Advertisement

ಗಂಡುಮಕ್ಕಳು ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ಕಲಿಯುವುದು ಯಾವಾಗ?

06:15 AM Sep 15, 2017 | |

ಮಗು ಹುಟ್ಟಿದಾಗ ಮನೆಯಲ್ಲಿಯೂ ಒಂದು ರೀತಿಯ ಸಂಭ್ರಮದ ವಾತಾವರಣವನ್ನು ಕಾಣುತ್ತೇವೆ. ಇದು ಸಹಜವೇ. ಬದುಕಿನ ಒಂದು ಮುಖ್ಯ ಧ್ಯೇಯವೇ ಸಂತತಿಯನ್ನು ಹುಟ್ಟು ಹಾಕುವುದು ಮತ್ತು ಹೊಸ ಸಮಾಜದೆಡೆಗೆ ನಡೆಯುವುದು. ನಮ್ಮೆಲ್ಲರ ಮೂಲ ಅಡಗಿರುವುದು ಸಂತಾನೋತ್ಪತ್ತಿಯ ತುಡಿತದಲ್ಲಿ. ಈ ಬರಹದಲ್ಲಿ ಎಲ್ಲ ಕನಸುಗಳಿಗೂ ಮೂಲವಾದ ಹುಟ್ಟಿನ ಬಗ್ಗೆ ಮತ್ತು ಹುಟ್ಟಿನಲ್ಲೇ ಕರಟಿಹೋಗುವ ಜೀವಗಳ ನೋವಿನ ಭಾವನೆಯ ಬಗ್ಗೆ ಕೆಲವು ವಿಚಾರಗಳನ್ನು ನಿಮ್ಮ ಮುಂದಿಡಲು ಇಚ್ಛಿಸುತ್ತೇನೆ.

Advertisement

ಹುಟ್ಟು ಎಂಬುದು ಸಂಭ್ರಮ ಎನಿಸುವುದು ಅದು ಹೊಸದಾಗಿರುವುದರಿಂದ. ಹೊಸ ಜೀವದೊಂದಿಗೆ ಹೊಸ ಕನಸುಗಳೂ ಹುಟ್ಟಿಕೊಳ್ಳುತ್ತವೆ. ಮಗುವಿನ ನಗು, ಅದರ ಮುಗ್ಧತೆ, ಅದರ ಚಲನವಲನ, ಅದರ ತೊದಲು°ಡಿ ಮುಖ್ಯವಾಗುತ್ತದೆಯೇ ಹೊರತು ಆ ಮಗುವಿನ ಲಿಂಗ ಅಮುಖ್ಯ. ಮಗು, ಮಗುವೇ ಹೊರತು, ಅದರ ನಗು ಲಿಂಗಕ್ಕನುಗುಣವಾಗಿ ಬದಲಾಗುತ್ತದೆಯೆ? ಯಾವುದೇ ಮಗು ತನ್ನೊಂದಿಗೆ ಮನೆಯಲ್ಲಿ ಹೊಸ ಪುಳಕವನ್ನು ತರುತ್ತದೆ.  ಇದರಲ್ಲಿ ಹೆಣ್ಣು-ಗಂಡು ಎಂಬ ಭೇದವೇಕೆ?  ಲಿಂಗದ ಬಗ್ಗೆ ತಾರತಮ್ಯವೇಕೆ?

ಮಕ್ಕಳ ಲಿಂಗ ತಾರತಮ್ಯ ಇವತ್ತಿನ ದೊಡ್ಡ ತೊಂದರೆಯಾಗಿ ನಿಂತಿದೆ. ಹುಟ್ಟುವ ಮೊದಲೇ ಮಗು ಬೇಡವಾಗುವುದಿದೆ. ಮುಂದೆ, ಇದನ್ನು ಸಾಕಿ ಸಲಹುವುದು ನಿಷ್ಪ್ರಯೋಜಕ ಎಂದು ಹೆಣ್ಣು¡ಮಗುವನ್ನು ಗರ್ಭದಲ್ಲಿಯೇ ಹೊಸಕಿ ಹಾಕುವವರಿದ್ದಾರೆ. ಬಾಲಕಿಯರು ನಾಳೆ ಒಂದು ಹೊಸ ಪ್ರಪಂಚ ಕಟ್ಟುವುದಿಲ್ಲ ಎಂದು ಹೇಗೆ ಹೇಳುವುದು? ಎಲ್ಲರ ಮನೆಯಲ್ಲೂ ಗಂಡು ಮಗುವೇ ಜನಿಸಿದರೆ ಈ ಮನುಷ್ಯ ಕುಲ ಮುಂದುವರಿಯುವುದುಂಟೆ? ಸಮಾಜದ ಮೂಢ ಅರಿವಿನಿಂದಾಗಿ ಈ ದಿನಗಳಲ್ಲಿ ಹೆಣ್ಣುಮಕ್ಕಳ ಸಂತತಿ ಕಡಿಮೆಯಾಗುತ್ತಿದೆ.

