Advertisement

ಕಸ ಸಂಗ್ರಹಿಸುವ ವಾಹನದಲ್ಲಿಯೂ ಮತದಾನ ಜಾಗೃತಿ!

01:45 AM Apr 13, 2019 | Sriram |

ಮಹಾನಗರ: ಅಣ್ಣ, ತಮ್ಮ, ಅಕ್ಕ, ತಂಗಿ… ಮತವ ಹಾಕೋಣ; ಪುಣ್ಯ ಕಾರ್ಯವು ಮತದಾನ, ಹಕ್ಕನ್ನು ಪೋಲಾಗಿಸ ಬೇಡ… ಚಲಾಯಿಸ ಬೇಕು…ಸಮಾಜ ಬದಲು ಆಗುವುದು ನೋಡು… ಮತವ ಹಾಕೋಣ… ದೇಶವ ಕಟ್ಟೋಣ…

Advertisement

ಇದು ಯಾವುದೇ ಸಿನೆಮಾ ಹಾಡಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬ ಎಂದೇ ಪರಿಗಣಿಸಲಾಗಿರುವ ಚುನಾವಣ ಪ್ರಕ್ರಿಯೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ ಸಮಿತಿಯು ರಚನೆ ಮಾಡಿರುವ ಹಾಡು. ಇಂತಹ ಹಲವು ಹಾಡುಗಳನ್ನು ತಯಾರಿಸಲಾಗಿದ್ದು, ಮತದಾನ ಜಾಗೃತಿಗೆ ಅವಕಾಶ ಇರುವ ಎಲ್ಲ ಕಡೆಗಳಲ್ಲಿ ಬಳಸಲಾಗುತ್ತಿದೆ.

ಮನೆ ಮನೆ ಕಸ ಸಂಗ್ರಹಿಸಿ ಸಾಗಿಸುವ ವಾಹನಗಳಲ್ಲಿ ಕೂಡ ಈ ಹಾಡುಗಳನ್ನು ಬಳಸಿಕೊಳ್ಳುತ್ತಿರುವುದು ವಿಶೇಷ.ಪುರಸಭೆ, ಪಟ್ಟಣ ಪಂಚಾಯತ್‌, ಗ್ರಾ.ಪಂ.ಗಳ ಮನೆ ಮನೆ ಕಸ ಸಂಗ್ರಹಿಸಿ ಸಾಗಿಸುವ ವಾಹನಗಳಲ್ಲಿ ಸಾಮಾನ್ಯವಾಗಿ ಸ್ವತ್ಛತೆಯ ಬಗೆಗಿನ ಸ್ಲೋಗನ್‌ ಅಥವಾ ಹಾಡುಗಳು ಕೇಳಿ ಬರುತ್ತಿದ್ದವು; ಈಗ ಅದೇ ಜಾಗದಲ್ಲಿ ಮತದಾನ ಜಾಗೃತಿಗೆ ಸಂಬಂಧಿಸಿದ ಹಾಡುಗಳು ಕೇಳಿ ಬರುತ್ತಿವೆ.

ಸ್ವೀಪ್‌ ಸಮಿತಿಯು ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಹಾಡು ಗಳನ್ನು ರಚಿಸಿ, ರಾಗ, ಸಂಗೀತ ಸಂಯೋಜನೆ ಮಾಡಿದೆ. ಡಿವಿಡಿ, ಪೆನ್‌ಡ್ರೈವ್‌, ಮೆಮೊರಿ ಕಾರ್ಡ್‌ ರೂಪದಲ್ಲಿ ಅವುಗಳನ್ನು ಅವಕಾಶ ಇರುವಲ್ಲೆಲ್ಲ ಬಳಸಲು ಒದಗಿಸಲಾಗಿದೆ. ನಗರಾಡಳಿತ ಸಂಸ್ಥೆಗಳಲ್ಲಿ ಮತ್ತು ಗ್ರಾ.ಪಂ.ಗಳಲ್ಲಿ ಕಸ ಸಾಗಿಸುವ ವಾಹನಗಳು ಗಲ್ಲಿ ಗಲ್ಲಿಗೆ ತೆರಳಿ ಜನ ಸಂಪರ್ಕ ಸಾಧಿಸುವ‌ಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಈ ಹಾಡುಗಳನ್ನು ಅವುಗಳಲ್ಲಿ ಬಳಕೆ ಮಾಡಲು ಸ್ವೀಪ್‌ ಸಮಿತಿ ಸೂಚಿಸಿದೆ.

ಸಂಗೀತಕ್ಕೂ ಪ್ರಾತಿನಿಧ್ಯ
ಯಾವುದೇ ವಿಷಯದಲ್ಲಿ ಜಾಗೃತಿ ಮೂಡಿಸುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ. ಹಬ್ಬಗಳ ಸಂದರ್ಭಗಳ‌ಲ್ಲಿಯೂ ಸಂಗೀತಕ್ಕೆ ಮಹತ್ವವಿದೆ. ಚುನಾವಣೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ಹಬ್ಬ. ಹಾಗಾಗಿ ಇಲ್ಲಿ ಸಂಗೀತಕ್ಕೂ ಪ್ರಾತಿನಿಧ್ಯ ನೀಡಲಾಗಿದೆ.
– ಡಾ| ಆರ್‌. ಸೆಲ್ವಮಣಿ,
ಜಿ.ಪಂ. ಸಿಇಒ ಮತ್ತು ಸ್ವೀಪ್‌ ಸಮಿತಿ ಅಧ್ಯಕ್ಷರು

Advertisement

ಜಾಗೃತಿ ಮೂಡಿಸಲು ಸಹಕಾರಿ
ಸ್ವಚ್ಛತೆ ಬಗೆಗಿನ ಹಾಡುಗಳ ಬದಲು ಮತದಾನ ಸಂಬಂಧಿತ ಹಾಡುಗಳನ್ನು ಹಾಕಿರುವುದು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿ ಆಗಲಿದೆ ಎನ್ನುವುದು ನಮ್ಮ ಭಾವನೆ. ಜಿಲ್ಲಾ ಸ್ವೀಪ್‌ ಸಮಿತಿಯ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಮತದಾನ ನಡೆಯುವ ತನಕ (ಎ. 18) ಈ ಹಾಡುಗಳು ಕೇಳಿ ಬರಲಿವೆ.
– ಪೂರ್ಣಕಲಾ, ಕಾರ್ಯ ನಿರ್ವಹಣಾ ಅಧಿಕಾರಿ,
ಕೋಟೆಕಾರ್‌ ಪಟ್ಟಣ ಪಂಚಾಯತ್‌

– ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next