Advertisement

ನಮ್ಮ ಕಾಲಂ: ಆಲೋಚನೆಗಳು ವಿಷಯಾತೀತ ; ಅಕ್ಷರಕ್ಕಿದೆ ಶಬ್ದಮಿತಿ…

02:27 PM May 31, 2020 | Hari Prasad |

ಈ ಸಂಚಿಕೆಯಲ್ಲಿ ನಾಲ್ವರು ಬರಹಗಾರರು ತಮ್ಮ ಯೋಚನಾ ಲಹರಿಯನ್ನು ಇಲ್ಲಿ ಹರಿಯ ಬಿಟ್ಟಿದ್ದಾರೆ. ಇದೊಂದು ಮುಕ್ತ ಅಂಕಣ. ವಿಷಯಕ್ಕೆ ಯಾವುದೇ ಪರಿಧಿಯಿಲ್ಲ. ಆದರೆ ಶಬ್ದಗಳಿಗೆ ಮಿತಿ ಇದೆ. 200 ಪದಗಳೊಳಗೆ ಲೇಖನವಿರಬೇಕು.

Advertisement

ಕೆಲಸವೆಂಬ ಕನಸಿನ ಕುದುರೆ ಏರಿ
ಜೀವನವೇ ಒಂದು ಉಗಿಬಂಡಿಯಂತೆ. ಅದೆಷ್ಟು ದೂರ ಪಯಣಿಸಬೇಕೆಂದು ಯಾರಿಗೂ ತಿಳಿಯದು. ಜೀವನದ ನಡುನಡುವೆ ಬರುವ ನಿಲ್ದಾಣದಂತೆ ಬಂದು ಹೋಗುವ ಸ್ನೇಹಿತರು. ಪ್ರಯಾಣದಲ್ಲಿನ ನಿಲುಗಡೆಯಂತೆ. ಕಡೆಗೆ ಉಳಿಯುವುದು ಒಂದಷ್ಟು ನೆನಪುಗಳು ಮಾತ್ರ.

ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಜಾರಿದ ಕಣ್ಣೀರ ಹನಿಗಳು ಸ್ನೇಹ ಆರಂಭವಾಗಲು ಒಂದು ಸಣ್ಣ ಕಿರುನಗೆ ಸಾಕು.ನಮ್ಮ ನಮ್ಮಲ್ಲಿ ಪರಸ್ಪರ ಸಹಾಯ ಮಾಡುವ ಮನೋಭಾವ ಎಲ್ಲವೂ ಜೀವನ ದುದ್ದಕ್ಕೂ ಬೇಕು. ಆದರೂ ಸ್ನೇಹ ಎಂಬುದು ಈ ಜಾತಿ, ಅಂತಸ್ತು ನೋಡಿ ಬರುವುದಿಲ್ಲ. ಈ ಮೂಲಕ ಬಂದ ವರು ಹೆಚ್ಚುದಿನ ಉಳಿಯುವುದಿಲ್ಲ.

ನಾವು ಕಾಲೇಜು ಮೆಟ್ಟಿಲು ಹತ್ತಿದಾಗಲೇ ಸಮಾನ ಮನಸ್ಕರ ಯುವ ಸಮೂಹದ ಪರಿಚಯದ ಜತೆಗೆ ನಮ್ಮ ಕನಸುಗಳು ಚಿಗುರಲು ಆರಂಭಿಸಿದವು. ಕಾಲೇಜು ಮುಗಿಯುವಷ್ಟರಲ್ಲಿ ನಾವು ಕನಸಿನ ಮೂಟೆ ಹೊತ್ತು ಉನ್ನತ ವ್ಯಾಸಾಂಗದ ದಾರಿ ಹಿಡಿದಿದ್ದೆವು.

ಬಳಿಕ ಉದ್ಯೋಗವೂ ದೊರೆತು ಸ್ವಲ್ಪ ದಿನವಾಗು ವಷ್ಟರಲ್ಲಿ ವಯಸ್ಸು 25ರ ಸಮೀಪಕ್ಕೆ ಬಂದು ನಿಂತಿತ್ತು. ಸಿಟಿಯಲ್ಲಿ ಕಾಲ ಕಳೆದು ಬೋರ್‌ ಆದಾಗ ಊರ ದಾರಿ ಹಿಡಿದು ಮನೆಗೆ ಬಂದೆ. ಆ ಸಂದರ್ಭ ಅತೀವ ಸಂತಸವಾಗಿತ್ತು. ಬಾಲ್ಯದಲ್ಲಿಯ ಆಟೋಟಗಳಿಗೆ ನೆನಪಿಗೆ ಬರವೇ ಇರಲಿಲ್ಲ.

