Advertisement

ಊಟಿ ಕನ್ನಡ

04:21 PM Jan 27, 2018 | |

ಶತಮಾನದ ಹಿಂದೆ ಬರದಿಂದ ಕಂಗೆಟ್ಟು ಇಲ್ಲಿಂದ ಗುಳೆಹೋದ ಸಾವಿರಾರು ಕನ್ನಡಿಗರಿಗೆ ಅಂದು ಆಶ್ರಯ ನೀಡಿದ್ದು “ಬೆಟ್ಟಗಳ ರಾಣಿ’ ಊಟಿ. ಈಗ ಆ ಕನ್ನಡಿಗರು ಅದೇ “ರಾಣಿ’ಗೆ ಕರ್ನಾಟಕ ಸಿರಿ ಎಂಬ ಆಭರಣ ತೊಡಿಸಿದ್ದಾರೆ. ಈ ಮೂಲಕ ಊಟಿ ಮತ್ತಷ್ಟು ಕಳೆಗಟ್ಟಿದೆ.   

Advertisement

19ನೇ ಶತಮಾನದ ಆರಂಭದ ದಿನಗಳಲ್ಲಿ ಈಗಿನ ಕೆಆರ್‌ಎಸ್‌, ಹೇಮಾವತಿಯಂತಹ ಜಲಾಶಯಗಳು ಇರಲಿಲ್ಲ. ಇದರಿಂದ ಮಂಡ್ಯ, ತುಮಕೂರು ಸುತ್ತಲಿನ ಜನ ತೀವ್ರ ಬರದಿಂದ ಅಕ್ಷರಶಃ ನಲುಗಿದ್ದರು. ಜೀವನ ನಡೆಸುವುದೂ ಕಷ್ಟವಾಗಿತ್ತು. ಇದೇ ವೇಳೆ ಊಟಿಯಲ್ಲಿ ತೋಟಗಳನ್ನು ಕಾಯಲು ಜನರ ಅವಶ್ಯಕತೆಯೂ ಇತ್ತು. ಆಗ, ಅಲ್ಲಿಗೆ ತುತ್ತು ಅನ್ನಕ್ಕಾಗಿ ಕನ್ನಡಿಗರು ವಲಸೆ ಹೋದರು. ಈಗ ಇಡೀ ಊಟಿಯೇ ಕನ್ನಡಮಯವಾಗಿದೆ. 

ಊಟಿ ತಮಿಳುನಾಡಿನ ಪ್ರಮುಖ ಪ್ರವಾಸಿ ತಾಣ. ಸುಮಾರು 420 ಗ್ರಾಮಗಳು ಇದರ ವ್ಯಾಪ್ತಿಯಲ್ಲಿವೆ. ಅಂದಾಜು ಎರಡು ಲಕ್ಷ ಜನ ಇಲ್ಲಿ ನೆಲೆಸಿದ್ದಾರೆ. ಅವರಲ್ಲಿ ಬಹುತೇಕ ಎಲ್ಲರ ಬಾಯಲ್ಲೂ ಕನ್ನಡ ಅನುರಣಿಸುತ್ತಿದೆ. ಯಾರನ್ನೇ ಹಿಡಿದು ಮಾತಿಗೆಳೆದರೂ ಮೊದಲು ಕನ್ನಡ ಮಾತನಾಡುತ್ತಾರೆ. ಅಷ್ಟರಮಟ್ಟಿಗೆ ಕರ್ನಾಟಕದ ವಲಸಿಗರು ಅಲ್ಲಿ ಕನ್ನಡದ ಬೀಜ ಬಿತ್ತಿದ್ದಾರೆ. ಕನ್ನಡ ಸಂಘ, ಊಟಿ ಒಕ್ಕಲಿಗರ ಸಂಘ ಕಟ್ಟಿಕೊಂಡು ಒಕ್ಕಲಿಗರ ಭವನ ನಿರ್ಮಿಸಿದ್ದಾರೆ. ತೋಟಗಳ ಕೂಲಿ ಆಳುಗಳಾಗಿ ಬಂದ ಜನ, ನೂರಾರು ವರ್ಷಗಳ ಹಿನ್ನೆಲೆ ಇರುವ ತೋಟಗಳಿಗೆ ಕಮ್ಮಿ ಇಲ್ಲದಂತೆ ಮತ್ತೂಂದು ತೋಟ ಮೈದಳೆಯುವಂತೆ ಮಾಡಿದ್ದಾರೆ. ಇದೆಲ್ಲದರಿಂದ ತಮಿಳರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಊಟಿಯಲ್ಲಿ ಯಾವುದೇ ಕನ್ನಡ ಶಾಲೆಗಳಿಲ್ಲ, ಕರ್ನಾಟಕದಿಂದ 200 ವರ್ಷಗಳ ಹಿಂದೆ ವಲಸೆ ಬಂದವರಾರೂ ಈಗ ಕಾಣಸಿಗುವುದಿಲ್ಲ. ಹೊಸ ತಲೆಮಾರು ಕೂಡ ಕೊಯಮತ್ತೂರು, ಇಂಗ್ಲೆಂಡ್‌, ಅಮೆರಿಕ ಸೇರಿದಂತೆ ವಿವಿಧೆಡೆ ಹರಿದು ಹಂಚಿಹೋಗಿದ್ದಾರೆ.  ಆದಾಗ್ಯೂ ಇಲ್ಲಿ ಕನ್ನಡ ಜೀವಂತವಾಗಿರುವುದರ ಜತೆಗೆ ಸ್ಥಳೀಯ ತಮಿಳರಿಗೂ ವಿಸ್ತರಣೆಯಾಗಿದೆ. ಇದಕ್ಕೆ ಕಾರಣ ಅಲ್ಲಿ ಕನ್ನಡ ಮನೆಯ ಮಾತಾಗಿದೆ!