ಗಂಡುಮಗುವನ್ನೇ ಬಯಸುವ ದಂಪತಿಯ ನಿಜವಾದ ಆಶಯವೇನು? ತಮ್ಮ ಕುಟುಂಬದ ಹೆಸರು ಉಳಿಸುವ ಗಂಡು ಸಂತಾನ ಬೇಕೆಂದೆ? ಕುಟುಂಬದ ಹೆಸರು ಉಳಿಸುವುದೆಂದರೇನು? ಅದನ್ನು ಹೆಣ್ಣು ಮಗಳು ಕೂಡ ಮಾಡುವುದಿಲ್ಲವೆ? ಗಂಡು ಮಕ್ಕಳು ಮನೆಯಲ್ಲಿಯೇ ಉಳಿಯುತ್ತಾರೆಂದು ಏನು ಗ್ಯಾರಂಟಿ? ಸಮಾಜದಲ್ಲಿ ನಡೆಯುತ್ತಿರುವ ಅವಮಾನಕಾರಿ ಕೃತ್ಯಗಳಿಂದ ತಮ್ಮ ಮಗಳನ್ನು ಕಾಪಾಡಲಾರೆವೆಂಬ ಭೀತಿ ತಂದೆ-ತಾಯಿಗಳಿಗಿದೆಯೆ? ಹಾಗಾಗಿ, ಪರಿಸ್ಥಿತಿಯಿಂದ ಪಲಾಯನಗೈಯುವ ದಾರಿಯಾಗಿ ಹೆಣ್ಣುಭ್ರೂಣವನ್ನು ನಾಶಮಾಡುತ್ತಾರೆಯೆ? ಭ್ರೂಣಹತ್ಯೆ ಕೆಲವೆಡೆ ಸದ್ದಿಲ್ಲದೆ ನಡೆಯುತ್ತದೆ. ಹಾಗೆ ಮಾಡುವವರಿಗೆ ತಂದೆ-ತಾಯಿಗಳಾಗುವ ನೈತಿಕ ಹಕ್ಕಾದರೂ ಇದೆಯೆ?

ಲಿಂಗಾನುಪಾತ ಹೀಗೆ ಕಡಿಮೆ ಆಗುತ್ತ ಹೋದರೆ, ಮುದ್ದಿನ ಗಂಡುಮಗನಿಗಾದರೂ ಭವಿಷ್ಯವಿದೆಯೆ? ಇವತ್ತಿನ ಪ್ರಪಂಚದಲ್ಲಿ ಗಂಡು-ಹೆಣ್ಣು ಇಬ್ಬರೂ ಸಮಾನವಾಗಿ ದುಡಿಯುತ್ತಿದ್ದಾರೆ. ಮನೆಯ “ಕೂಳಿನ ಮಡಕೆ’ ಆಗುವ ಯೋಗ್ಯತೆ ಗಂಡುಹುಡುಗನಿಗಷ್ಟೇ ಅಲ್ಲ , ಹೆಣ್ಣು ಹುಡುಗಿಗೂ ಇದೆ. ಮದುವೆ ಕನ್ಯಾದಾನವಾಗುವ ಕಾಲವಿತ್ತು. ದಾನ ಕೊಟ್ಟದ್ದು ಮರಳಿ ಸಿಗದು ಎಂಬುದು ಇದರ ಅರ್ಥ. ಆದರೆ, ಎರಡು ಜೀವಿಗಳ ಪ್ರೇಮ ಸಂಬಂಧದಲ್ಲಿ ಇಂಥ ದಾನದ ಪ್ರಶ್ನೆಯೇ ಬರುವುದಿಲ್ಲ. ಎಷ್ಟೋ ಕಡೆ ಮದುವೆಯಾದವಳು ಗಂಡನೊಂದಿಗೆ ತವರು ಮನೆಯಲ್ಲಿಯೇ ಉಳಿದು ತಂದೆ-ತಾಯಿಗೆ ಆಶ್ರಯವಾಗುವುದನ್ನು ಕಾಣುತ್ತೇವೆ. 

