Advertisement
ಇದುವರೆಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ತಜ್ಞರಿಗೆ ವಿಷಯ ನೀಡಿ, ಬಳಿಕ ಅವರು ಸಂಶೋಧನೆ ನಡೆಸಿ ನೀಡಿದ ಕೃತಿಗಳನ್ನು ಪ್ರಕಟಿಸುತ್ತಿತ್ತು. ಆಸಕ್ತರಿಗೆ ಫೆಲೋಶಿಪ್ ನೀಡಿ, ಅವರಿಗೆ ಮಾರ್ಗದರ್ಶಕರನ್ನು ಒದಗಿಸಿ ಹಾಗೂ ಕೃತಿಗಳನ್ನು ಬರೆಸಿ ಹಾಗೂ ಬಿಡಿ ಲೇಖನಗಳನ್ನು ಸಂಪಾದನೆ ಮಾಡಿ ಪುಸ್ತಕ ಪ್ರಕಟಣೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಅಕಾಡೆಮಿ ನೂತನ ಯೋಜನೆ ಮೂಲಕ ಸಂಶೋಧಕರು ತಮ್ಮ ಇಚ್ಛೆಯ ವಿಷಯದ ಕುರಿತು ನಡೆಸಿದ ಸಂಶೋಧನಾತ್ಮಕ ಕೃತಿಗಳನ್ನು ಪ್ರಕಟಿಸಲು ಮುಂದಾಗಿದೆ.
Related Articles
Advertisement
ಫೆ.28ರ ವರೆಗೂ ಅವಕಾಶ: ಯಾವುದೇ ಪದವಿಗೆ ಸಾದರಪಡಿಸಿದ ಸಂಶೋಧನಾತ್ಮಕ ಪ್ರಬಂಧಗಳು 150 ಪುಟಗಳ ಮಿತಿಯೊಳಗೆ ಇದ್ದರೆ ಅಂತಹವುಗಳನ್ನು ಪರಿಶೀಲಿಸಲಾಗುವುದು. ಈ ಕೃತಿಗಳು ಎಲ್ಲಿಯೂ ಪೂರ್ಣವಾಗಿ ಅಥವಾ ಬಿಡಿ ಬಿಡಿಯಾಗಿ ಪ್ರಕಟವಾಗಿರಬಾರದು. ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಕೃತಿಗಳನ್ನು ಕಳುಹಿಸಲು ಆಸಕ್ತರಿಗೆ ಫೆ.28ರವರೆಗೂ ಅವಕಾಶ ನೀಡಲಾಗಿದೆ.
ಪ್ರಬುದ್ಧ ಕೃತಿಗಳಿಗೆ ಮಾನ್ಯತೆ: ಸಾಕಷ್ಟು ಜನ ಸಂಶೋಧಕರು ತಮ್ಮಿಷ್ಟದ ವಿಷಯದ ಕುರಿತು ಅಧ್ಯಯನ ನಡೆಸಿ ಸಂಶೋಧನ ಲೇಖನಗಳನ್ನು ಬರೆದಿರುತ್ತಾರೆ. ಆದರೆ ಅದನ್ನು ಪ್ರಕಟಿಸುವ ಅವಕಾಶವಿರುವುದಿಲ್ಲ. ಅಂತಹ ಸಂಶೋಧಕರ ಮತ್ತು ಪದವೀಧರರ ಕೃತಿಗಳನ್ನು ಪ್ರಕಟಿಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ಈ ಯೋಜನೆ ರೂಪಿಸಿದೆ.
ಸ್ವಯಂ ಆಸಕ್ತಿಯಿಂದ ಮಾಡಿರುವಂತಹ ಸಂಶೋಧನಾತ್ಮಕ ಕಾರ್ಯಗಳು ಹೆಚ್ಚು ಪ್ರಬುದ್ಧವಾಗಿರುತ್ತವೆ. ನಿರ್ದಿಷ್ಟ ವಿಷಯದ ನಿರ್ಬಂಧವಿಲ್ಲದಿರುವುದರಿಂದ ಯಾವುದೇ ಆಂತರಿಕ ಒತ್ತಡವಿಲ್ಲದೆ ಅವು ರೂಪುಗೊಂಡಿರುತ್ತವೆ. ಹೀಗಾಗಿ ಪ್ರಕಟಣೆಗೆ ಅಕಾಡೆಮಿ ತೀರ್ಮಾನಿಸಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಹೇಳಿದರು.
* ಶ್ರುತಿ ಮಲೆನಾಡತಿ