ಈ ಹೊರನಾಡ ಕನ್ನಡಿಗರಿಗೆ ಕನ್ನಡ ಅಕ್ಷರ ಬರೆಯಲು ಬರುವುದಿಲ್ಲ. ಆದರೆ, ಮಾತನಾಡಲು ಹಾಗೂ ಬಸ್‌ ಬೋರ್ಡ್‌ಗಳನ್ನು ಓದಲು ಬರುತ್ತದೆ. ಈ ಕನ್ನಡದ ಕಂಪನ್ನು ಈಗಿನ ಪೀಳಿಗೆಗೂ ಅವರು ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಹೇಗೆ ಅಂತೀರಾ? ಊಟಿಯಲ್ಲಿನ ಕನ್ನಡಿಗರ ಸಂಬಂಧಗಳ ಕೊಂಡಿ ಬೆಸೆದಿರುವುದು ಮೈಸೂರು, ಮಂಡ್ಯ, ಹಾಸನ ಸುತ್ತಲಿನ ಭಾಗಗಳೊಂದಿಗೆ. ಈಗಲೂ ಹೆಣ್ಣು ಕೊಡುವುದು ಮತ್ತು ತೆಗೆದುಕೊಳ್ಳುವುದು ಈ ಭಾಗಗಳಿಂದಲೇ ನಡೆಯುತ್ತದೆ. ಹಾಗಾಗಿ, ಕನ್ನಡ ಜೀವಂತಿಕೆಗೆ ಈ ಸಂಬಂಧಗಳು “ಸೇತುವೆ’ಯಾಗಿವೆ ಎನ್ನುತ್ತಾರೆ ಮೂಲ ಕನ್ನಡಿಗರಾದ ಊಟಿಯ ವಿಜಯ ಬ್ಯಾಂಕ್‌ ಹಿರಿಯ ಪ್ರಧಾನ ವ್ಯವಸ್ಥಾಪಕ ಪಿ.ಆರ್‌. ರಘು. 

Advertisement

ಅಂದಿನ ನಿರಾಶ್ರಿತರು ಇಂದಿನ ಕೋಟ್ಯಾಧೀಶರು!

150ರಿಂದ 200 ವರ್ಷಗಳ ಹಿಂದೆ ನಿರಾಶ್ರಿತರಾಗಿ ಬಂದ ಕನ್ನಡಿಗರೇ ಇಂದು ಊಟಿಯ ಕೋಟ್ಯಾಧೀಶರರಾಗಿದ್ದಾರೆ!