Advertisement

ನನ್ನ ಸಹಪಾಠಿಯಾಗಿದ್ದ ಗೆಳೆಯನನ್ನ ನೋಡಲು ಅವನ ಮನೆಯತ್ತ ಹೆಜ್ಜೆ ಹಾಕಿದೆ. ಆದರೆ ಅವನಿರಲಿಲ್ಲ. ಅವನ ಮಕ್ಕಳ ತುಂಟಾಟಗಳ ಸದ್ದು ತುಂಬಿತ್ತು. ಗೆಳೆಯನ ಬಗ್ಗೆ ವಿಚಾರಿಸಿದಾಗ ಅವನು ಇಹಲೋಕ ತ್ಯಜಿಸಿದ ಸುದ್ದಿ ತಿಳಿಯಿತು. ಬೇಸರದಿಂದ ಮನೆಯತ್ತ ಹೆಜ್ಜೆಹಾಕಿದೆ.

ಈ ದಾರಿಯಲ್ಲಿ ನನ್ನ ಮೆದುಳು 20 ವರ್ಷ ಹಿಂದಕ್ಕೆ ಓಡಿತು. ನಾನು ಮತ್ತು ಗೆಳೆಯ ಸಂಗಮೇಶ ಇಬ್ಬರೂ ಕಾಲೇಜಿನಲ್ಲಿದ್ದಾಗ ದೊಡ್ಡ ದೊಡ್ಡ ಕನಸುಗಳನ್ನು ಕಂಡಿದ್ದೆವು. ಆದರೆ ಅವನು ಅಕಾಲಿಕ ಸಾವಿಗೆ ಬಲಿಯಾಗಿದ್ದ. ನಾನು ಮರುದಿನ ಕೆಲಸಕ್ಕೆ ಹೋಗಬೇಕಿತ್ತು. ಆದರೆ ನನಗೆ ಕೆಲಸದ ಅವಶ್ಯಕತೆ ಇರಲಿಲ್ಲ.

ಅಪ್ಪಾ ಬೆವರು ಸುರಿಸಿ ಸಂಪಾದಿಸಿದ್ದ ಹೊಲ ತೋಟಗಳನ್ನ ನೋಡಿಕೊಂಡು ಒಬ್ಬ ಸರಕಾರಿ ಅಧಿಕಾರಿಗಿಂತ ಚೆನ್ನಾಗಿಯೇ ಜೀವನ ನಡೆಸಬಹುದಾಗಿತ್ತು. ಆದರೆ ನಗರದ ಮೊಹಕ್ಕೆ ಸಿಕ್ಕು ನಾನು ಕೃಷಿಯನ್ನು ತಿರಸ್ಕರಿಸಿ ಕಂಪೆನಿಯೊಂದರಲ್ಲಿ 30 ಸಾವಿರ ರೂ. ಸಂಬಳದ ಕೆಲಸವನ್ನು ಕಷ್ಟಪಟ್ಟು ದಕ್ಕಿಸಿಕೊಂಡಿದ್ದೆ.

ಹೊಲದಲ್ಲಿ ಅಂದು ಅಪ್ಪ ಆಡಿದ ಮಾತುಗಳು ನೆನಪಾದವು. ಕೃಷಿ, ಹಳ್ಳಿಯ ಶ್ರೇಷ್ಠತೆಯನ್ನು ನಗರದ ದುರಂತವನ್ನು ನನಗೆ ವಿವರಿಸಿ ಹೇಳಿದ್ದರು. ಆದರೆ ನಾನು ಅವರ ಮಾತಿಗೆ ಕಿವಿ ಕೊಡದೆ ಅವರ ಮಾತುಗಳನ್ನ ಮೀರಿ; ನಾನು ಕಂಡ ಕನಸುಗಳ ಕೆಲಸ ನಿರ್ವಹಿಸುತ್ತಿದ್ದೆ.

