ಬೆಂಗಳೂರು: ಈ ದಿನಗಳಲ್ಲಿ ಉದ್ದೀಪನಾ ಮದ್ದಿಲ್ಲದ ಕ್ರೀಡೆಯನ್ನು ಊಹಿಸಿಕೊಳ್ಳುವುದು ಕಷ್ಟ. ಅಂಥದ್ದರಲ್ಲಿ ರಘು ರಾಮಪ್ಪ ನೈಸರ್ಗಿಕ ದೇಹದಾರ್ಢ್ಯ ಪಟುವಾಗಿ ಸಾಧಕರ ಸಾಲಿನಲ್ಲಿ ನಿಂತಿದ್ದಾರೆ. ಆರ್ಥಿಕ ಸಮಸ್ಯೆಯ ಜೊತೆಗೆ ಹತ್ತಾರು ಸವಾಲುಗಳಿದ್ದರೂ ಅವನ್ನೆಲ್ಲಾ ದಾಟಿ ಅವರು ನ್ಯಾಚುರಲ್ ಬಾಡಿ ಬಿಲ್ಡಿರ್ ಆಗಿ ಸಾಧಿಸಿರುವುದು ವಿಶೇಷ. ನೈಸರ್ಗಿಕ ದೇಹದಾರ್ಢ್ಯ ಹಾಗೂ ಅದಕ್ಕಿರುವ ಸವಾಲುಗಳ ಬಗ್ಗೆ ಉದಯವಾಣಿ ಜೊತೆಗೆ ಮಾತನಾಡಿರುವ ಅವರು, ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ.
ಸೇವಿಸುವ ಪ್ರತೀ ಪದಾರ್ಥದ ಮೇಲೂ ಎಚ್ಚರಿಕೆ ಅಗತ್ಯ: ದೇಹದಾರ್ಢ್ಯ ಪಟುಗಳು ತಾವು ಸೇವಿಸುವ ಪ್ರತಿಯೊಂದು ಪದಾರ್ಥವೂ ಅಂ.ರಾ. ಉದ್ದೀಪನ ನಿಗ್ರಹ ಘಟಕ (ವಾಡಾ) ಪಟ್ಟಿ ಮಾಡಿರುವ ನಿಷೇಧಿತ ಅಂಶಗಳನ್ನು ಒಳಗೊಂಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇದು ದೊಡ್ಡ ಸವಾಲು.
ದೇಶದಲ್ಲಿ ಬರೀ 3 ನೈಸರ್ಗಿಕ ಪಟುಗಳು: ನೈಸರ್ಗಿಕ ದೇಹದಾರ್ಢ್ಯ ಪಟುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರ ಸದ್ಯ ಸ್ಪರ್ಧೆ ಮಾಡುತ್ತಿರುವುದು ಕೇವಲ ಮೂರು ಮಂದಿ ಮಾತ್ರ. ಅವರೆಂದರೆ ರಘು, ಶೋಧನ್ ಜತೆಗೆ ಮಣಿಪುರದ ರೋಷನ್ ನೆಪ್ರಾಮ್.
ಡೋಪಿಂಗ್ ಪತ್ತೆಯಾದರೆ ಆಜೀವ ನಿಷೇಧ: ಯಾವುದೇ ಬಾಡಿಬಿಲ್ಡರ್ ನಿಷೇಧಿತ ಪದಾರ್ಥ ಸೇವಿಸಿರುವುದು ದೃಢಪಟ್ಟರೆ ಆತನ ಫೋಟೋ ಸಮೇತ ಸಂಪೂರ್ಣ ವಿವರಗಳನ್ನು ಐಎನ್‌ಬಿಎ ವೆಬ್‌ಸೈಟ್‌ನಲ್ಲಿರುವ “ಹಾಲ್ ಆಫ್ ಶೇಮ್’ಗೆ ಸೇರಿಸಲಾಗುತ್ತದೆ. ಆತ ಆಜೀವ ನಿಷೇಧಕ್ಕೊಳಗಾಗುತ್ತಾನೆ ಎಂದು ರಘು ವಿವರಿಸಿದ್ದಾರೆ.
ಭಾರತದಲ್ಲಿಲ್ಲ ಡೋಪ್ ಪರೀಕ್ಷಾ ಕೇಂದ್ರ!: ನೈಸರ್ಗಿಕ ದೇಹದಾರ್ಢ್ಯ ಪಟುವಿನ ಡೋಪ್ ಪರೀಕ್ಷೆ ಮಾಡಬೇಕಿದ್ದಲ್ಲಿ ಅದು ಅಮೆರಿಕದ ಕೇಂದ್ರಕ್ಕೆ ಕಳುಹಿಸಬೇಕಾದ ಅನಿವಾರ್ಯತೆ ಇದೆ. ಭಾರತದಲ್ಲಿ ಯಾವುದೇ ಡೋಪ್ ಪರೀಕ್ಷಾ ಕೇಂದ್ರ ಇಲ್ಲ. ಇದು ಸಹ ಸ್ಪರ್ಧಿಗಳಿಗೆ ಒಂದು ಅನನುಕೂಲ.
