Advertisement

ಅನುದಾನಿತ ಶಾಲೆಗಳಿಗೆ ಮಾತ್ರ ಆರ್‌ಟಿಇ?

07:34 AM Jan 10, 2018 | |

ಬೆಂಗಳೂರು: ಮುಂದಿನ ವರ್ಷದಿಂದ ಖಾಸಗಿ ಶಾಲೆಗಳಿಗೆ ಆರ್‌ಟಿಇ ಸೀಟು ಹಂಚಿಕೆ ಸ್ಥಗಿತಗೊಳಿಸಿ ಅನುದಾನಿತ ಶಾಲೆಗಳಿಗೆ ಮಾತ್ರ ಸೀಟು ನೀಡುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಈಗಾಗಲೇ ಆರ್‌ಟಿಇ ಅಡಿ ದಾಖಲಾಗಿರುವ 5.14 ಲಕ್ಷ ವಿದ್ಯಾರ್ಥಿಗಳು 8ನೇ ತರಗತಿ ಪೂರೈಸುವವರೆಗೂ ಅನುದಾನ ನೀಡಲು ತೀರ್ಮಾನಿಸಿದೆ. ಅನುದಾನಿತ ಶಾಲೆಗಳ ಶಿಕ್ಷಕರ ವೇತನ ಸೇರಿ ಇತರೆ ಅನುದಾನ
ಸರ್ಕಾರದಿಂದ ನೀಡಲೇಬೇಕಾಗಿದ್ದರಿಂದ ಆರ್‌ಟಿಇ ಕಾಯ್ದೆಯನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸಮಗ್ರವಾಗಿ ಅನುಷ್ಠಾನ ಮಾಡಿ, ಸದುಪಯೋಗಕ್ಕೆ ಬೇಕಾದಂತೆ ನಿಯಮದಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉನ್ನತ ಮೂಲ “ಉದಯವಾಣಿ’ಗೆ ತಿಳಿಸಿದೆ.

Advertisement

ಆರ್‌ಟಿಇ ಅಡಿಯಲ್ಲಿ ಶೇ.25ರಷ್ಟು ವಿದ್ಯಾರ್ಥಿಗಳನ್ನು ಸೇರಿಸಿಕೊಂಡಿರುವ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾ ವತಿ ಹಣ ನೀಡುವುದನ್ನು ನಿಲ್ಲಿಸಬೇಕು. ಹಾಗೆಯೇ, ಸಾಮಾಜಿಕ ಬದ್ಧತೆಯಡಿ ಖಾಸಗಿ ಶಾಲೆಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಉಚಿತ ಸೀಟು
ನೀಡುವಂತಾಗಬೇಕು ಎಂಬ ಹಕ್ಕೊತ್ತಾಯವನ್ನು ಶಿಕ್ಷಣ ತಜ್ಞರು ಸರ್ಕಾರದ ಮುಂದಿಟ್ಟಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, 2018-19ನೇ ಸಾಲಿನಿಂದ ಆರ್‌ಟಿಇ ನಿಯಮದಲ್ಲಿ ಕೆಲವೊಂದು ಬದಲಾವಣೆ ತರಲು ಮುಂದಾಗಿದೆ. ಹೀಗಾಗಿ ಆರ್‌ಟಿಇ ಅರ್ಜಿ ಆಹ್ವಾನದ ತೀರ್ಮಾನ ಇನ್ನೂ ತೆಗೆದುಕೊಂಡಿಲ್ಲ. ಆರ್‌ಟಿಇ ಮಕ್ಕಳ ಶುಲ್ಕ ಮರುಪಾವತಿಯಡಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖಾಸಗಿ ಶಾಲೆಗಳಿಗೆ ನೀಡುವುದನ್ನು ನಿಲ್ಲಿಸಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ಮಕ್ಕಳಿಗೆ ವ್ಯವಸ್ಥೆ ಮಾಡುವ ಬಗ್ಗೆಯೂ ಅಧಿಕಾರಿಗಳು ನಿಯಮ ರೂಪಿಸುತ್ತಿದ್ದಾರೆ.

ಸರ್ಕಾರ ಶಾಲೆ ಬಲವರ್ಧನೆ: 2012ರಲ್ಲಿ ರಾಜ್ಯ ಸರ್ಕಾರ ಆರ್‌ಟಿಇ ಅನುಷ್ಠಾನ ಮಾಡಿ, 25%ರಷ್ಟು ಸೀಟನ್ನು ಖಾಸಗಿ ಶಾಲೆಯಲ್ಲಿ ಮೀಸಲಿಟ್ಟಿತ್ತು. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಆ ಸೀಟು ಒದಗಿಸುತ್ತ ಬಂದಿದ್ದರೂ, ಆರ್ಥಿಕವಾಗಿ ಸಬಲತೆ ಸಾಧಿಸಿದ ಕುಟುಂಬದ ಮಕ್ಕಳು ಸೇರಿಕೊಳ್ಳುತ್ತಿದ್ದಾರೆ. ಸದ್ಯ 5.14 ಲಕ್ಷ ಮಕ್ಕಳು ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ಮೊದಲ ವರ್ಷದಲ್ಲಿ ಆರ್‌ಟಿಇ
ಅಡಿಯಲ್ಲಿ ಸೇರಿದ ಮಕ್ಕಳೀಗ 6 ತರಗತಿಯಲ್ಲಿದ್ದಾರೆ. ವರ್ಷಕ್ಕೆ ಕನಿಷ್ಠ 80 ಕೋಟಿ ರೂ.ಗಳಂತೆ 500 ಕೋಟಿಗೂ ಅಧಿಕ ರೂ.ಗಳನ್ನು ಖಾಸಗಿ ಶಾಲೆಗೆ ಹಂಚಿಕೆ ಮಾಡಿಯಾಗಿದೆ. ಇದೇ ಅನುದಾನವನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗೆ ಒದಗಿಸಿಕೊಂಡು, ಮಕ್ಕಳ ಸಂಖ್ಯೆಯನ್ನು 
ಹೆಚ್ಚಿಸಲು ಬೇಕಾದ ರೀತಿಯಲ್ಲಿ ನಿಯಮ ತರಲು ಸಿದ್ಧತೆ ನಡೆದಿದೆ. 

