ನನ್ನ ಬದುಕಿನ ವಿಧಿಗೆ ನಿನ್ನನ್ನು ಹೊಣೆಮಾಡಿ ನಾ ಪಡುವ ಸುಖ ಅಷ್ಟರಲ್ಲೇ ಇದೆ. ನಿನ್ನ ಬದುಕು ಹಸನಾಗಲಿ. ನಿನ್ನ ಕೈ ಹಿಡಿಯುವ ಹುಡುಗನೊಂದಿಗೆ ಪ್ರಾಮಾಣಿಕವಾಗಿ ಬದುಕುವ ಮನಸು , ನಿಷ್ಕಲ್ಮಷವಾಗಿ ಪ್ರೀತಿಸುವ ಹೃದಯ ನಿನದಾಗಲಿ.
ನಿರ್ಭಾವುಕಿ,
ನಾನು ನಿಂತೇ ಇದ್ದೆ. ನನ್ನತ್ತ ಬೆನ್ನು ಮಾಡಿ ನೀ ಹೋಗುವುದ ನೋಡುತ್ತಾ. ಮತ್ತೆ ನಿನ್ನನ್ನ ನಾನು ಯಾವತ್ತೂ, ನನ್ನವಳನ್ನಾಗಿ ನೋಡೋಕೆ ಸಾಧ್ಯವಿಲ್ಲವೆಂಬ ಸತ್ಯ ಒಪ್ಪಿಕೊಳ್ಳುವ ಚೈತನ್ಯ ನನ್ನೊಳಗೆ ಹುಟ್ಟದೆಯೇ, ಸೋತುಹೋದ ಖಾಲಿ ಕೈಗಳಲ್ಲಿ, ನೀ ಕೊಟ್ಟುಹೋದ ನಿನ್ನ ಮದುವೆ ಕರೆಯೋಲೆಯಿತ್ತು. ಆಮಂತ್ರಣ ಪತ್ರ ಕೊಟ್ಟ ಘಳಿಗೆಯಲ್ಲಿ, ಮದುವೆಗೆ ಬರಬೇಡವೆಂಬ ವಿನಂತಿಯಿತ್ತು ನಿನ್ನ ಕಂಗಳಲ್ಲಿ. ಇದ್ದಕ್ಕಿದ್ದಲೇ ದೂರ ಹೊರಟು ನಿಂತ ನಿನ್ನ ಬಳಿ ಕಾರಣ ಕೇಳಬೇಕೆಂದುಕೊಂಡೆ. ವಿನಾಕಾರಣ ಹುಟ್ಟಿದ ಪ್ರೀತಿ, ಈಗ ಸಾವಿನ ಸನ್ನಿಧಿಯಲ್ಲಿರುವಾಗ ಕಾರಣ ಕೇಳಿ, ಧುತ್ತನೆ ಆದ ಗಾಯಕ್ಕೆ, ಅದರ ನೋವಿಗೆ ಔಷಧಿ ಹಚ್ಚಿ ಇಲಾಜು ಮಾಡಿಕೊಂಡು, ಮತ್ತೆ ಬದುಕಿಗೆ ಜೀವಂತಿಕೆ ತುಂಬಿಕೊಳ್ಳುತ್ತೇನೆಂಬುದು ಭ್ರಮೆಯೆನ್ನಿಸಿ ಸುಮ್ಮನಾದೆ.