ವಿಪರೀತ ದುಬಾರಿ, ಬೆಂಬಲದ ಕೊರತೆ: ನೈಸರ್ಗಿಕ ದೇಹದಾರ್ಢ್ಯ ಪಟುವಾಗಿ ಸಾಧಿಸಲು ಬಯಸುವವರಿಗೆ ಸರಿಯಾದ ಬೆಂಬಲ ಸಿಗುತ್ತಿಲ್ಲ. ಪ್ರತಿ ವರ್ಷ ಜೂನ್‌ನಿಂದ ನವೆಂಬರ್‌ವರೆಗೂ 5-6 ಪ್ರತಿಷ್ಠಿತ ಅಂತಾರಾಷ್ಟ್ರೀಯ ಕೂಟಗಳು ನಡೆಯುತ್ತವೆ. ಯಾವುದೇ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಬೇಕಿದ್ದರೂ ವಿಮಾನದ ಟಿಕೆಟ್, ಹೋಟೆಲ್ ರೂಂ ಬಾಡಿಗೆ, ಸ್ಪರ್ಧೆಗೆ ಕಟ್ಟಬೇಕಿರುವ ಶುಲ್ಕ, ಊಟ ಇತ್ಯಾದಿ ಸೇರಿ ಏನಿಲ್ಲವೆಂದರೂ 4ರಿಂದ 5 ಲಕ್ಷ ರೂ. ಖರ್ಚಾಗುತ್ತದೆ ಎಂದು ರಘು ತಮಗೆದುರಾಗುವ ಆರ್ಥಿಕ ಸಮಸ್ಯೆಯನ್ನು ತೆರೆದಿಟ್ಟರು.
ಸ್ಟಿರಾಯ್ಡ್ಸ್ ಬಳಕೆಯಿಂದ ಗಂಭೀರ ಅನಾರೋಗ್ಯ: ಸ್ಟಿರಾಯ್ಡ್ಸ್ ಉಪಯೋಗಿಸುವುದರಿಂದ ತಕ್ಷಣಕ್ಕೆ ನೀವು ಸದೃಢ ದೇಹವನ್ನು ಹೊಂದುತ್ತಿರುವಂತೆ ಭಾಸವಾದರೂ ನಂತರ ಅಡ್ಡ ಪರಿಣಾಮಗಳೇ ಜಾಸ್ತಿ. ಉದಾಹರಣೆಗೆ ಚರ್ಮದ ಕಾಂತಿಯಲ್ಲಿ ಬದಲಾವಣೆ, ಮೊಡವೆಗಳು, ನಿದ್ರೆ ಬಾರದಿರುವುದು, ರಕ್ತದ ಒತ್ತಡ ಹೆಚ್ಚಾಗುವಿಕೆ, ಹಸಿವು ಹಾಗೂ ತೂಕ ಜಾಸ್ತಿಯಾಗುವಿಕೆ, ಕೈಕಾಲು ಬಾತುಕೊಳ್ಳುವಿಕೆ, ರೋಗ ನಿರೋಧಕ ಶಕ್ತಿ ಕುಗ್ಗುವುದು ಸೇರಿ ಬೇರೆ ಬೇರೆ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಉದ್ದೀಪನ ಮದ್ದಿನ ಕರಾಳ ಮುಖವನ್ನು ರಘು ಬಿಚ್ಚಿಟ್ಟರು.
ವಿಶ್ವಚಾಂಪಿಯನ್‌ಶಿಪ್: ರಘು ರಾಮಪ್ಪಗೆ 2 ಚಿನ್ನ
ಮೇ ತಿಂಗಳಲ್ಲಿ ಸಿಂಗಪೂರ್‌ನಲ್ಲಿ ಏಷ್ಯಾ ಮಟ್ಟದ ನೈಸರ್ಗಿಕ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗಿಯಾದ ರಘು, ಅಲ್ಲಿ ಗೆಲುವು ಪಡೆದು ವಿಶ್ವ ಚಾಂಪಿಯನ್‌ಶಿಪ್ ಗೆ ಅಡಿಯಿಟ್ಟರು. 30-35 ರಾಷ್ಟಗಳ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದ ಈ ಕೂಟದಲ್ಲಿ ಭಾರತದಿಂದ ಕೇವಲ ಇಬ್ಬರು ಕನ್ನಡಿಗರಾದ ರಘುರಾಮಪ್ಪ, ಶೋಧನ್ ರೈ ಪಾಲ್ಗೊಂಡಿದ್ದರು. ಇತ್ತೀಚೆಗೆ ಆಗಸ್ಟ್‌ನಲ್ಲಿ ನ್ಯೂಜಿಲೆಂಡ್ ನಲ್ಲಿ ಆಯೋಜಿಸಿದ್ದ ವಿಶ್ವಚಾಂಪಿಯನ್‌ಶಿಪ್ ನಲ್ಲಿ ರಘು 2 ಚಿನ್ನ ಗೆದ್ದಿದ್ದಾರೆ.
ತೇಜಸ್ವಿನಿ ಸಿ ಶಾಸ್ತ್ರಿ