ಚಿಕ್ಕಮಗಳೂರು: ಕೋವಿಡ್‌ನಿಂದ ಬಾಗಿಲು ಮುಚ್ಚಿದ್ದ ಕಿರಿಯ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದ್ದು, ಜಿಲ್ಲೆಯಲ್ಲಿ 20 ತಿಂಗಳ ಬಳಿಕ 724 ಕಿರಿಯ ಪ್ರಾಥಮಿಕ ಶಾಲೆಗಳು ಮತ್ತೆ ಬಾಗಿಲು ತೆರೆದುಕೊಳ್ಳಲಿವೆ. ಅ.25ರಿಂದ ರಾಜ್ಯ ಸರ್ಕಾರ 1ರಿಂದ 5ನೇ ತರಗತಿ ಶಾಲೆಗಳನ್ನು ಆರಂಭಿಸಲು ಚಿಂತನೆ ನಡೆಸಿದ್ದು, ಪುಟಾಣಿಗಳ ಶಾಲಾ ಬ್ಯಾಗ್ ಮತ್ತೇ ಹೆಗಲೆರಲಿದೆ. ಭೌತಿಕ ತರಗತಿಗಳಿಲ್ಲದೆ ಜಡ್ಡು ಹಿಡಿದಿದ್ದ ಪುಟಾಣಿ ವಿದ್ಯಾರ್ಥಿಗಳು ಲವಲವಿಕೆಯಿಂದ ಶಾಲೆಗಳತ್ತ ಹೆಜ್ಜೆ ಇಡಲು ಸಜ್ಜುಗೊಳ್ಳುತ್ತಿದ್ದಾರೆ.
ಜಿಲ್ಲೆಯ 8 ಶೈಕ್ಷಣಿಕ ವಲಯಗಳಲ್ಲಿ ಶಿಕ್ಷಣ ಇಲಾಖೆಯ 669 ಸರ್ಕಾರಿ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ 14 ಶಾಲೆಗಳು, ಅನುದಾನರಹಿತ 41 ಶಾಲೆಗಳು ಬಾಗಿಲು ತೆರೆದು ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಸಜ್ಜಾಗಿವೆ. ಸಂಬಂಧಪಟ್ಟ ಇಲಾಖೆ ಅಧಿ ಕಾರಿಗಳು, ಶಿಕ್ಷಕರು ಶಾಲೆ ಆರಂಭಿಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಬೀರೂರು ಶೈಕ್ಷಣಿಕ ವಲಯದಲ್ಲಿ 107, ಚಿಕ್ಕಮಗಳೂರು 186, ಕಡೂರು 131, ಕೊಪ್ಪ 40, ಮೂಡಿಗೆರೆ 94, ನರಸಿಂಹರಾಜಪುರ 43, ಶೃಂಗೇರಿ 13 ಮತ್ತು ತರೀಕೆರೆ ಶೈಕ್ಷಣಿಕ ವಲಯದಲ್ಲಿ 110 ಶಾಲೆಗಳಿವೆ. ಬೀರೂರು ಶೈಕ್ಷಣಿಕ ವಲಯದಲ್ಲಿ 103 ಸರ್ಕಾರಿ ಶಾಲೆ, ಸಮಾಜ ಕಲ್ಯಾಣ ಇಲಾಖೆ 1ಶಾಲೆ, ಅನುದಾನರಹಿತ 3 ಶಾಲೆಗಳಿವೆ. ಚಿಕ್ಕಮಗಳೂರು ಶೈಕ್ಷಣಿಕ ವಲಯದಲ್ಲಿ 172 ಸರ್ಕಾರಿ, ಸಮಾಜ ಕಲ್ಯಾಣ ಇಲಾಖೆ 1, ಅನುದಾನರಹಿತ 13 ಶಾಲೆಗಳು, ಕಡೂರು ಶೈಕ್ಷಣಿಕ ವಲಯದಲ್ಲಿ 117 ಸರ್ಕಾರಿ ಶಾಲೆ, 2 ಸಮಾಜ ಕಲ್ಯಾಣ ಇಲಾಖೆ, 12 ಅನುದಾನರಹಿತ ಶಾಲೆಗಳನ್ನು ಒಳಗೊಂಡಿವೆ.