ತತ್‌ಕ್ಷಣ ಮನಸ್ಸು ಬದಲಿಸಿದೆ. ಸಾಕಿ ಸಲುಹಿದ ಅಪ್ಪ – ಅಮ್ಮನ ಮಾತು ಅರಿವಿಗೆ ಬಂದು ಊರಲ್ಲೇ 10 ಎಕ್ರೆ ಜಮೀನು ಹೊಂದಿ ಕೃಷಿಯಲ್ಲಿ ಸಾಧನೆ ಮಾಡಿದ್ದೇನೆ ಯಶಸ್ವಿ ಕೃಷಿಕನಾಗಿದ್ದೇನೆ. ಈಗ ನನ್ನ ಬಳಿ ಎಲ್ಲವೂ, ಎಲ್ಲರೂ ಇದ್ದಾರೆ ಆದರೆ ಗೆಳೆಯನನ್ನ ಬಿಟ್ಟು.


– ಪ್ರಶಾಂತ ಹೂಗಾರ, ವಿಜಯಪುರ

ಅಮ್ಮಂದಿರ ಬಗೆಗೆ ಬರೆದಷ್ಟು ಕಡಿಮೆಯೇ
ದೇವರ ಕೋಣೆಯಲ್ಲಿ ದೀಪ ಬೆಳಗ್ತಾ ಇದ್ದೆ. ಕಡ್ಡಿಗೀರಿ ಎಣ್ಣೆಯಲ್ಲಿ ಒದ್ದೆಯಾದ ಬತ್ತಿಗೊಂದು ಬೆಳಕು ತುಂಬುತ್ತಿದ್ದರೆ ಏಕದಂತ ಗಣೇಶ ಪಾರ್ವತಿ ಮಡಿಲಲ್ಲಿ ಹಾಯಾಗಿ ಕುಳಿತಿದ್ದ. ಶಿವ ನನ್ನೆಡೆಗೆ ದೃಷ್ಟಿ ಬೀಳುವಂತೆ ನೋಡುತ್ತಿದ್ದರೆ ಲಕ್ಷ್ಮೀ, ಸರಸ್ವತಿ, ಹನುಮಂತ ಹೀಗೆ ಎಲ್ಲ ದೇವರು ನಾನು ದೀಪ ಬೆಳಗೋದನ್ನು ಕಾಯುತ್ತಿದ್ದರು.

ಬಳಿಕ ಅಮ್ಮ ಬಡಿಸಿದ ನೀರು ದೋಸೆ ತಟ್ಟೆಯಲ್ಲಿ ನನಗಾಗಿ ಕಾಯುತ್ತಿತ್ತು. ಲಗುಬಗೆಯಿಂದ ಗಂಟಲೊಳಗೆ ತುರುಕಿಕೊಂಡು ಎದ್ದು ಕಾಲೇಜು ಕಡೆ ಹೊರಟೆ. ಅಂದು ಅಮ್ಮನ ಹುಟ್ಟು ಹಬ್ಬ. ಹಳದಿ ಬಣ್ಣದ ಬಟ್ಟೆಯಿಂದ ಆಕೆಯ ರೂಪವು ಇನ್ನೂ ಚೆನ್ನಾಗಿ ಕಾಣುತ್ತಿತ್ತು. ಊರಿನ ಪಕ್ಕದಲ್ಲಿರುವ ದೇವಸ್ಥಾನವನ್ನು ಮುಂಜಾನೆ ಪ್ರವೇಶಿಸಿದ್ದರು. ದೇಗುಲ ಪ್ರವೇಶಿಸಿದ್ದಕ್ಕೆ ಹಣೆಯಲ್ಲಿರುವ ಚಂದನ ಸಿಂಧೂರವೇ ಸ್ಪಷ್ಟವಾಗಿ ಸಾಕ್ಷಿ ಹೇಳುತ್ತಿತ್ತು. ತನ್ನೆಲ್ಲ ನೋವುಗಳನ್ನು ಮರೆತು ಆ ಘಳಿಗೆಯಲ್ಲಿ ಖುಷಿ ಪಡೋ ವ್ಯಕ್ತಿತ್ವ ಇರುವವಳು ಅಮ್ಮ ಮಾತ್ರ. ಹೌದು ತಾಯಿ ಎಂಬ ಎರಡಕ್ಷರದ ಅದ್ಭುತವೆ ಹಾಗೆ.

