Advertisement

ಪ್ರಭಾವಿಗಳಿರುವ ಪ್ರದೇಶದಲ್ಲಿ ಮಾತ್ರ ಕಾಮಗಾರಿ?

09:12 PM Jun 19, 2019 | Lakshmi GovindaRaj |

ಎಚ್‌.ಡಿ.ಕೋಟೆ: ಪುರಸಭೆಗೆ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿ ವರ್ಷ ಕಳೆಯುತ್ತ ಬಂದಿದ್ದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪಟ್ಟಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಪುರಸಭೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿಲ್ಲ.

Advertisement

ಹೀಗಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಪಟ್ಟಣದ ಅನೇಕ ಬಡಾವಣೆಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಆದರೆ, ಪ್ರಭಾವಿಗಳು ವಾಸಿಸುವ ಪ್ರದೇಶದಲ್ಲಿ ಮಾತ್ರ ಅನುದಾನ ನೀಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ದಲಿತರು ಹಾಗೂ ಪರಿಶಿಷ್ಟ ವರ್ಗದ ಜನರು ಹೆಚ್ಚಾಗಿ ವಾಸಿಸುತ್ತಿರುವ ಪಟ್ಟಣದ ಹನುಮಂತನಗರ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ತೆರೆದ ಚರಂಡಿಗಳು ಇಲ್ಲ. ಹೀಗಾಗಿ ಕೊಳಚೆ ನೀರು ಮನೆ ಮುಂಭಾಗದ ರಸ್ತೆ ಮೇಲೆಯೇ ಹರಿಯುತ್ತಿದ್ದು, ಇಲ್ಲಿನ ಜನರು ಅಶುಚಿತ್ವದ ವಾತಾವರಣದಿಂದಾಗಿ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ.

ಈ ಬಡಾವಣೆಗೆ ಅನುದಾನ ಬಳಸಿ ಕಾಮಗಾರಿ ಕೈಗೊಳ್ಳಬೇಕಾದ ಪುರಸಭೆಯು ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿ ಸಮೀಪದ ರಸ್ತೆಗೆ ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಚರಂಡಿ ಕಾಮಗಾರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪ್ರಭಾವಿ ವ್ಯಕ್ತಿಗಾಗಿ ಕಾಮಗಾರಿ?: ಕಾಮಗಾರಿ ನಡೆಸುತ್ತಿರುವ ಸ್ಥಳದ ಪಕ್ಕದಲ್ಲೇ ಪ್ರಭಾವಿ ವ್ಯಕ್ತಿಗಳಿಗೆ ಸೇರಿದ ನಿವೇಶನಗಳಿದ್ದು, ಈ ನಿವೇಶನದ ಜಾಗದಲ್ಲಿ ನೀರು ಸಂಗ್ರಹವಾಗುತ್ತಿದ್ದರಿಂದ ಆ ಪ್ರಭಾವಿ ವ್ಯಕ್ತಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಇಲ್ಲಿನ ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್‌ಗಳು ಹಾಗೂ ಕೆಲ ಕಾಣದ ಕೈಗಳ ಸಹಕಾರದಲ್ಲಿ ಇಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

Advertisement

ನಿವೇಶನದ ಜಾಗದ ಬಗ್ಗೆ ಗೊಂದಲ: ಸುಮಾರು 16 ಲಕ್ಷ ರೂ ಕಾಮಗಾರಿ ನಡೆಸುತ್ತಿರುವ ಮಿನಿವಿಧಾನಸೌಧ ಪಕ್ಕದ ನಿವೇಶನ ಜಾಗದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗೊಂದಲ ವ್ಯಕ್ತವಾಗಿದೆ. ಪಟ್ಟಣದ ಇಬ್ಬರು ನಿವಾಸಿಗಳು 30*40 ಮತ್ತು 50*50 ನಿವೇಶನ ಹೊಂದಿದ್ದರೆ, ತಾಲೂಕಿನ ಗ್ರಾಮವೊಂದರ ರಾಜಕಾರಣಿಯೊಬ್ಬರ ಕುಟುಂಬ ಇಲ್ಲಿ 209*108 ಅಗಲ 106 ಅಡಿ ಉದ್ದದ ನಿವೇಶನ ಹೊಂದಿದ್ದಾರೆ.

