ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ| ವಿ.ಬಿ. ದಾನಮ್ಮನವರ ಅಧ್ಯಕ್ಷತೆಯಲ್ಲಿ ಜರುಗಿದ ವಿಜಯಪುರ ಮಹಾನಗರ ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯ ನಡೆಯಿತು.
ಪಾಲಿಕೆಯ ಗಾಂಧಿ ಚೌಕ್ ಹತ್ತಿರ ನಡೆದ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಆರಂಭದಲ್ಲಿಯೇ ವಾಣಿಜ್ಯ ಮಳಿಗೆಗಳ ಪೈಕಿ ಮಳಿಗೆ ನಂ.4ಗೆ 47.10 ಲಕ್ಷ ರೂ.ಗೆ ಪಾಲಿಕೆ ಇತಿಹಾಸದಲ್ಲಿ ಅತಿ ಹೆಚ್ಚು ಬಿಡ್ ಎಂದು ಯಶಸ್ವಿಯಾಗಿ ದಾಖಲಾಯಿತು.
ಪಾಲಿಕೆ ವಾಣಿಜ್ಯ ಸಂಕೀರ್ಣಗಳಲ್ಲಿ ಒಟ್ಟು 54 ಮಳಿಗೆಗಳ ಹರಾಜು ಪ್ರಕ್ರಿಯೆ ಜರುಗಿಸಲಾಯಿತು. ಸರ್ಕಾರದ ಸುತ್ತೋಲೆಯನ್ವಯ ಒಟ್ಟು ಮಳಿಗೆಗಳಲ್ಲಿ ಶೇ. 18ರಂತೆ ಲೆಕ್ಕ ಹಾಕಿ 9 ಮಳಿಗೆಗಳನ್ನು ಪ.ಜಾ ಮತ್ತು ಪ.ಪಂ ಬಿಡ್‌ದಾರರಿಗೆ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ ಬಿಡ್‌ದಾರರಿಗೆ ನೀಡಲಾಯಿತು ಹಾಗೂ ವಿಕಲಚೇತನರಿಗೆ ಮೀಸಲಿಟ್ಟ ಒಂದು ಮಳಿಗೆಯನ್ನು ಲಾಟರಿ ಮುಖಾಂತರ ಜಿಲ್ಲಾಧಿಕಾರಿಗಳು ಹಂಚಿಕೆ ಮಾಡಿದರು.
ಹರಾಜು ಪ್ರಕ್ರಿಯೆಯಲ್ಲಿ 30 ಮಳಿಗೆಗಳನ್ನು ಹರಾಜು ಮಾಡಲಾಗಿದ್ದು, 7 ಮಳಿಗೆಗಳಿಗೆ ಸಿಂಗಲ್ ಬಿಡ್ ಸಲ್ಲಿಕೆಯಾಗಿದ್ದರಿಂದ ಹರಾಜು ಪ್ರಕ್ರಿಯೆ ಮುಂದೂಡಲಾಯಿತು. 16 ಮಳಿಗೆಗಳಿಗೆ ಯಾವುದೇ ಅರ್ಜಿಗಳು ಬರದ ಕಾರಣ ಮತ್ತೊಮ್ಮೆ ದಿನಾಂಕ ನಿಗದಿಪಡಿಸಲು ನಿರ್ಧರಿಸಲಾಯಿತು. 1 ಮಳಿಗೆಯನ್ನು ನ್ಯಾಯಾಲಯದ ಆದೇಶದಂತೆ ಕಾಯ್ದಿರಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಸದರಿ ಹರಾಜು ಪ್ರಕ್ರಿಯೆಲ್ಲಿ ಪಾಲಿಕೆಯು ಒಟ್ಟು 393.5 ಲಕ್ಷ ರೂ.ಗಳ ಮೊತ್ತವನ್ನು ಸಂಗ್ರಹಿಸಿತು. ಹರಾಜು ಪ್ರಕ್ರಿಯೆಯಲ್ಲಿ ಪಾಲಿಕೆ ಆಯುಕ್ತರಾದ ವಿಜಯ ಮಕ್ಕಳಕಿ, ಉಪ ಆಯುಕ್ತರಾದ ಮಹಾವೀರ ಬೋರಣ್ಣವರ, ಪಾಲಿಕೆ ವಲಯ ಆಯುಕ್ತರಾದ ಸಿದ್ದಪ್ಪಾ ಮಹಾಜನ, ಕಂದಾಯ ಅಧಿಕಾರಿ ರವೀಂದ್ರ ಶಿರಶ್ಯಾಡ, ಕೆ.ಎ.ಲೈನ್ ಹಾಗೂ ವಾಣಿಜ್ಯ ಮಳಿಗೆಗಳ ವಿಷಯ ನಿರ್ವಾಹಕರಾದ ಜೆ.ವಿ.ಕಾಂಬಳೆ ಮತ್ತು ಎನ್.ಆರ್.ಶೆಟಗಾರ ಸೇರಿದಂತೆ ಪಾಲಿಕೆ ಅಧಿಕಾರಿಗಳು ಇದ್ದರು.