ನೋಡು ಹುಡುಗಿ ದೂರವೆಂಬುದು ಮತ್ತೆ ನೀ ಸಿಗುತ್ತೀಯೆಂಬ ನಂಬಿಕೆ ಕೊಟ್ಟಾಗೆಲ್ಲಾ, ಆ ನೋವಿನೊಳಗೊಂದು ಸುಖ ಹುಡುಕಿಕೊಂಡ ಮನಸ್ಸು ಇಡೀ ರಾತ್ರಿಯನ್ನು ಸುಟ್ಟು ಬೆಳಕಿಗೆ ಕಣ್ಣು ತೆರೆಯುತ್ತಿತ್ತು. ಆ ನಿದ್ದೆಗೆಟ್ಟ ಕಂಗಳಿಗೆ ನೀ ಬಂದು ಚುಂಬಿಸಿ, ನನ್ನ ಹಗಲನ್ನು ಮತ್ತಷ್ಟು ಚಂದಗೊಳಿಸುತ್ತಿದ್ದೆ. ಅದಕ್ಕೆ ವಿರಹ ಅಂತ ಚಂದದ ಹೆಸರಿಟ್ಟು ಜಗತ್ತು ಕರೆಯುತ್ತಿತ್ತು. ಆದರೀಗ ಏನಾಗಿಹೋಯ್ತು ನೋಡು… ಈ ಬದುಕಿನಿಂದ ನೀನು ಶಾಶ್ವತವಾಗಿ ಎದ್ದು ಹೊರಟುಬಿಟ್ಟೆ , ಉಹುಃ ನಾನಿನ್ನು ಎಷ್ಟೇ ರಾತ್ರಿಗಳನ್ನು ನಿದ್ದೆಗೆಟ್ಟು ಸುಟ್ಟರೂ, ಬದುಕಿನ ಕಟ್ಟ ಕಡೆಯ ಕ್ಷಣದವರೆಗೂ ನೀನು ಎದುರು ಬರಲಾರೆ. ನೀನಿಲ್ಲದೇ ನನಗೇನಿದೆ ಅಂತ ಎಷ್ಟೇ ದೀನವಾಗಿ ಹಾಡಿಕೊಂಡರೂ ನಿನಗದು ಕೇಳಿಸಲಾರದು. ಎರಡು ತೀರಗಳು ಕಾಣಿಸಲಾರದಷ್ಟು ದೂರ ದೂರ. ಕೈ ಬಳೆಯ ಸದ್ದು, ಕಾಲ್ಗೆಜ್ಜೆ ನಾದ, ನಿನ್ನ ನಗುವಿನ ಪಲಕು, ಹುಸಿ ಮುನಿಸಿನ ಚಂದದ ಘಳಿಗೆಗಳು, ನೀ ನನ್ನ ಜೀವಾ ಕಣೋ ಅಂತ ಬರಸೆಳೆದು ಅಪ್ಪಿಕೊಂಡು ಕೊಟ್ಟ ಮುತ್ತುಗಳು, “ನಿನ್ನನ್ನ ಇವತ್ತು ನೋಡೆ ಹೋಗಿದ್ರೆ ಸತ್ತೇ ಹೋಗ್ತಿದ್ದೆ ಕಣೋ’ ಅನ್ನೋ ನಿನ್ನ ಮಾತಿಗೆ ತುಂಬಿಕೊಳ್ಳುತ್ತಿದ್ದ ನನ್ನ ಕಂಗಳು…ಅದನ್ನೆಲ್ಲಾ ನಂಬಡ್ಯಾ ದಡ್ಡ, ಬದುಕು ಬೇರೇನೇ ಇದೆ ಕಣೋ ಅನ್ನುವಂತೆ ಇವತ್ತು ಎದ್ದು ಹೋದ ನಿನ್ನ ರೀತಿ. ತಥ್ ! ದರಿದ್ರ ಬದುಕೇ, ನಿನ್ನ ಒಡಲಲ್ಲಿ ಇದೆಂಥಾ ವಿರೋಧಾಭಾಸ ? ಒಲವು ಮೂಡಿದ ಕಂಗಳಲ್ಲೇ, ನಿರ್ಲಕ್ಷ್ಯ ಹುಟ್ಟುವುದನ್ನು ನೋಡುವುದಕ್ಕಿಂತ ಮತ್ತೂಂದು ನೋವಿದೆಯಾ ಬದುಕಿಗೆ?
ಹೋಗಲಿ ಬಿಡು, ನಿನ್ನ ಅನಿವಾರ್ಯತೆಗಳೇನಿದ್ದಾವೋ, ನನ್ನ ಬದುಕಿನ ವಿಧಿಗೆ ನಿನ್ನನ್ನು ಹೊಣೆಮಾಡಿ ನಾ ಪಡುವ ಸುಖ ಅಷ್ಟರಲ್ಲೇ ಇದೆ. ನಿನ್ನ ಬದುಕು ಹಸನಾಗಲಿ. ನಿನ್ನ ಕೈ ಹಿಡಿಯುವ ಹುಡುಗನೊಂದಿಗೆ ಪ್ರಾಮಾಣಿಕವಾಗಿ ಬದುಕುವ ಮನಸು, ನಿಷ್ಕಲ್ಮಷವಾಗಿ ಪ್ರೀತಿಸುವ ಹೃದಯ ನಿನದಾಗಲಿ.
ಬದುಕು ಕರುಣಾಮಯಿ, ಕೈ ಹಿಡಿಯುತ್ತದೆ. ಹಾಗೆಯೇ, ಬದುಕು ಮಾಯಾವಿ! ಅದು ಎಲ್ಲಾ ತಪ್ಪುಗಳನ್ನು ಕ್ಷಮಿಸುವುದಿಲ್ಲ!!
ಒಬ್ಬಂಟಿ
ಜೀವ ಮುಳ್ಳೂರು