ಕೊಪ್ಪ ವಲಯದಲ್ಲಿ 35 ಸರ್ಕಾರಿ ಶಾಲೆ, 3 ಸಮಾಜ ಕಲ್ಯಾಣ, 2 ಅನುದಾನ ರಹಿತ ಶಾಲೆಗಳನ್ನು ಒಳಗೊಂಡಿದೆ. ಮೂಡಿಗೆರೆ ವಲಯದಲ್ಲಿ 88 ಸರ್ಕಾರಿ ಶಾಲೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಅನುದಾನರಹಿತ ತಲಾ 3 ಶಾಲೆಗಳಿವೆ. ನರಸಿಂಹರಾಜಪುರ ಶೈಕ್ಷಣಿಕ ವಲಯದಲ್ಲಿ 37 ಸರ್ಕಾರಿ ಶಾಲೆ, 1 ಸಮಾಜ ಕಲ್ಯಾಣ, 5 ಅನುದಾನರಹಿತ ಶಾಲೆ, ಶೃಂಗೇರಿ ವಲಯದಲ್ಲಿ 12 ಸರ್ಕಾರಿ ಶಾಲೆಗಳನ್ನು ಹೊಂದಿದೆ. ತರೀಕೆರೆ
ವಲಯದಲ್ಲಿ 105 ಸರ್ಕಾರಿ ಶಾಲೆ, 2 ಸಮಾಜ ಕಲ್ಯಾಣ ಇಲಾಖೆ ಹಾಗೂ 3 ಅನುದಾನರಹಿತ ಶಾಲೆಗಳನ್ನು ಹೊಂದಿವೆ.
ಜಿಲ್ಲೆಯಲ್ಲಿ 1ನೇ ತರಗತಿಗೆ 9,038 ವಿದ್ಯಾರ್ಥಿಗಳು ದಾಖಲಾಗಿದ್ದು, 2ನೇ ತರಗತಿಗೆ 7,841 ವಿದ್ಯಾರ್ಥಿಗಳು, 3ನೇ ತರಗತಿ 7,616, 4ನೇ ತರಗತಿ 7,579 ಹಾಗೂ 5ನೇ ತರಗತಿಗೆ 6,952 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಶಾಲೆಗಳಿಗೆ 1ನೇ ತರಗತಿಗೆ 35, 2ನೇ ತರಗತಿಗೆ 41, 3ನೇ ತರಗತಿ 129, 4ನೇ ತರಗತಿಗೆ 158, ಹಾಗೂ 5ನೇ ತರಗತಿಗೆ 211 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಹಾಗೂ ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಗೆ 688, 2ನೇ ತರಗತಿ 610, 3ನೇ ತರಗತಿಗೆ 702, 4ನೇ ತರಗತಿಗೆ 644 ಹಾಗೂ 5ನೇ ತರಗತಿಗೆ 645 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಸದ್ಯ ಕೋವಿಡ್ ಸೋಂಕು ಪ್ರಮಾಣ ಇಳಿಕೆಯಾಗಿದ್ದು, ರಾಜ್ಯ ಸರ್ಕಾರ 1ರಿಂದ 5ನೇ ತರಗತಿ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಭೌತಿಕ ತರಗತಿಗಳಿಂದ ವಂಚಿತರಾಗಿ ಆನ್‌ಲೈನ್ ತರಗತಿಯಿಂದ ಜಡ್ಡುಗಟ್ಟಿದ ವಿದ್ಯಾರ್ಥಿಗಳು ದೂಳು ಹಿಡಿದಿದ್ದ ಬ್ಯಾಗ್ ಹೆಗಲಿಗೆ ಏರಿಸಿಕೊಂಡು ಶಾಲೆಯತ್ತ ಮುಖ ಮಾಡಲು ಸಜ್ಜುಗೊಳ್ಳುತ್ತಿದ್ದಾರೆ. ಇತ್ತ ತರಗತಿಗಳನ್ನು ಆರಂಭಿಸಲು ಶಿಕ್ಷಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಜ್ಜುಗೊಳ್ಳುತ್ತಿದ್ದು ಶಾಲೆಗಳ ಮುಚ್ಚಿದ್ದ ಬಾಗಿಲುಗಳು ಮತ್ತೆ ತೆರೆದುಕೊಳ್ಳುತ್ತಿವೆ.
1ರಿಂದ 5ನೇ ತರಗತಿ ಆರಂಭದ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾಡಿಕೊಳ್ಳಲಾಗುತ್ತಿದೆ. ಕೆಲವು ಶಾಲೆಗಳಲ್ಲಿ ಈಗಾಗಲೇ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಬಿಸಿಯೂಟಕ್ಕೆ ಸಂಬಂಧಿ ಸಿದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅ.25 ರಿಂದ ಶಾಸ್ತ್ರೋಕ್ತವಾಗಿ ಶಾಲೆ ಆರಂಭಗೊಳ್ಳಲಿದೆ.
ಬಿ.ವಿ. ಮಲ್ಲೇಶಪ್ಪ, ಸಾರ್ವಜನಿಕ
ಶಿಕ್ಷಣ ಇಲಾಖೆ ಉಪ ನಿರ್ದೇಶಕ