ತನ್ನ ಮಕ್ಕಳು, ತನ್ನ ಸಂಸಾರ, ಇವೆಲ್ಲದರ ಒಳಿತಿಗಾಗಿ ಅಕೆ ತನ್ನ ಜೀವನವನ್ನು ತ್ಯಾಗ ಮಾಡುತ್ತಾಳೆ. ತನ್ನ ಹೊಟ್ಟೆ ಹಸಿವಿನಿಂದ ಕಂಗೆಟ್ಟರೂ ಸರಿಯೇ, ಆದ್ರೆ ತನ್ನವರು ಯಾರು ಹಸಿವಿನಿಂದ ಕಂಗೆಡಬಾರದು ಎಂಬುದು ಅವಳ ಅಂತರ್ಯ. ಇದು ಒಂದು ರೀತಿಯಲ್ಲಿ ಅಕೆಗೆ ಶಾಪವೋ, ನಮಗೆ ವರವೋ ಎಂಬುದನ್ನು ನಾವು ತಿಳಿದಿಲ್ಲ. ಆಕೆ ಅದನ್ನು ನಮ್ಮೆದುರು ಎಂದಿಗೂ ತೋರ್ಪಡಿಸಿಕೊಂಡಿಲ್ಲ. ಇರೋದನ್ನು ತನ್ನ ಸಂಸಾರಕ್ಕೆ ತ್ಯಾಗ ಮಾಡಿ ಜೀವನದ ತುಂಬೆಲ್ಲ ನಗಿಸುತ್ತಾ, ನಗುತ್ತಾ ಖುಷಿಯಾಗಿ ಬದುಕಿನ ಇಳಿ ಸಂಜೆಯನ್ನು ಕಳೆಯುತ್ತಾಳೆ.

ಪ್ರಸ್ತುತ ಜಗತ್ತು ತುಂಬಾ ಬದಲಾಗಿದೆ. ಆದರೆ ತಾಯಿಯ ಮಮತೆ, ಆಕೆಯ ವಾತ್ಸಲ್ಯ, ಮಾನವೀಯತೆ ಇವೆಲ್ಲ ಬದಲಾಗಿಲ್ಲ, ಯಾವತ್ತೂ ಬದಲಾಗಲ್ಲ. ಏಕೆಂದರೆ ಆಕೆಯು ಒಂದು ಬಾರಿ ನಿರ್ಧಾರ ಮಾಡಿದರೆ ಅದೇ ಅಂತಿಮ. ಬದುಕಿನ ಜನ ಸಂತೆಯ ಈ ಚಕ್ರದಲ್ಲಿ ಉಸಿರಿರೋವರೆಗೂ ನಮಗಾಗಿ ಬದುಕುವ ಜೀವವೊಂದಿದ್ದರೆ ಅದು ನಮ್ಮ ಕಣ್ಣ ಮುಂದೆ ದೇವತೆಯಂತಿರುವ ತಾಯಿ. ನಾವು ತಪ್ಪು ಮಾಡಿದರೂ ಕ್ಷಮೆ ಇರಲಮ್ಮ ಎಂದರೆ ಸಾಕು, ಆಕೆ ಮಂಜಿನಂತೆ ಕರಗಿ ನಮ್ಮ ತಪ್ಪನ್ನು ಕ್ಷಮಿಸುತ್ತಾಳೆ. ಮತ್ತಷ್ಟೂ ಒಲುಮೆಯನ್ನು ನೀಡುತ್ತಾಳೆ. ಆಕೆಯ  ಬಗೆಗೆ ಎಷ್ಟು ಬರೆದರೂ ಅದು ಕಡಿಮೆಯೇ. ಜಗತ್ತಿಗಿಂತ ವಿಸ್ತಾರ ಅವಳು.