ಇಲಾಖೆಯಿಂದ ಪ್ರಸ್ತಾವನೆ: ಪ್ರಕಸ್ತ ಸಾಲಿನ ಶೈಕ್ಷಣಿಕ ವರ್ಷ ಕೊನೆಯಾಗುತ್ತಿದೆ. ಮುಂದಿನ ವರ್ಷಕ್ಕೆ ದಾಖಲಾತಿ ಪ್ರಕ್ರಿಯೆ ಆರಂಭಿಸುವ ಮುನ್ನ ಆರ್‌ಟಿಇ ಅರ್ಜಿ ಆಹ್ವಾನಿಸಬೇಕು. ಖಾಸಗಿ ಶಾಲೆಗಳು ಶೇ.25ರಷ್ಟು ಸೀಟು ಮೀಸಲಿಡಬೇಕು. ಹೀಗಾಗಿ ಮುಂದಿನ ವರ್ಷದ ಆರ್‌ಟಿಇ ಅಧಿಸೂಚನೆ ಪ್ರಕಟಿಸುವ ಅನುಮತಿ ಕೋರಿ ಇಲಾಖೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಸರ್ಕಾರದಿಂದ ಈವರಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಪಾಲಕ-ಪೋಷಕರಲ್ಲಿ ಆತಂಕ: ಪ್ರತಿ ವರ್ಷ ಜನವರಿಯಲ್ಲಿ ಆರ್‌ಟಿಇ ಅರ್ಜಿ ಪ್ರಕ್ರಿಯೆ ನಡೆಯುತ್ತದೆ. 2018-19ನೇ ಸಾಲಿನ ಆರ್‌ಟಿಇ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಈ ಮಧ್ಯೆ, ರಾಜ್ಯದ ಬಹುತೇಕ ಖಾಸಗಿ ಶಾಲೆಗಳು ಕಾನೂನು ಬಾಹಿರವಾಗಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಿವೆ. ಆರ್‌ಟಿಇ ಸಂಬಂಧ ಸರ್ಕಾರ ಇನ್ನೂ ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉಚಿತ ಸೀಟಿನಡಿ ಪ್ರತಿಷ್ಠಿತ ಶಾಲೆಗೆ ಮಕ್ಕಳನ್ನು ಸೇರಿಸಬೇಕೆಂಬ ಆಶಯ ಹೊತ್ತಿರುವ ಸಾವಿರಾರು ಮಕ್ಕಳ ಪಾಲಕ-ಪೋಷಕರು ಗೊಂದಲಕ್ಕೆ ಸಿಲುಕಿದ್ದಾರೆ. 

Advertisement

ಅನುದಾನ ಕೊಟ್ಟಿಲ್ಲ
ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗೆ ದಾಖಲಾಗಿರುವ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಶುಲ್ಕ ಮರುಪಾವತಿಯ ಅನುದಾನ ಇನ್ನೂ ಸರ್ಕಾರ ಬಿಡುಗಡೆ
ಮಾಡಿಲ್ಲ. ಹಲವು ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಆರ್‌  ಟಿಇ ನಿಯಮದಲ್ಲಿ ಏನೇ ಬದಲಾವಣೆ ತಂದರೂ ನಮ್ಮ ಆಕ್ಷೇಪಣೆ ಇಲ್ಲ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗೆ ಸರ್ಕಾರದಿಂದ ಬರಬೇಕಿದ್ದ ಅನುದಾನವನ್ನು ಮತ್ತು ಈಗಾಗಲೇ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕ
ಮರುಪಾವತಿ ಸರಿಯಾಗಿ ಮಾಡಬೇಕು ಎಂದು ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಹೇಳಿದ್ದಾರೆ.

ಅನುದಾನಿತ ಶಾಲೆಗಳಲ್ಲಿ ಮಾತ್ರ ಆರ್‌ಟಿಇ ಸೀಟು ಭರ್ತಿ ಮಾಡುವ ಸಂಬಂಧ ಸರ್ಕಾರಿ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಆರ್‌ಟಿಇ ಅರ್ಜಿ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇನ್ನೂ ಉತ್ತರ ಬಂದಿಲ್ಲ.
 ●ಡಾ.ಪಿ.ಸಿ.ಜಾಫ‌ರ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next