Advertisement

ದೇವಿ ಅನುಗ್ರಹದಿಂದ ಭವನದ ಕನಸು ನನಸಾಗಲಿ: ಜಯವಂತ್‌ ಸುತಾರ್‌

01:37 PM Mar 12, 2019 | Team Udayavani |

ನವಿ ಮುಂಬಯಿ: ಇಲ್ಲಿ ಎಲ್ಲ ಜಾತಿ, ಧರ್ಮ, ಭಾಷೆಯ ಜನರು ವಾಸಿಸುತ್ತಿದ್ದು, ಅನೇಕ ದೇವಸ್ಥಾನಗಳು, ಧಾರ್ಮಿಕ ಕೇಂದ್ರಗಳು ನಿರ್ಮಾಣಗೊಂಡು ಪರಿಸರದ ಜನತೆಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ನವಿಮುಂಬಯಿಯಲ್ಲಿ ಅತೀ ಹೆಚ್ಚಿನ ದೇವಸ್ಥಾನಗಳಿದ್ದು, ಕರ್ನಾಟಕದಿಂದ ಬಂದ ನೀವೆಲ್ಲರೂ ಘನ್ಸೋಲಿಯಲ್ಲಿ ಭವ್ಯ ಮಂದಿರವನ್ನು ನಿರ್ಮಿಸಿ ಇದೀಗ ಸಭಾಭವನದ ನಿರ್ಮಾಣದಲ್ಲಿ ತೊಡಗಿರುವುದು ಸಂತೋಷದ ಸಂಗತಿ. ಶ್ರೀ ಮೂಕಾಂಬಿಕೆಯ ಅನುಗ್ರಹದಿಂದ ನಿಮ್ಮ ಭವ್ಯ ಭವನದ ಕನಸು ನನಸಾಗಲಿ. ನಿಮ್ಮ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದು ನವಿಮುಂಬಯಿ ಮಹಾನಗರ ಪಾಲಿಕೆಯ ಮೇಯರ್‌ ಜಯವಂತ್‌ ಸುತಾರ್‌ ನುಡಿದರು.

Advertisement

ಮಾ. 10ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ನಡೆದ ಶ್ರೀ ಮೂಕಾಂಬಿಕಾ ಸಭಾ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಿಮ್ಮೆಲ್ಲರ ಒಗ್ಗಟ್ಟಿನ ಪರಿಶ್ರಮದ ಕಾಯಕ ಫಲಪ್ರದಗೊಳ್ಳುವುದರಲ್ಲಿ ಸಂಶಯವಿಲ್ಲ. ಈ ಪರಿಸರಕ್ಕೆ ಬಂದಾಗ ಆಧ್ಯಾತ್ಮಿಕ ಚಿಂತನೆ ತನ್ನಿಂದತಾನೇ ಮೂಡುತ್ತದೆ ಎಂದರು.

ಅತಿಥಿಯಾಗಿ ಭಾಗವಹಿಸಿದ ಎನ್‌ಎಂಎಂಸಿ ವಿರೋಧ ಪಕ್ಷ ನಾಯಕ ವಿಜಯ ಚೌಗುಲೆ ಮಾತನಾಡಿ, ನಾನು ಸಿಡ್ಕೊàದ ಸಂಚಾಲಕನಾಗಿದ್ದಾಗ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಧಾರ್ಮಿಕತೆಯನ್ನು ಕಾಪಾಡುವ ಉದ್ದೇಶದಿಂದ ಉಚಿತವಾಗಿ ಜಾಗವನ್ನು ಒದಗಿಸುವಲ್ಲಿ ಸಹಕರಿ ಸಿದ್ದೇನೆ. ಒಂದೆ ವೇಳೆ ಸಿಡ್ಕೊà  ಈ ಮಂದಿರದ ಪರಿಸರದಲ್ಲಿ ಉಳಿದಿರುವ ಜಾಗವನ್ನು ಬೇರೆ ಯಾರಿಗಾದರೂ ನೀಡಲು ಕಾಯ್ದಿರಿಸಿಕೊಂಡಿದ್ದರೆ ಅದನ್ನು ಕೂಡಾ ನಮ್ಮ ದೇವಸ್ಥಾನಕ್ಕೆ ಸಿಗುವಂತೆ ನಾವೆಲ್ಲ ಪ್ರಯತ್ನಶೀಲರಾಗೋಣ. ಭವನ ನಿರ್ಮಾಣ ಕಾರ್ಯದಲ್ಲಿ ನನ್ನ ಸಹಕಾರ ಸದಾಯಿದೆ ಎಂದರು.

ನವಿಮುಂಬಯಿ ಉಪ ಮೇಯರ್‌ ಮಂದಾಕಿನಿ ಮ್ಹಾತ್ರೆ ಅವರು ಮಾತನಾಡಿ, ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಸಭಾ ಭವನ ನಿರ್ಮಾಣದ ಭೂಮಿಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವಾಗಿದೆ. ಈ ಮಂದಿರ ಹಾಗೂ ನನ್ನ ಪರಿವಾರದ ಸಂಬಂಧ ಬಹಳ ಹಳೆಯದಾಗಿದೆ. ಮೂಕಾಂಬಿಕಾ ಕ್ಷೇತ್ರದ ಪ್ರತಿಯೊಂದು ಉತ್ಸವದಲ್ಲಿ ನಾನು ಅತೀ ಸಂತೋಷದಿಂದ ಭಾಗಿಯಾಗುತ್ತಿದ್ದೇನೆ. ಇದೊಂದು ಇಷ್ಟಾರ್ಥ ಸಿದ್ಧಿಯ ಕ್ಷೇತ್ರವಾಗಿದೆ ಎಂದು ನುಡಿದರು.

