Advertisement
ಕುಂದಾಪುರ: ಈಗ ಬಹುತೇಕ ಎಲ್ಲ ಸ್ತರದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿಕಟವಾಗುತ್ತಿರುವ ಸಂದರ್ಭ. ಎಲ್ಲರೂ ಪರೀಕ್ಷೆಗಾಗಿ ಸಿದ್ಧತೆ ನಡೆಸುವ ಭರದಲ್ಲಿದ್ದಾರೆ. ಸಿದ್ಧತೆ ಎಂದಾಗ ಒತ್ತಡ ಸಹಜ. ಆದರೆ ಅದನ್ನು ಬಿಟ್ಟುಬಿಡಿ. ಹೆಚ್ಚು ಒತ್ತಡ ನಿಮ್ಮ ಓದಿನ ಕಡೆಗಿನ ಏಕಾಗ್ರತೆಗೆ ಭಂಗ ತರುತ್ತದೆ.
Related Articles
Advertisement
ಓದುವ ಸಂದರ್ಭ ಬರುವ ಅನುಮಾನ ಗಳನ್ನು ಆಗಲೇ ಪರಿಹರಿಸಿಕೊಳ್ಳಿ. ಆ ವಿಷಯದ ಕುರಿತು ತಿಳಿದವರ ಬಳಿ ಕೇಳಿ. ಅಧ್ಯಾಪಕರನ್ನು ಸಂಪರ್ಕಿಸಿ ಕೇಳಲು ಹಿಂಜರಿಕೆ, ಮುಜುಗರ ಬೇಡ. ಅರ್ಥವಾಗದಿದ್ದಾಗ ಹಿಂಜರಿದು ಮೌನ ವಹಿಸಿದರೆ ನಿಮಗೇ ಅಪಾಯಕಾರಿ.
ಓದುವಾಗ ಮುಖ್ಯ ವಿಷಯಗಳನ್ನು ಹೈಲೈಟರ್ ಅಥವಾ ಅಡಿಗೆರೆ ಹಾಕುವ ಮೂಲಕ ಗುರುತಿಸಿಟ್ಟುಕೊಳ್ಳಿ. ಒಂದು ಹಂತದ ಓದು ಮುಗಿದ ಮೇಲೆ ಪುಸ್ತಕ ಮುಚ್ಚಿಟ್ಟು ಓದಿದ್ದನ್ನು ನೆನಪಿಸಿಕೊಳ್ಳಿ.
ಆಯಾ ಪುಟದಲ್ಲಿನ ಮುಖ್ಯ ಶಬ್ದಗಳನ್ನು ಪುಟದ ಬದಿಯಲ್ಲಿ ಬರೆದಿಡಿ. ಆ ಪದಗಳು ಇಡೀ ಪುಟದ ಸಾರಾಂಶ ಹೇಳುವಂತಿರಲಿ. ಪರೀಕ್ಷೆ ಹಿಂದಿನ ದಿನ ಕೇವಲ ಪುಟ ತಿರುವಿ ಹಾಕುವಾಗ ಆ ಶಬ್ದಗಳು ಕಣ್ಣಿಗೆ ಬಿದ್ದರೂ ಇಡೀ ಪುಟದ ಸಾರಾಂಶ ನೆನಪಿಗೆ ಬರುವಂತಿರಬೇಕು.
ಕೆಲವರಿಗೆ ಮೌನದಲ್ಲಿ ಕಲಿಯಲು ಆಗುವುದಿಲ್ಲ. ಅಂತಹವರು ಸಣ್ಣದಾಗಿ ಸಂಗೀತ ಅಥವಾ ಅವರ ಆಸಕ್ತಿಯ ಆಡಿಯೋ ಕೇಳುತ್ತಾ ಓದಬಹುದು. ಆದರೆ ಅದರ ಧ್ವನಿಯೇ ದೊಡ್ಡದಾಗಿ ಓದುವತ್ತ ಗಮನ ಕಡಿಮೆಯಾಗದಿರಲಿ.
ಒಂದೇ ಕಡೆ ಕುಳಿತು ಓದುವುದಕ್ಕಿಂತ ಸ್ವಲ್ಪ ಅಡ್ಡಾಡುತ್ತಾ ಓದಿದರೆ ವ್ಯಾಯಾಮವೂ ಆಗುತ್ತದೆ. ಹೀಗೂ ಮಾಡಬಹುದು – ಸ್ವಲ್ಪ ಹೊತ್ತು ಕುಳಿತು ಓದಿ, ಮತ್ತೆ ಸ್ವಲ್ಪ ಹೊತ್ತು ಮೆಲ್ಲನೆ ನಡೆದಾಡುತ್ತಾ ಓದಬಹುದು.