– ನವೀನ್‌ ಗೌಡ, ಕಾಯರ್ತಡ್ಕ

ಶಿಕ್ಷಕ ವೃತ್ತಿಗೆ ಒಂದು ಸಲಾಂ
ಒಂದು ಪ್ರಬುದ್ಧವಾದ ಸಮಾಜದ ನಿರ್ಮಾಣದಲ್ಲಿ ಅನೇಕರ ಪಾತ್ರವಿದೆ. ಅದರಲ್ಲೂ ವಿಶೇಷವಾಗಿ ಒಬ್ಬ ಶಿಕ್ಷಕನ ಪಾತ್ರ ಬಹಳ ಮುಖ್ಯ. ಏನೂ ಅರಿಯದ ಕಂದಮ್ಮನಿಗೆ ಅ, ಆ, ಇ, ಈ ಇಂದ ಆರಂಭಿಸಿ ಇ, ಇ+, ಜಾವಾ ಹೀಗೆ ಭಾಷೆಗಳ ತನಕ, ಒಂದು ಎರಡು ಬಾಳೆಲೆ ಹರಡು ಎಂಬ ಲೆಕ್ಕದ ಪದ್ಯದಿಂದ ಆರಂಭಿಸಿ ಕೋಟಿಗಟ್ಟಲೆ ವ್ಯವಹಾರದ ಲೆಕ್ಕಾಚಾರ ಮಾಡುವ ವರೆಗಿನ ಸಾಧನೆಗಳಲ್ಲಿ ಶಿಕ್ಷಕನ ಪಾಲು ಅಗಾಧ.

ಸಣ್ಣ ಬೇಸರದ ಸಂಗತಿಯೆಂದರೆ, ಇತ್ತೀಚಿನ ದಿನಗಳಲ್ಲಿ ಯಾಕೋ ಜನರಲ್ಲಿ ಶಿಕ್ಷಕ ವೃತ್ತಿಯ ಬಗ್ಗೆ ಸ್ವಲ್ಪ ತಾತ್ಸಾರದ ಮನೋಭಾವ ತಾಳಿದ್ದಾರೆ. ನಮಲ್ಲಿ ಇನ್ನೂ ಅಳಿಸಲಾಗದೇ ಇರುವ ಮೂಢನಂಬಿಕೆಯೊಂದಿದೆ. ಎಂಜಿನಿಯರ್‌ ಅಥವಾ ಡಾಕ್ಟರ್‌ ಓದಿದ ಅಂದರೆ ಅವರು ವಿಶೇಷ ಸಾಧನೆ ಮಾಡಿದ ಹಾಗೆ. ಈ ಪಟ್ಟಿಗೆ ಇತ್ತೀಚಿಗೆ ಸಿ.ಎ. ಕೂಡ ಸೇರ್ಪಡೆಯಾಗಿದೆ.

ಓದು ಮುಗಿಸಿದ ಕೆಲವೇ ಕೆಲವು ದಿನಗಳಲ್ಲಿ ಬಹು ರಾಷ್ಟ್ರೀಯ ಕಂಪೆನಿ (ಎಂಎನ್‌ಸಿ)ಯಲ್ಲಿ ಕೆಲಸ, ಮತ್ತೂಂದು ವರ್ಷದಲ್ಲಿ ಮದುವೆ, ಓಡಾಡಲೊಂದು ಕಾರು, ಹಾಗೇ ಬೆಂಗಳೂರಲ್ಲೊಂದು ಮನೆ, ಪ್ಲಾಟ್‌ ಇಷ್ಟಾದರೆ ಆಕಾಶಕ್ಕೆ ಮೂರೇಗೇಣು. ಹಾಗೆಂದು ಈ ಸಾಧನೆ ಖಂಡಿತವಾಗಿಯೂ ಸುಲಭದ್ದಲ್ಲ, ಪ್ರಶಂಸೆಗೆ ಅವರು ಅರ್ಹರೇ.

