Advertisement
18 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿರುಕುಳ ಮುಂತಾದ ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡಲು ಸೂಚಿಸಿದೆ. ಮಕ್ಕಳಿಗೆ ರಕ್ಷಣೆ, ಭದ್ರತೆ, ನ್ಯಾಯ ಒದಗಿಸಿ, ಅವರ ಆಸಕ್ತಿ, ಹಿತ ಕಾಪಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಸೂಚಿಸಲಾಗಿದೆ. ಕರ್ನಾಟಕ ರಾಜ್ಯ ಮಕ್ಕಳ ರಕ್ಷಣ ನೀತಿ-2016 ಹಾಗೂ ಫೋಕ್ಸೋ ಕಾಯ್ದೆ ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಶಾಲೆಗಳು, ಆಡಳಿತ ಮಂಡಳಿ, ಇಲಾಖೆಗಳು, ಪಾಲಕರು, ಎಸ್‌ಡಿಎಂಸಿ ಸಹಿತ ಎಲ್ಲ ಪಾಲುದಾರರು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಪ್ರಮಾಣೀಕೃತ ಕಾರ್ಯಚರಣ ವಿಧಾನ, ಮಾರ್ಗಸೂಚಿಯನ್ನು ಆಯೋಗವು ಈಗಾಗಲೇ ಒದಗಿಸಿದೆ.
ಶಾಲೆಗಳಲ್ಲಿ ಪ್ರಾರ್ಥನಾ ಸಮಯ, ಬಿಡುವಿನ ವೇಳೆ, ಸಂದರ್ಭ ಅನುಸಾರ ಬೋಧನಾ ಅವಧಿ, ವಿವಿಧ ಸಾಂಸ್ಕೃತಿಕ ಚಟುವಟಿಕೆ, ರಾಷ್ಟ್ರೀಯ ಹಬ್ಬಗಳ ಸಂದರ್ಭ, ಪೋಷಕರ ಸಭೆ, ತಾಯಂದಿರ ಸಭೆ, ಸಮುದಾಯದತ್ತ ಶಾಲೆಯಂತಹ ಕಾರ್ಯಕ್ರಮಗಳಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕೆಂದು ಎಲ್ಲ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ಇಲಾಖೆಯ ಎಲ್ಲ ಶಾಲಾ ಉಸ್ತುವಾರಿ ಮತ್ತು ಮೇಲ್ವಿಚಾರಣ ಅಧಿಕಾರಿಗಳು, ರಾಜ್ಯದ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಈ ಮೂಲಕ ಸೂಚನೆ ಕೊಡಲಾಗಿದೆ.