ಬ್ರಿಟಿಷರು ಅಂದು ಊಟಿಯನ್ನು ಆಳುತ್ತಿದ್ದರು. ಮಂಡ್ಯ, ಮೈಸೂರು, ಚನ್ನಪಟ್ಟಣ, ಹಾಸನ ಸುತ್ತಲಿನಿಂದ ಗುಳೆ ಹೋದವರು ಬ್ರಿಟಿಷ್‌ ಅಧಿಕಾರಿಗಳ ಕೈಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಸ್ವಾತಂತ್ರಾé ನಂತರ ಬ್ರಿಟಿಷರು ಅತ್ಯಂತ ಕಡಿಮೆ ಬೆಲೆಗೆ ಈ ಕಾರ್ಮಿಕರಿಗೆ ಆಸ್ತಿಯನ್ನು ಮಾರಾಟ ಮಾಡಿ, ದೇಶ ಬಿಟ್ಟು ಹೋದರು. ಅಂದಿನಿಂದ ಆ ಆಸ್ತಿಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ ಅಲ್ಲಿನ ಕನ್ನಡಿಗರು. 

ಹೀಗೆ ಮನೆ-ಮಠ ತೊರೆದು ಇಲ್ಲಿಗೆ ಬಂದ ಪ್ರತಿ ಕನ್ನಡಿಗರೂ ಇದೀಗ ಕನಿಷ್ಠ 1 ಎಕರೆ ಜಮೀನು ಮತ್ತು ಸ್ವಂತ ಮನೆ ಹೊಂದಿದ್ದಾರೆ. ನೂರಾರು ಎಕರೆ ಜಮೀನು ಹೊಂದಿದವರೂ ಇಲ್ಲಿದ್ದಾರೆ ಎಂದು ಸುಂದರ್‌ ಊಟಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ನಂಜುಂಡಯ್ಯ ಹೇಳಿದರು. 

70ರಷ್ಟು ಬಡಗ ಕನ್ನಡಿಗರು
ಊಟಿಯಲ್ಲಿ ಸಾಮಾನ್ಯ ಕನ್ನಡಿಗರಲ್ಲದೆ ಮತ್ತೂಂದು ಕನ್ನಡಿಗರ ವರ್ಗ ಇದೆ. ಅದು ಬಡಗ ಕನ್ನಡಿಗರು. ಬರದಿಂದ ಬೆಂದು ಮಂಡ್ಯ ಸುತ್ತಲಿನ ಜನ ಊಟಿಯತ್ತ ಮುಖಮಾಡಿದರೆ, ಟಿಪ್ಪು ಆಡಳಿತದಿಂದ ಬೇಸತ್ತು ಮೈಸೂರು ಸುತ್ತಲಿನ ಸಾವಿರಾರು ಕನ್ನಡಿಗರು ಊಟಿಗೆ ವಲಸೆ ಹೋದರು. ಈಗ ಅಲ್ಲಿರುವ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 70ರಷ್ಟು ಈ ಬಡಗ ಕನ್ನಡಿಗರಾಗಿದ್ದಾರೆ. ಅವರಲ್ಲಿ ಬಹುತೇಕರು ಕೃಷಿಯಲ್ಲಿ ತೊಡಗಿದ್ದಾರೆ. ಟೀ ಎಸ್ಟೇಟ್‌, ತರಕಾರಿ ಮತ್ತಿತರ ಹತ್ತಾರು ಎಕರೆಗಟ್ಟಲೆ ಭೂಮಿಯನ್ನು ಇವರು ಹೊಂದಿದ್ದಾರೆ. ಇವರ ಮಾತೃಭಾಷೆ ಕನ್ನಡವಾದರೂ ಅದರಲ್ಲಿ ಶೇ. 40ರಷ್ಟು ತಮಿಳು ಮಿಶ್ರಣವಾಗಿದೆ. ಬಡಗ ಕನ್ನಡಕ್ಕೆ ಲಿಪಿ ಇಲ್ಲ. ಕೇವಲ ಆಡುಭಾಷೆ ಇದಾಗಿದೆ. 