ಅಂತೆಯೇ ಹಳ್ಳಿಯ ಯಾವುದೋ ಊರಲ್ಲಿದ್ದು ಒಂದು ಶಾಲೆಯ ಶಿಕ್ಷಕನಾಗಿಯೋ, ಕಾಲೇಜಿನ ಪ್ರಾಧ್ಯಾಪಕನಾಗಿಯೋ ಕೆಲಸ ಮಾಡುವುದೂ ಕೂಡ ಅಂದುಕೊಂಡಷ್ಟು ಸುಲಭವಲ್ಲ. ಒಬ್ಬ ವ್ಯಕ್ತಿಯ ಭವಿಷ್ಯ ಮತ್ತು ವ್ಯಕ್ತಿತ್ವ ನಿರ್ಮಾಣದ ಜವಾಬ್ದಾರಿಯನ್ನು ಹೆತ್ತವರ ಜತೆಗೆ ಹೊರುವವನು ಶಿಕ್ಷಕ. ಬಾಹ್ಯವಾಗಿ ನೋಡಿದರೆ ಶಿಕ್ಷಕನ ಕೆಲಸ ತುಂಬಾ ಸುಲಭ. ಬೆಳಗ್ಗೆ ಒಂಭತ್ತರಿಂದ ಆರಂಭ, ನಾಲ್ಕಕ್ಕೋ ಐದಕ್ಕೋ ಮುಕ್ತಾಯ ಮಧ್ಯದಲ್ಲಿ ಎರಡೋ ಇಲ್ಲ ಮೂರು ಘಂಟೆಯ ತರಗತಿಗಳು. ಆದರೆ ಆಂತರಿಕವಾಗಿ ಗಮನಿಸಿದರೆ ಅದು ಒಂದು ಪರಿಶ್ರಮದ ಕೆಲಸ ಜತೆಗೆ ಬಹಳ ಜವಾಬ್ದಾರಿಯುತ ಕೆಲಸವೂ ಹೌದು.

ನನ್ನ ಪ್ರಕಾರ ಬೇರೆ ಯಾವುದೇ ವೃತ್ತಿಯನ್ನು ಯಾರು ಬೇಕಾದರೂ ಮಾಡಬಹುದು. ಸ್ವಲ್ಪ ಕಷ್ಟವಾದರೆ ಒಂದಷ್ಟು ಸಮಯ ತರಬೇತಿ ಕೊಟ್ಟು ಆ ಕೆಲಸವನ್ನು ಮಾಡಿಸಬಹುದು. ಆದರೆ ಇನ್ನೊಬ್ಬರಿಗೆ ಅರ್ಥವಾಗುವ ರೀತಿಯಲ್ಲಿ ಕಲಿಸುವುದು ಒಂದು ವಿಶಿಷ್ಟವಾದ ಗುಣ. ಅದು ಕೆಲವರಲ್ಲಿ ಮಾತ್ರ ಇರುತ್ತದೆ. ಮನಸ್ಸಿನಲ್ಲಿ ತಾನು ಒಬ್ಬ ಉತ್ತಮ ಶಿಕ್ಷಕನಾಗಬೇಕೆಂಬ ಇಂಗಿತ ಮಾತ್ರ ಅವರನ್ನು ಆ ಕ್ಷೇತ್ರದಲ್ಲಿ ಉಳಿಸಿಕೊಳ್ಳುತ್ತದೆ. ಒಂದು ಶಿಕ್ಷಕ ವೃತ್ತಿಯು ಸಂಪಾದಿಸುವಷ್ಟು ಪ್ರೀತಿಯನ್ನು ಬೇರೆ ಯಾವ ವೃತ್ತಿಯೂ ಗಳಿಸಿಕೊಡಲಾರದು. ಆ ವಿದ್ಯಾರ್ಥಿಗಳು ಕೊಡುವ ಪ್ರೀತಿಗೆ ಬೆಲೆ ಕಟ್ಟಲೆಂದೂ ಸಾಧ್ಯವಿಲ್ಲ.


– ಗಣೇಶ ಹೆಗಡೆ, ಬೆಂಗಳೂರು

ಪತ್ರಿಕಾ ಮಾಧ್ಯಮದತ್ತ ಹೊರಳಿದ ಮನಸ್ಸು
ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವುದಾದರೂ ವಿಷಯದಲ್ಲಿ ಆಸಕ್ತಿ ಮೂಡ‌ಲು ಮಾರ್ಗದರ್ಶನದ ಜತೆಗೆ ಪ್ರೇರಣೆಯೂ ಅತೀ ಮುಖ್ಯ. ‘ಪೆನ್ನು ಎಂಬುದು ಖಡ್ಗಗಿಂತ ಹರಿತ’ಎಂಬ ಒಂದು ಸಣ್ಣ ವಾಕ್ಯವು ನನ್ನ ಜೀವನದಲ್ಲಿ ನಾನು ಪತ್ರಿಕೋದ್ಯಮದತ್ತ ಬರಲು ಕಾರಣವಾಗಿದೆ.