Advertisement

ಹೆಣ್ಣುಮಕ್ಕಳು ಸಮಾಜದ ಎರಡನೆಯ ಸ್ಥಾನದ ಪ್ರಜೆಗಳಲ್ಲ ಎಂಬುದನ್ನು ಮೊದಲು ಸಾಧಿಸಬೇಕು. ಹೆಣ್ಣುಮಕ್ಕಳು ಸಮಾಜದಲ್ಲಿ ಅನುಭವಿಸುವ ದುರ್ಭರ ಪರಿಸ್ಥಿತಿಯನ್ನು ನಾವು ಬದಲಿಸಬೇಕೇ ಹೊರತು, ಅದಕ್ಕೆ ಅವಳನ್ನೇ ಹೊಣೆಯಾಗಿಸುವುದಲ್ಲ, ಹೀಗೆ ಮಾಡಿದರೆ ಗಂಡುಮಗುವಿನ ಭವಿಷ್ಯಕ್ಕೂ ನಾವೇ ಚಪ್ಪಡಿಗಲ್ಲು ಎಳೆದುಹಾಕುತ್ತಿದ್ದೇವೆ ಎಂಬುದನ್ನು ಮರೆಯಬಾರದು.

ಹೆಣ್ಣನ್ನು ಪುರಾಣ ಕಾಲದಿಂದಲೂ “ಶಕ್ತಿ’ ಎಂದೇ ಪೂಜಿಸುತ್ತ ಬಂದಿದ್ದೇವೆ. ಆದರೆ, ಅದೇ ಶಕ್ತಿ “ಕಂಟಕವಾದೀತು’ ಎಂಬ ಭಯದಿಂದ ಅವಳಿಗರಿವಿಲ್ಲದಂತೆಯೇ ಬೇಡಿಗಳನ್ನು ಆಕೆಗೆ ತೊಡಿಸುತ್ತ ಬಂದಿದ್ದೇವೆ. ತಾತ್ಸಾರ, ಭಯ ಇವೆರಡೂ ಇಲ್ಲದೆ ಕೇವಲ ಪ್ರೀತಿ ಮೂಲವಾದರೆ ಹೊಸ ಸಮಾಜವನ್ನು ಕಟ್ಟುವುದು ಸಾಧ್ಯ. ಇನ್ನೊಬ್ಬರನ್ನು ನೋಯಿಸುವ ಗೊಡ್ಡು ಸಂಪ್ರದಾಯಗಳು ದೂರವಾಗಿ ಪರಸ್ಪರ ಗೌರವಿಸುವಂಥ ಪರಿಸ್ಥಿತಿ ನಿರ್ಮಾಣವಾಗಬೇಕು. ಅಂಥ ಮನೋಸ್ಥಿತಿಯಲ್ಲಿ ಹುಡುಗರನ್ನು ಬೆಳೆಸಬೇಕೇ ಹೊರತು ಅದಕ್ಕೆ ಹೆಣ್ಣುಗಳನ್ನು ದೂರುವುದರಲ್ಲಿ ಅರ್ಥವಿಲ್ಲ.

ಹೆಣ್ಣು ಹುಟ್ಟಿ ಬೆಳೆದು ಇನ್ನೊಂದು ಜೀವಿಗೆ ಬೆಳಕು ನೀಡಬೇಕು. ಅದಕ್ಕೆ ನಮ್ಮ-ನಿಮ್ಮ ಮನೆಯ ಗಂಡು ಮಕ್ಕಳು ಹೆಣ್ಣು ಜೀವವನ್ನು ಗೌರವಿಸುವ, ಪ್ರೀತಿಸುವ ಆವಶ್ಯಕತೆ ಇದೆ. ಸಮಾನತೆಯ ಶಿಕ್ಷಣ ಮನೆಯ ಮೆಟ್ಟಿಲುಗಳಿಂದ ಪ್ರಾರಂಭವಾಗಬೇಕು.
(ಅಂಕಣ ಮುಕ್ತಾಯ)

– ಡಾ. ರಶ್ಮಿ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next