ಈ ನಿವೇಶನ ಮಾಲೀಕರ ಬಳಿ ದಾಖಲೆಗಳಿದ್ದರೂ ಇದೇ ಜಾಗದಲ್ಲಿ ಸರ್ಕಾರಕ್ಕೆ ಸೇರಿದ ಒಂದು ಎಕರೆ ಕರಾಬು ಜಾಗವಿದೆ ಎಂದು ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಇದನ್ನು ಗಮನಿಸಿರುವ ಪ್ರಗತಿಪರ ಸಂಘಟನೆಗಳ ಕೆಲ ಮುಖಂಡರು ಇಲ್ಲಿ ನಡೆಸಲಾಗುತ್ತಿದ್ದ ಕಾಮಗಾರಿ ತಡೆದಿದ್ದರು. ಈಗ ಮತ್ತೆ ಕಾಮಗಾರಿ ಪ್ರಾರಂಭಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣ ಆಗಿದಿರುವುದಲ್ಲದೇ ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ.

ಒಟ್ಟಾರೆ ಕೋಟ್ಯಂತರ ರೂ. ಬೆಲೆ ಬಾಳುವ ಜಾಗ ಸರ್ಕಾರಧ್ದೋ ಅಥವಾ ವ್ಯಕ್ತಿಗೆ ಸೇರಿಧ್ದೋ ಎಂಬ ವಿಷಯ ತಿಳಿಯುವ ಮುನ್ನವೇ ಇಲ್ಲಿ ಕಾಮಗಾರಿ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದ್ದು, ಪುರಸಭೆ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ಹೀಗಾಗಿ ಕ್ಷೇತ್ರದ ಶಾಸಕರು, ಸಂಸದರು ಮತ್ತು ಚುನಾಯಿತ ಜನಪ್ರತಿನಿಧಗಳು ಹಾಗೂ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ, ಈ ಜಾಗದ ಬಗ್ಗೆ ಹಳೆಯ ಮೂಲ ದಾಖಲೆಗಳನ್ನು ಪರಿಶೀಲಿಸಿ ಕೋಟ್ಯಂತರ ರೂ. ಬೆಲೆ ಬಾಳುವ ಜಾಗ ರಕ್ಷಿಸುವ ಜತೆಗೆ ಬಡವರು, ದಲಿತರು ವಾಸಿಸುವ ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕಿದೆ. ಜೊತೆಗೆ ಕಾಮಗಾರಿ ನೆಪದಲ್ಲಿ ಅನುದಾನ ದುರ್ಬಳಕೆ ಕುರಿತು ಮೇಲಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಪುರಸಭೆ ಅಧಿಕಾರಿಗಳು ಕಳೆದ ಅಡಳಿತ ಮಂಡಳಿ ಅಸ್ತಿತ್ವದಲ್ಲಿದ್ದ ಸಂದರ್ಭ ಸಾಮಾನ್ಯ ಸಭೆಗಳಲ್ಲಿ ಕೈಗೊಂಡ ನಡವಳಿಗಳ ನೆಪವೊಡ್ಡಿ ಪಟ್ಟಣದಲ್ಲಿ ಭರಪೂರ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಕೈಗೊಳ್ಳಲಾಗಿದ್ದ ನಡವಳಿಗೆ ಅಪಾರ ಆಡಳಿತಾಧಿಕಾರಿಯಿಂದ ಮಂಜೂರಾತಿ ಗಿಟ್ಟಿಸಿಕೊಂಡು ತಮಗಿಷ್ಟ ಬಂದಂತೆ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು.
-ಮಂಜುನಾಥ್‌, ಹೌಸಿಂಗ್‌ ಬೋರ್ಡ್‌ ನಿವಾಸಿ

ಚರಂಡಿ ಇಲ್ಲದ ಪರಿಣಾಮ ಮನೆಯಿಂದ ಹೊರ ಬರುವ ಗಲೀಜು ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಅಶುಚಿತ್ವದ ವಾತಾವರಣದಿಂದಾಗಿ ಸೊಳ್ಳೆಗಳ ಕಾಟ ಮಿತಿಮಿರಿದ್ದು, ಹಾವು ಚೇಳುಗಳ ಮನೆ ಹೊಕ್ಕುತ್ತಿವೆ. ವಾರ್ಡ್‌ನಿಂದ ಆಯ್ಕೆಯಾದ ಜನಪ್ರತಿನಿಧಿ ಇತ್ತ ತಿರುಗಿ ನೋಡಿಲ್ಲ.
-ಚಿಕ್ಕಮ್ಮ, ಹನುಮಂತಗರ ಬಡಾವಣೆ ನಿವಾಸಿ

* ಬಿ.ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next