Advertisement

ಮೂತ್ರ ಮಾಡಲು ಬಯಲು ಜಾಗವೇ ಗತಿ!

10:25 AM Jun 16, 2019 | Team Udayavani |

ಬೀಳಗಿ: ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆಯ ಹತ್ತಿರ ಮೂತ್ರಾಲಯವಿಲ್ಲದ್ದರಿಂದ ಮಾರ್ಕೆಟಿಗೆ ಬರುವ ವ್ಯಾಪಾಸ್ಥರು ಹಾಗೂ ಸಾರ್ವಜನಿಕರು ಜಲಬಾಧೆ ತೀರಿಸಿಕೊಳ್ಳಲು ಪರದಾಡುವಂತಾಗಿದೆ.

Advertisement

ಗಬ್ಬೆದ್ದು ನಾರುತ್ತಿದೆ: ಕಾಯಿಪಲ್ಲೆ ಮಾರುಕಟ್ಟೆ ಹತ್ತಿರ ಮೂತ್ರಾಲಯವಿಲ್ಲದ ಪರಿಣಾಮ, ಪುರುಷರು, ಮಹಿಳೆಯರು ಮೂತ್ರ ವಿಸರ್ಜನೆಗಾಗಿ ಮಾರ್ಕೆಟಿನ ಬಯಲು ಜಾಗವನ್ನೇ ಆಶ್ರಯಿಸುವುದು ಅನಿವಾರ್ಯವಾಗಿದೆ. ಮೂತ್ರಿ ಮಾಡುವ ಬಯಲು ಜಾಗದ ಬಳಿಯೇ ಇರುವ ಮಹಿಳಾ ವ್ಯಾಪಾರಸ್ಥರು ಈ ಅವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇದೆ ಬಯಲು ಸ್ಥಳದಲ್ಲಿಯೇ ಮೂತ್ರಾಲಯ ನಿರ್ಮಿಸಲಾಗಿತ್ತು. ಇದೀಗ ಈ ಮೂತ್ರಾಲಯವನ್ನು ನೆಲಸಮ ಮಾಡಿ ವರ್ಷವೇ ಗತಿಸಿದೆ. ಆದರೆ, ಪಪಂ ಇದುವರೆಗೂ ಮತ್ತೆ ಮೂತ್ರಾಲಯ ನಿರ್ಮಿಸದೇ ಇರುವ ಕಾರಣ, ಸಾರ್ವಜನಿಕರು ಜಲಬಾಧೆ ತೀರಿಸಿಕೊಳ್ಳಲು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬಯಲು ಮೂತ್ರ ವಿಸರ್ಜನೆಯಿಂದ ಈ ಸ್ಥಳವೂ ಹಂದಿಗಳ ಗೂಡಾಗಿದ್ದು, ಗಬ್ಬೆದ್ದು ನಾರುತ್ತಿದೆ.

ಕಾಯಿಪಲ್ಲೆ ಮಾರುಕಟ್ಟೆ ಸ್ಥಳವೇ ಅವ್ಯವಸ್ಥೆ ತಾಣವಾಗಿ ಪರಿವರ್ತಿತವಾಗಿದ್ದರೂ ಕೂಡ ಪಪಂ ಇಲಾಖೆಯವರು ಗಮನಹರಿಸುತ್ತಿಲ್ಲ.ಸಾರ್ವಜನಿಕರು ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶನಿವಾರ ಸಂತೆಗೆೆ ಆಗಮಿಸುವ ಜನ ಮೂತ್ರ ವಿಸರ್ಜನೆಯ ಅವ್ಯವಸ್ಥೆ ಕಂಡು ಪಪಂಗೆ ಹಿಡಿಶಾಪ ಹಾಕುವಂತಾಗಿದೆ. ಕಾಯಿಪಲ್ಲೆ ಮಾರುಕಟ್ಟೆಯ ಒಂದು ಬದಿಯ ಬಯಲು ಸ್ಥಳದಲ್ಲಿಯೇ ಅನಿವಾರ್ಯವಾಗಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಮಾರುಕಟ್ಟೆಗೆ ಬರುವ ಮಹಿಳೆಯರು ತಲೆತಗ್ಗಿಸಿ ಓಡಾಡುವಂತಾಗಿದೆ.

•ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next