ಕನ್ನಡಿಗರದ್ದೇ ಪ್ರಾಬಲ್ಯ!
ಊಟಿ ತಮಿಳುನಾಡಿಗೆ ಸೇರಿದ್ದರೂ ಇಲ್ಲಿ ಕನ್ನಡಿಗರದ್ದೇ ಪ್ರಾಬಲ್ಯ ಎನ್ನುವುದು ವಿಶೇಷ. ಬಹುತೇಕ ಕನ್ನಡಿಗರು ವ್ಯಾಪಾರ, ಪ್ರವಾಸೋದ್ಯಮ ಮತ್ತಿತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕೃಷಿ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದಾರೆ. ಊಟಿಯ ವಾರ್ಷಿಕ ವಹಿವಾಟು ಸಾವಿರಕ್ಕೂ ಅಧಿಕ ಕೋಟಿ ರೂ. ಈ ವಹಿವಾಟಿನಲ್ಲಿ ಪ್ರಮುಖ ಪಾಲು ಕನ್ನಡಿಗರದ್ದಾಗಿದೆ. ಈಗಲೂ ಊಟಿಯ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಕನ್ನಡಿಗರೇ ಇದ್ದಾರೆ.

ಕನ್ನಡಿಗರ ಈ ಬೆಳವಣಿಗೆ ಬಗ್ಗೆ ಅಲ್ಲಿನ ತಮಿಳರಿಗೆ ಯಾವುದೇ ಹೊಟ್ಟೆಕಿಚ್ಚು ಇಲ್ಲ. ಯಾಕೆಂದರೆ, ಊಟಿಯ ಬೆಳವಣಿಗೆ, ಆದಾಯ ತಂದುಕೊಡುವಲ್ಲಿ ಮಾತ್ರವಲ್ಲ; ಸ್ಥಳೀಯ ತಮಿಳರ ಆರ್ಥಿಕ ಸ್ಥಿತಿ ವೃದ್ಧಿಸುವಲ್ಲಿ ಈ ಕನ್ನಡಿಗರ ಪಾತ್ರ ಹೆಚ್ಚಿದೆ. ಹಾಗೂ ಪರಸ್ಪರ ಸೌಹಾರ್ದವಾಗಿ ಇರುವುದರಿಂದ ಈ ಬೇಧ-ಭಾವಕ್ಕೆ ಆಸ್ಪದವಿಲ್ಲ ಎಂದು ಪಿ.ಆರ್‌. ರಘು ಹೇಳುತ್ತಾರೆ. 

“ನಮ್ಮದು ಮೂಲ ಹೊಸಮಂದೆ. ಬರದಿಂದ ಬದುಕು ಕಷ್ಟವಾದಾಗ, ಇಲ್ಲಿಗೆ ತೋಟ ಕಾಯಲು ನಮ್ಮ ತಂದೆ ಬಂದಿದ್ದರು. ನಾವೀಗ ಇಲ್ಲಿಯವರೇ ಆಗಿದ್ದೇವೆ. ಹಾಗಂತ ಕರ್ನಾಟಕದೊಂದಿಗಿನ ನಂಟು ಕಳಚಿಲ್ಲ. ಮಗ ಬೆಂಗಳೂರಿನಲ್ಲೇ ಪೈಲಟ್‌ ಆಗಿದ್ದಾನೆ. ಆದರೆ, ಊಟಿಯಲ್ಲಿ ಇರುವುದೇ ನಮಗೆ ಇಷ್ಟ’ ಎನ್ನುತ್ತಾರೆ ಊಟಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ. ಸುಂದರ್‌ ನಂಜುಂಡಯ್ಯ, 

