಪಾಲಕ ಅಥವಾ ಪೋಷಕ ಓರ್ವ ಹೆಣ್ಣು ಮಗುವಿನ ಹೆಸರಲ್ಲಿ ಒಂದು ಖಾತೆ ಅಥವಾ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಎರಡು ಖಾತೆ ತೆರೆಯಲು ಅವಕಾಶವಿದೆ. 2ನೇ ಹೆರಿಗೆ ಸಂದರ್ಭದಲ್ಲಿ ಅವಳಿ ಹೆಣ್ಣು ಮಕ್ಕಳು ಅಥವಾ ಮೊದಲ ಹೆರಿಗೆಯಲ್ಲೇ ತ್ರಿವಳಿ ಹೆಣ್ಣು ಮಕ್ಕಳು ಜನಿಸಿದರೆ 3 ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು ಎಂದು ತಿಳಿಸಿದರು.
ನಂಜನಗೂಡು ಅಂಚೆ ನಿರೀಕ್ಷಕ ಮನುಕುಮಾರ್ ಮಾತನಾಡಿ, ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ಆರಂಭಿಸಿದ ದಿನದಿಂದ 21 ವರ್ಷಗಳವರೆಗೆ ಖಾತೆ ಚಾಲನೆಯಲ್ಲಿರುತ್ತದೆ. ಒಂದು ವೇಳೆ 21ವರ್ಷದ ಪಕ್ವತಾ ಅವಧಿ ನಂತರವೂ ಖಾತೆ ಬಂದ್ ಮಾಡದಿದ್ದಲ್ಲಿ ಖಾತೆಯಲ್ಲಿನ ಹಣಕ್ಕೆ ಆಯಾ ಕಾಲಕ್ಕೆ ನಿರ್ಧರಿತವಾಗುವ ದರದಲ್ಲಿ ಬಡ್ಡಿ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೆಂಪನಪುರ ಗ್ರಾಪಂ ಅಧ್ಯಕ್ಷ ಕೆ.ಎಂ.ಗುರುಸಿದ್ದಪ್ಪ, ಪ್ರತಿಯೊಬ್ಬ ಪೋಷಕರು ನಿಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸುವಾಗಲೇ ಸುಕನ್ಯಾ ಸಮೃದ್ಧಿ ಖಾತೆ ತೆರೆದರೆ ಆ ಮಕ್ಕಳ ಮದುವೆ ಅಥವಾ ಮುಂದಿನ ವಿದ್ಯಾಭ್ಯಾಸಕ್ಕೆ ನೀವು ಖಾತೆಗೆ ಕಟ್ಟಿರುವ ಹಣ ಉಪಯೋಗವಾಗಲಿದೆ ಎಂದು ತಿಳಿಸಿದರು.
ಚಾಮರಾಜನಗರ ಅಂಚೆ ನಿರೀಕ್ಷಕ ಡಿ.ಕೆ. ಮೋಹನ್‌ಬಾಬು ಹಾಗೂ ಟಿ.ನರಸೀಪುರ ಅಂಚೆ ನಿರೀಕ್ಷಕರಾದ ಕೃಷ್ಣದಾಸ್ ಅಂಚೆ ಇಲಾಖೆಯಲ್ಲಿ ಇರುವ ಸೌಲಭ್ಯ ತಿಳಿಸಿಕೊಟ್ಟರು. ರೋಟರಿ ಉಪಾಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ಪಿಕಾರ್ಡ್ ಬ್ಯಾಂಕಿನ ನಿರ್ದೇಶಕರಾದ ಶ್ರೀಕಂಠ ಸ್ವಾಮಿ, ಮುಖ್ಯ ಶಿಕ್ಷಕ ಬಿ.ರೇವಣ್ಣ, ಅಂಚೆ ಮೇಲ್ವಿ ಚಾರಕರಾದ ಬಸವರಾಜಪ್ಪ, ಪುಟ್ಟಸ್ವಾಮಿ, ಕೆಂಪನ
ಪುರ ಬ್ರಾಂಬ್ ಅಂಚೆ ಇಲಾಖೆ ಪೋಸ್ಟ್ ಮಾಸ್ಟರ್ ಸಿ.ಎಂ.ಸೌಮ್ಯಾ, ಪೋಸ್ಟ್ ಮೆನ್ ಎನ್.ಶಂಕರ್, ಸಂತೆಮರಳ್ಳಿ ಉಪ ಅಂಚೆ ಕಚೇರಿ ಎಲ್.ಪೂಜಿತಾ, ಎಚ್.ಆರ್.ಜಯರಾಮು, ಸತೀಶ್, ಚಂದ್ರಶೇಖರ್, ಲೋಕೇಶ್, ಸಿದ್ದರಾಜು, ಶಿವಶಂಕರ್, ನಾಗೇಂದ್ರ ಇದ್ದರು.