ಪತ್ರಕರ್ತರ ವಾಕ್‌ ಚಾತುರ್ಯ ಬರವಣಿಗೆ ಶೈಲಿ, ಒಂದು ಸನ್ನಿವೇಶವನ್ನು ವಿಮರ್ಶಿಸುವ ಬಗೆ ನನಗೆ ಆಪ್ತ ಎನಿಸಿತು. ಇದರಿಂದ ನಾನೂ ಪತ್ರಿಕೋದ್ಯಮ ವ್ಯಾಸಂಗ ಮಾಡಬೇಕೆನ್ನುವ ಒಲವು ಮೂಡಿತು. ಅಲ್ಲದೆ ಪತ್ರಿಕೋದ್ಯಮ ಎನ್ನುವುದು ಸಣ್ಣ ಕೆಲಸವಲ್ಲ. ಸಮಾಜದ ಕೊಳಕು, ಕೆಟ್ಟ ವಿಷಯವನ್ನು ಹೊರ ತೆಗೆಯುವ ಕರ್ತವ್ಯ. ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಏನಾದರೂ ಒಳಿತನ್ನು ಮಾಡಬಹುದು ಎಂಬುದನ್ನು ಸಾಧಿಸಿ ತೊರಿಸುವ ಪತ್ರಕರ್ತರಿಂದ ಇಂದು ನಾನು ಪತ್ರಿಕೋದ್ಯಮದತ್ತ ಆಕರ್ಷಿತಗೊಂಡೆ.

ಸುಬ್ರಹ್ಮಣ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾಲೇಜಿನಿಂದ ಪತ್ರಕರ್ತರಾಗಿ ಭೇಟಿ ನೀಡಿದಾಗ ನಮಗೆ ಸಿಕ್ಕ ಗೌರವ ಮರೆಯಲು ಸಾಧ್ಯವಿಲ್ಲ ಅಲ್ಲದೆ ಆಗ ನನಗೆ ತಿಳಿದ ವಿಷಯವೇನೆಂದರೆ ಒಬ್ಬ ಪತ್ರಕರ್ತನಾದವನಿಗೆ ಸಮಾಜದಲ್ಲಿ ನಡೆಯುವ ಆಗು ಹೋಗುಗಳ, ಸಾರ್ವಜನಿಕರಿಗೆ ಪ್ರಸ್ತುತ ಸ್ಥಿತಿ-ಗತಿಯನ್ನು, ಏಳಿಗೆಯನ್ನು ತಿಳಿಸಿಕೊಡುವವರು ಪತ್ರಕರ್ತರಿಗೆ ಮಾತ್ರ ಎಂಬ ಮಹೋನ್ನತ ಪಟ್ಟವನ್ನು ಹೊತ್ತಿದ್ದಾರೆ ಎಂಬುದು ತಿಳಿಯಿತು.

ನಾನು ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡ ಮೇಲೆ ಬರವಣಿಗೆ ಶೈಲಿಯ ಮೂಲಕ ಕೆಲವು ಜನರು ಗುರುತಿಸುವ ರೀತಿ ಬದಲಾಗಿದೆ. ಈ ಕ್ಷೇತ್ರ ಆಯ್ಕೆ ಮಾಡಲು ಮೂಲ ಉದ್ದೇಶವೇ ನನ್ನ ಕೈಯ ಲ್ಲಾದಷ್ಟು ಸಮಾಜದ ಕೆಟ್ಟ ವಿಚಾರವನ್ನು ಹೊರ ತೆಗೆ ದು ಜನರಿಗೆ ಒಳಿತನ್ನು ಮಾಡುವ ಉದ್ದೇಶದಿಂದ ಆಯ್ದಕೊಂಡೆ.


– ಕೀರ್ತಿ ಪುರ, ಸಂತ ಫಿಲೋಮಿನಾ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next