Advertisement

ಅಕ್ಷರದಿಂದ ಮಾತ್ರ ಬೆಳಕಿನತ್ತ ಸಾಗಲು ಸಾಧ್ಯ: ಮುನಿರಾಜು

11:46 AM Apr 22, 2019 | pallavi |

ಧಾರವಾಡ: ಅಕ್ಷರ ವಂಚಿತ ಸಮುದಾಯಗಳು ಅಕ್ಷರದ ಮೂಲಕ ಮಾತ್ರ ಬೆಳಕಿನತ್ತ ಸಾಗಲು ಸಾಧ್ಯ. ಪ್ರತಿಯೊಬ್ಬರೂ ತಮ್ಮಲ್ಲಿರುವ ಪ್ರತಿಭೆಯನ್ನು ಪೋಷಿಸಿ, ಬೆಳೆಸಿಕೊಂಡು ಉದಾತ್ತ ಕನಸುಗಳನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್‌. ಮುನಿರಾಜು ಹೇಳಿದರು.

Advertisement

ದೊಡ್ಡನಾಯಕನಕೊಪ್ಪ ಬೇಂದ್ರೆ ನಗರದ ಪರಿಶಿಷ್ಟ ವರ್ಗಗಳ (ಎಸ್‌ಟಿ) ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡು ಮತ್ತು ಮೂರನೇ ರ್‍ಯಾಂಕ್‌ಗಳನ್ನು ಪಡೆದಿರುವುದು ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಹಾಸ್ಟೆಲ್ ವಿದ್ಯಾರ್ಥಿಗಳು ಎಂಬುದು ಹೆಮ್ಮೆಯ ಸಂಗತಿ. ಧಾರವಾಡ ಜಿಲ್ಲೆಯಲ್ಲಿಯೂ 14ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿಗಳು ಈ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿ ಉತ್ತೀರ್ಣರಾಗಿರುವುದು ಅಭಿಮಾನ ತಂದಿದೆ ಎಂದರು.

ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಪ್ರತಿಭೆ ಯಾರ ಸ್ವತ್ತೂ ಅಲ್ಲ, ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ನಮ್ಮ ಗುರಿ ತಲುಪಬಹುದು. ಯಾವುದೇ ಆಕರ್ಷಣೆಗಳಿಗೆ ಒಳಗಾಗದೇ ಅಧ್ಯಯನಶೀಲ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಯಶಸ್ಸಿಗೆ ಯಾವುದೇ ಅಡ್ಡದಾರಿ, ವಾಮಮಾರ್ಗಗಳು ಇರುವುದಿಲ್ಲ ಎಂದು ಹೇಳಿದರು.

ಪಿಯುಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ 14 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಾಜ್ಯ ವಾರ್ಡನ್‌ ಸಂಘದ ಅಧ್ಯಕ್ಷ ಪ್ರಹ್ಲಾದ ಗೆಜ್ಜಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಸಿ.ಬಿ. ಯಮನೂರ, ಟಿ.ವಿ. ಹಬೀಬ, ಟಿ.ಬಿ. ಮಾದನಬಾವಿ, ಎಂ.ವೈ. ಹುಲಿಗೆಜ್ಜಿ ಇದ್ದರು. ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಗುದಗಿಯವರ ಸ್ವಾಗತಿಸಿದರು. ಸಂಜಯ್‌ ಪಟೇದ, ಜ್ಯೋತಿ ಬಿ.ಆರ್‌. ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next