ಸ್ಯಾನ್‌ಫ್ರಾನ್ಸಿಸ್ಕೋ: ನಾಟಕೀಯ ಬೆಳವಣಿಗೆಯಲ್ಲಿ ಓಪನ್ ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಯಾಗಿ ಸ್ಯಾಮ್ ಆಲ್ಟ್ಮನ್ ಅವರು ವಾಪಸಾದ ಬೆನ್ನಲ್ಲೇ, ಅವರು ತಮ್ಮನ್ನು ವಜಾ ಮಾಡಿದ್ದ ಇಡೀ ಆಡಳಿತ ಮಂಡಳಿಯನ್ನೇ ಕಿತ್ತುಹಾಕಿ ಆದೇಶ ಹೊರಡಿಸಿದ್ದಾರೆ!
ವಿಶೇಷವೆಂದರೆ, ಆಲ್ಟ್ಮನ್ ಹೊಸ ಆದೇಶದಿಂದಾಗಿ ವಜಾಗೊಂಡ ಆಡಳಿತ ಮಂಡಳಿಯಲ್ಲಿ ಉಳಿದಿರುವ ಏಕೈಕ ವ್ಯಕ್ತಿಯೆಂದರೆ, ಪ್ರಶ್ನೋತ್ತರ ಸೈಟ್ ಕೋರಾದ ಸಿಇಒ ಆಗಿರುವ ಆ್ಯಡಂ ಡಿ ಏಂಜೆಲೋ. ಇವರೊಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಆಡಳಿತ ಮಂಡಳಿಯಿಂದ ಹೊರನಡೆದಿದ್ದಾರೆ. ಆದರೆ, ಆಲ್ಟ್ಮನ್ ಅವರಾಗಲೀ, ಸಂಸ್ಥೆಯ ಸ್ಥಾಪಕ ಗ್ರೆಗ್ ಬ್ರೋಕ್‌ಮನ್ ಆಗಲೀ ಆಡಳಿತ ಮಂಡಳಿಗೆ ಸೇರ್ಪಡೆಯಾಗಿಲ್ಲ. ಶೀಘ್ರದಲ್ಲೇ ಮಂಡಳಿಗೆ 6 ಹೆಚ್ಚುವರಿ ಸದಸ್ಯರನ್ನು ಸೇರಿಸಲಾಗುತ್ತದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
“ನಾನು ಓಪನ್ ಎಐಯನ್ನು ಪ್ರೀತಿಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ ನಾನು ಏನೇ ಮಾಡಿದ್ದರೂ ಅದು ಈ ತಂಡ ಮತ್ತು ಅದರ ಉದ್ದೇಶವನ್ನು ಉಳಿಸಿಕೊಳ್ಳುವುದಕ್ಕೋಸ್ಕರ’ ಎಂದು ಆಲ್ಟ್ಮನ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಕಳೆದು ಶುಕ್ರವಾರವಷ್ಟೇ ಯಾವುದೇ ಕಾರಣವನ್ನು ತಿಳಿಸದೇ ಕಂಪನಿಯ ಆಡಳಿತ ಮಂಡಳಿಯು ಏಕಾಏಕಿ ಚಾಟ್‌ಜಿಪಿಟಿ ಜನಕ ಆಲ್ಟ್ಮನ್‌ರನ್ನು ವಜಾ ಮಾಡಿತ್ತು. ಇದು ಇಡೀ ಕಂಪನಿಯಲ್ಲಿ ಸಂಚಲನಕ್ಕೆ ಕಾರಣವಾಗಿತ್ತಲ್ಲದೇ, ಈ ನಿರ್ಧಾರದ ವಿರುದ್ಧ ಸಂಸ್ಥೆಯ 700ರಷ್ಟು ಸಿಬ್ಬಂದಿ ಬಂಡಾಯವೆದ್ದು, ರಾಜೀನಾಮೆಗೆ ಮುಂದಾಗಿದ್ದರು.
ವಜಾಗೆ ಆ “ಅಪಾಯಕಾರಿ” ಟೂಲ್ ಕಾರಣವೇ?
ಓಪನ್ ಎಐ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾದ ಅತ್ಯಂತ ಬಲಿಷ್ಠವಾದ ಕೃತಕ ಬುದ್ಧಿಮತ್ತೆಯ ಆವಿಷ್ಕಾರವೇ ಸಂಸ್ಥೆಯೊಳಗೆ ಅಲ್ಲೋಲಕಲ್ಲೋಲ ಸೃಷ್ಟಿಯಾಗಲು ಕಾರಣವೇ? ಹೌದು ಎನ್ನುತ್ತಿವೆ ಮೂಲಗಳು. ಇತ್ತೀಚೆಗೆ ಸಂಸ್ಥೆಯು ಕ್ಯೂ*(ಕ್ಯೂ ಸ್ಟಾರ್) ಎಂಬ ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿತ್ತು. ಇದು ಸೂಪರ್ ಇಂಟೆಲಿಜೆನ್ಸ್‌ನಲ್ಲಿ ಕ್ರಾಂತಿ ಮೂಡಿಸುವಂಥ ತಂತ್ರಜ್ಞಾನವಾಗಿದ್ದು, ಇದನ್ನು ಮನುಷ್ಯರಿಗಿಂತಲೂ ಹೆಚ್ಚಿನ ಬುದ್ಧಿವಂತಿಕೆಯಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್) ಎಂದು ಪರಿಗಣಿಸಲಾಗಿತ್ತು.
ಈ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಮಾನವತೆಗೇ ಅಪಾಯ ಉಂಟುಮಾಡುವ ಭೀತಿಯಿದೆ ಎಂದು ಸಂಸ್ಥೆಯೊಳಗಿನ ಸಂಶೋಧಕರು ನಿರ್ದೇಶಕರ ಮಂಡಳಿಗೆ ಪತ್ರ ಬರೆದಿದ್ದರು. ಈ ಪತ್ರದಿಂದ ಎಚ್ಚೆತ್ತ ಆಡಳಿತ ಮಂಡಳಿಯು ದಿಢೀರ್ ಸಭೆ ಕರೆದು, ಆಲ್ಟ್ಮನ್‌ರನ್ನು ವಜಾಗೊಳಿಸಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ, ಈ ಪತ್ರದ ಕುರಿತಾಗಲೀ, ಆ ಅಪಾಯಕಾರಿ ಟೂಲ್ ಕುರಿತಾಗಲೀ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.