ಕನ್ನಡ ಇಲ್ಲಿ ಅನಿವಾರ್ಯ?
ಊಟಿಯಲ್ಲಿ ಕನ್ನಡ ಅನಿವಾರ್ಯ ಕೂಡ ಆಗಿಬಿಟ್ಟಿದೆ!
ಏಕೆಂದರೆ, ನಿತ್ಯ ಊಟಿಗೆ ಸರಾಸರಿ 25ರಿಂದ 30 ಸಾವಿರ ಪ್ರವಾಸಿಗರು ಬಂದು-ಹೋಗುತ್ತಾರೆ. ಇದರಲ್ಲಿ ಬಹುತೇಕರು ಕರ್ನಾಟಕ ಮತ್ತು ಕೇರಳದಿಂದ ಬರುತ್ತಾರೆ. ಹೀಗೆ ಬರುವ ಕನ್ನಡಿಗರೊಂದಿಗೆ ವ್ಯವಹರಿಸಲು ಕನ್ನಡಿಗರು ಬೇಕಾಗುತ್ತಾರೆ. ಸಹಜವಾಗಿಯೇ ಇಲ್ಲಿ ಕನ್ನಡಿಗರಿಗೆ ಬೇಡಿಕೆಯೂ ಇದೆ. ಪರೋಕ್ಷವಾಗಿ ಇದು ಕನ್ನಡದ ಉಳಿವಿಗೆ ಪೂರಕವಾಗಿದೆ. 

ಊಟಿ ಕರ್ನಾಟಕಕ್ಕೆ ಸೇರಿದ್ದು?
ಈ ಹಿಂದೆ ಊಟಿ ಕರ್ನಾಟಕಕ್ಕೆ ಸೇರಿತ್ತು ಎಂಬ ವಾದವೂ ಅದೇ ಊಟಿ ಕನ್ನಡಿಗರಿಂದ ಕೇಳಿಬರುತ್ತದೆ. 
ಹೌದು, ಊಟಿ ಕರ್ನಾಟಕ ಹಾಗೂ ಮಲೆಮಹದೇಶ್ವರ ಬೆಟ್ಟ ತಮಿಳುನಾಡಿಗೆ ಸೇರಿತ್ತು. ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳು ಪರಸ್ಪರ ಒಪ್ಪಿಗೆ ಮೇರೆಗೆ ಅದಲು-ಬದಲು ಮಾಡಿಕೊಂಡವು. ಅಂದಿನಿಂದ ಮಲೆ ಮಹದೇಶ್ವರ ಬೆಟ್ಟ ಕರ್ನಾಟಕಕ್ಕೆ ಹಾಗೂ ಊಟಿ ತಮಿಳುನಾಡಿಗೆ ಸೇರ್ಪಡೆಗೊಂಡಿತು. ಊಟಿಯಲ್ಲಿ ಕನ್ನಡ ಇಷ್ಟೊಂದು ಮಹತ್ವ ಪಡೆದುಕೊಳ್ಳಲು ಈ ಅಂಶ ಕೂಡ ಕಾರಣ ಎನ್ನಲಾಗುತ್ತಿದೆ. 

ಕರ್ನಾಟಕ ಸಿರಿ ಕುರಿತು…
38.91 ಎಕರೆಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ತಲೆಯೆತ್ತಿರುವ “ಕರ್ನಾಟಕ ಸಿರಿ ತೋಟಗಾರಿಕೆ ಉದ್ಯಾನ’ ಹತ್ತು-ಹಲವು ಆಕರ್ಷಣೆಗಳಿಂದ ಊಟಿಯ ನೈಸರ್ಗಿಕ ಸೊಬಗಿಗೆ ಮತ್ತಷ್ಟು ಮೆರುಗು ತುಂಬಿದೆ.  

ಶೀತವಲಯದ ಗಾಜಿನ ಮನೆ, ಆಕರ್ಷಕ ಟೊಪಿಯರಿಗಳು, ಇಟಾಲಿಯನ್‌ ಗಾರ್ಡನ್‌, ಮೇಜ್‌ ಗಾರ್ಡನ್‌, ಜಲಪಾತದಂತೆ ಹರಿದುಬರುವ ಸಸ್ಯಾಗಾರ, ಚಳಿಗಾಲದ ಪುಷ್ಪಪ್ರದರ್ಶನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಸುಮಾರು 10 ಎಕರೆಯಲ್ಲಿ ಟೊಪಿಯರಿಗಳು ಹರಡಿಕೊಂಡಿದ್ದು, ಆಕರ್ಷಣೆಯ ಕೇಂದ್ರಬಿಂದು ಆಗಿವೆ. 

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next