Advertisement

ನೆರೂಲ್‌ ಶ್ರೀ ಶನಿಮಂದಿರದ ಕಾರ್ಯಾಧ್ಯಕ್ಷ ಸಂತೋಷ್‌ ಡಿ. ಶೆಟ್ಟಿ ಇವರು ಮಾತನಾಡಿ, ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಸಮಿತಿಯವರು ಧಾರ್ಮಿಕ ಅಲ್ಲದೆ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಾಗಿ ಸಭಾ ಭವನ ನಿರ್ಮಾಣದ ಯೋಜನೆಯನ್ನು ಸಮಿತಿಯವರು ಹಾಕಿಕೊಂಡಿದ್ದಾರೆ. ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಹಾಗೂ ಪದಾಧಿಕಾರಿಗಳ ಸತತ ಪ್ರಯತ್ನದಿಂದ ಈ ಯೋಜನೆ ಸಾಕಾರಗೊಳ್ಳುತ್ತಿದೆ. ಇದಕ್ಕೆ ಪರಿಸರದ ರಾಜಕೀಯ ಪಕ್ಷಗಳ, ಮುಖಂಡರ, ಭಕ್ತರ ಸಹಕಾರ ಕೂಡ ಒದಗಿದೆ. ಮುಂದೆ  ಈ ಕ್ಷೇತ್ರದಲ್ಲಿ ಮತ್ತಷ್ಟು ಬೆಳಗಲಿ ಎಂದು ಹಾರೈಸಿದರು.

ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಸಭಾ ಭವನ ನಿರ್ಮಾಣ ಮಾಡುವುದು ನಮ್ಮ ಕನಸಾಗಿತ್ತು. ಶ್ರೀ ಮೂಕಾಂಬಿಕೆಯ ಅನುಗ್ರಹದಿಂದ ಇಂದು ಆ ಕನಸು ನನಸಾಗುತ್ತಿದೆ ಎನ್ನಲು ಸಂತೋಷವಾಗುತ್ತಿದೆ. 700 ಮೀಟರ್‌ ಜಾಗದಲ್ಲಿ ಭವ್ಯ ಭವನ ನಿರ್ಮಾಣವಾಗಲಿದೆ. ಈ ಸಭಾ ಭವನ ತಲೆಯೆತ್ತಲು ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ. ಪುಣ್ಯ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು. ಶ್ರೀ ಮೂಕಾಂಬಿಕೆಯ ಕೃಪೆಗೆ ಪಾತ್ರರಾಗಬೇಕು ಎಂದು ನುಡಿದು ಎಲ್ಲರ ಸಹಕಾರ ಬಯಸಿದರು.

ವೇದಿಕೆಯಲ್ಲಿ ಮಾಜಿ ನಗರ ಸೇವಕ ರಮಾಕಾಂತ್‌ ಮ್ಹಾತ್ರೆ, ಎನ್‌. ಎಂ. ಎಂ. ಸಿಯ ನಗರ ಸೇವಕ ಪ್ರಶಾಂತ್‌ ಪಾಟೀಲ್‌, ಮೂಕಾಂಬಿಕಾ ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಶಂಕರ ಶೆಟ್ಟಿ ಅಣ್ಣಾವರ,  ಶ್ರೀ ಮೂಕಾಂಬಿಕಾ ಕ್ಷೇತ್ರದ ಉಪಾಧ್ಯಕ್ಷರಾದ ನಂದಿಕೂರು ಜಗದೀಶ್‌ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ್‌ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್‌ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೀಣಾ ಸಿ. ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

ಸಮಿತಿಯ ಸದಸ್ಯರಾದ ರಾಘು ಆರ್‌. ಕೋಟ್ಯಾನ್‌, ಕುಟ್ಟಿ ಎ. ಕುಂದರ್‌, ಶಂಕರ್‌ ಜಿ. ಮೊಲಿ, ಸುಧಾಕರ ಸಿ. ಪೂಜಾರಿ, ಮಹಾಬಲ ಟಿ. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಶ್ರೀಧರ ಬಿ. ಪೂಜಾರಿ, ಹರೀಶ್‌ ಶೆಟ್ಟಿ ಕುರ್ಕಾಲ್‌, ಹರೀಶ್‌ ಶೆಟ್ಟಿ ಪಡುಬಿದ್ರೆ, ಹರೀಶ್‌ ಶೆಟ್ಟಿ ನಲ್ಲೂರು, ಶಕುಂತಳಾ ಎಸ್‌. ಶೆಟ್ಟಿ, ಸತೀಶ್‌ ಪೂಜಾರಿ, ಪ್ರಭಾಕರ ಆಳ್ವ, ಪದ್ಮನಾಭ ಶೆಟ್ಟಿ, ಸಂತೋಷ್‌ ಆರ್‌. ಶೆಟ್ಟಿ ಮೊದಲಾದವರು ಸಹಕರಿಸಿದರು.
ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್‌ ಕೋಟ್ಯಾನ್‌ ಮತ್ತು ಸ್ವಪ್ನಾ ಅಯ್ಯರ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಗೀತಾ ಶೆಟ್ಟಿ, ರತ್ನಾ ಗೌಡ,  ವಿದ್ಯಾ ಅಂಚನ್‌ ಅವರು ಪ್ರಾರ್ಥನೆಗೈದರು. ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿದರು.

ಸಾವಿರಾರು ಭಕ್ತಾದಿಗಳು, ಮಂದಿರದ ಸದಸ್ಯರು, ಗಣ್ಯರು, ರಾಜಕೀಯ ಧುರೀಣರು, ನವಿ ಮುಂಬಯಿ ಪರಿಸರದ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.

 ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next