ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಕ್ಷೇತ್ರದಲ್ಲಿ ತಮ್ಮ ಅಧಿಕಾರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿರುವ ಬಗ್ಗೆ ನಾನು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ. ಆದರೆ ಭಾವನಾತ್ಮಕ ವ್ಯಕ್ತಿಗಳಿಗೆ ಮಾತ್ರ ಅದು ಅರ್ಥವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿಯಲ್ಲಿ ಅವರು ನಾಲ್ಕು ಚುನಾವಣೆಗಳನ್ನು ಸತತವಾಗಿ ಗೆದ್ದಿದ್ದಾರೆ. ಜನ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಆ ಭಾವನೆಗಳು ಸಹಜ. ಭಾವನಾತ್ಮಕ ವ್ಯಕ್ತಿಗಳಿಗೆ ಮಾತ್ರ ಅದು ಅರ್ಥವಾಗುತ್ತದೆ. ಆ ಸ್ಥಾನಕ್ಕೆ ಅವರು ಬರಬೇಕಾದರೆ ಆ ಕ್ಷೇತ್ರದ ಜನರೇ ಕಾರಣ. ಹೀಗಾಗಿ ಸಿಎಂ ಅವರು ಭಾವನಾತ್ಮಕವಾಗಿ ಮಾತನಾಡಿರಬಹುದು. ಅದರಲ್ಲಿ ತಪ್ಪೇನಿಲ್ಲ ಎಂದರು.
ಅವರ ಮಾತುಗಳು ತಾಯಿ ಹೃದಯ ಇರುವವರಿಗೆ ಮಾತ್ರ ಅರ್ಥವಾಗುತ್ತವೆ. ಬೇರೆಯವರಿಗೆ ಅದು ಅರ್ಥವಾಗಲ್ಲ. ನನ್ನ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ನಾನು ಅನೇಕ ಸಲ ಹೇಳಿದ್ದೇನೆ, ನನಗೆ ರಾಜಕೀಯ ಜನ್ಮ ಕೊಟ್ಟವರು ರಾಮನಗರದ ಜನ ಅಂತ. ಅವರ ಬಗ್ಗೆ ಹೇಳುವಾಗ ನಾನೂ ಭಾವುಕನಾಗಿದ್ದೇನೆ. ಇದು ಮನುಷ್ಯ ಸಹಜ ಗುಣ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಬೆಳಗಾವಿ ಪ್ರಕರಣದ ಪ್ರೊಡ್ಯೂಸರ್, ಡೈರೆಕ್ಟರ್ ಡಿಕೆಶಿ : ಸಿ.ಟಿ.ರವಿ
ಮುಖ್ಯಮಂತ್ರಿ ಬದಲಾವಣೆ ಆಗುತ್ತದೆಂದು ಬೊಮ್ಮಾಯಿ ಅವರು ಹೀಗೆ ಮಾತನಾಡಿದ್ದಾರೆ ಎನ್ನುವುದನ್ನು ನಾನು ಒಪ್ಪಲು ತಯಾರಿಲ್ಲ ಎಂದು ಎಚ್ ಡಿಕೆ ಹೇಳಿದರು.