ನಿದ್ದೆಗೆಟ್ಟು ಓದುವ ಅಭ್ಯಾಸ ಬೇಡವೇ ಬೇಡ. ಮೆದುಳಿಗೆ ಸಾಕಷ್ಟು ವಿಶ್ರಾಂತಿ ಕೊಡದಿದ್ದರೆ ಅದು ಮಾನಸಿಕವಷ್ಟೇ ಅಲ್ಲ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಜತೆಗೆ ಗೊಂದಲ ಹೆಚ್ಚಾಗುತ್ತದೆ, ನೆನಪು ಮಾಡಿಕೊಳ್ಳಲು ಕಷ್ಟವಾಗುತ್ತದೆ.
ಅತಿಯಾಗಿ ಚಹಾ, ಕಾಫಿ ಸೇವನೆ ಒಳ್ಳೆಯದಲ್ಲ. ಕೆಫೀನ್ ಅಂಶ ದುಷ್ಪರಿಣಾಮಕಾರಿ. ರಾತ್ರಿ ಮಲಗುವ ಮುನ್ನ ನನಗೆ ಇದೊಂದು ವಿಷಯ ಕಷ್ಟ, ಇದರಲ್ಲಿ ಅಂಕ ಗಳಿಕೆ ಕಷ್ಟ ಎಂಬಂತಹ ಚಿಂತನೆ ಮಾಡಲೇಬೇಡಿ. ಓದಿದ್ದಕ್ಕೆ ಫಲಿತಾಂಶ ಸಿಕ್ಕೇ ಸಿಗುತ್ತದೆ.
ಪರೀಕ್ಷೆಯ ದಿನ ಬೆಳಗ್ಗೆ ಹೊಟ್ಟೆ ತುಂಬಿಸಿಕೊಳ್ಳದೆ ಅವಸರದಲ್ಲಿ ತೆರಳಬೇಡಿ. ಅರ್ಧ ಗಂಟೆ ಮೊದಲೇ ಪರೀಕ್ಷಾ ಕೇಂದ್ರ ತಲುಪಿ. ಅಲ್ಲಿನ ವಾತಾವರಣಕ್ಕೆ ಹೊಂದಿ ಕೊಳ್ಳಲು ಇದು ಅನುಕೂಲಕಾರಿ. ಪರೀಕ್ಷೆ ಕೊಠಡಿಯ ಹೊರಗಿದ್ದಾಗ ಏನನ್ನು ಓದಿದ್ದೇನೆ, ಗೆಳೆಯರು ಏನು ಓದಿದ್ದಾರೆ ಎಂಬ ಕುರಿತು ವಿಚಾರ-ವಿಮರ್ಶೆ ಅನಗತ್ಯ. ನಾನು ಇದು ಓದಿಲ್ಲ, ಇದನ್ನು ಗೆಳೆಯರು ಓದಿದ್ದಾರೆ ಎಂಬ ಅಂಶಗಳು ನಿಮ್ಮ ಆತ್ಮಸ್ಥೈರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ನಾನೇನೂ ಓದಿಲ್ಲ ಎಂದು ಹಾದಿತಪ್ಪಿಸುವ ಗೆಳೆಯರು ಭಯೋತ್ಪಾದಕರಿಗೆ ಸಮ! ಅಂತಹವರಿಂದ ದೂರವಿರಿ. ದೀರ್ಘ ಉಸಿರಾಟ ತೆಗೆದುಕೊಂಡು ಆರಾಮವಾಗಿ ಪರೀಕ್ಷಾ ಕೇಂದ್ರ ಪ್ರವೇಶಿಸಿ. ಹೆತ್ತವರಿಗೆ ಕಿವಿಮಾತು
ಓದುವುದು ಮಾತ್ರ ವಿದ್ಯಾರ್ಥಿಗಳ ಕೆಲಸ. ಆದ್ದರಿಂದ ಪರೀಕ್ಷಾ ಫಲಿತಾಂಶದ ಕುರಿತು ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಚೆನ್ನಾಗಿ ಓದು, ಅರ್ಥ ಮಾಡಿಕೊಂಡು ಓದು, ಎಲ್ಲ ಪ್ರಶ್ನೆಗಳಿಗೂ ಸಾವಧಾನ ವಾಗಿ ಉತ್ತರ ಬರೆ, ಉತ್ತಮ ಫಲಿತಾಂಶ ಬಂದೇ ಬರುತ್ತದೆ ಎಂದು ಶಿಕ್ಷಕರು ಹಾಗೂ ಪೋಷಕರು ಮಕ್ಕಳನ್ನು ಹುರಿದುಂಬಿಸಬೇಕು. ಇಷ್ಟೇ ಅಂಕ
ಬರಬೇಕು ಎಂಬ ಶರತ್ತು ವಿಧಿಸುವುದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
-ಡಾ| ಪ್ರಕಾಶ್ ತೋಳಾರ್ ಮನಶಾÏಸ್ತ್ರ ವೈದ್ಯರು, ಕುಂದಾಪುರ