ಮಳೆ ಅಂದರೆ ಬರೀ ನೀರಲ್ಲ, ಜೀವನ ಪ್ರೀತಿಯ ರಸಧಾರೆ ಎಂಬುದು ಅರ್ಥವಾಗಬೇಕೆಂದರೆ ಮಲೆನಾಡಿನ ಮಳೆಗಾಲ ನೋಡಲೇಬೇಕು. ಮಳೆಗಾಲ ಕೂಡ ಸೃಷ್ಟಿಯ ಅವಿಭಾಜ್ಯ ಅಂಗ ಎಂದು ಅನಿಸುವುದು ಆಗಲೇ.
ಮಲೆನಾಡು, ಕರಾವಳಿ, ಅರೆಮಲೆನಾಡಿನ ಪ್ರದೇಶಗಳಲ್ಲಿ ಮಳೆಗಾಲದ ಸ್ವಾಗತಕ್ಕೆ ತಯಾರಿ ಎಂದರೆ ಯಾವ ಅದ್ದೂರಿ ಮದುವೆಯ ತಯಾರಿಗೂ ಕಡಿಮೆ ಇಲ್ಲ. ಸಾಮ್ಯಾನವಾಗಿ ಜೂನ್ ಮೊದಲ ವಾರದ ಅಂತ್ಯದ ವೇಳೆಗೆ ತಯಾರಿ ಕಾರ್ಯ ಭರದಿಂದ ಸಾಗುತ್ತಿರುತ್ತದೆ. ಸೌದೆ ಸಂಗ್ರಹ, ಅಡಿಕೆ ಹಾಳೆಯನ್ನು ಹಿತ್ತಲ ಮನೆಯಲ್ಲಿ ದಾಸ್ತಾನು ಮಾಡುವುದು, ಮನೆ ಚಾವಣಿಯ ಒಡೆದ ಹೆಂಚುಗಳನ್ನು ತೆಗೆದು ಹೊಸ ಹೆಂಚುಗಳನ್ನು ಹಾಕುವುದು, ಮನೆ ಸುತ್ತ-ಮುತ್ತಲ ಚರಂಡಿಗಳಲ್ಲಿ ನೀರು ಸರಿಯಾಗಿ ಹೋಗುತ್ತಿದೆಯೇ ಎಂದು ಪರೀಕ್ಷಿಸುವುದು, ನಾಲ್ಕು ತಿಂಗಳಿಗಾಗುವಷ್ಟು ದಿನಸಿ ಸಂಗ್ರಹ. ಈ ಎಲ್ಲ ಕೆಲಸಗಳೂ ಮೇ ಆರಂಭದ ಹೊತ್ತಿಗೆ ಮುಗಿದಿರುತ್ತದೆ.
ಮೇ ಅಂತ್ಯದೊಳಗೆ ಹೆಂಗಸರು ಕುರುಕುಲ ತಿಂಡಿ ಮಾಡುವುದರಲ್ಲಿ ಮಗ್ನರಾಗುತ್ತಾರೆ. ಮಳೆಗಾಲದ ಚಳಿಗೆ ಮನೆಯೊಳಗೆ ಬೆಚ್ಚಗೆ ಕೂತು ತರಹೇವಾರಿ ಕುರುಕುಲು ತಿಂಡಿ ತಿನ್ನುವುದೇ ಒಂದು ಸೊಬಗು. ಆದರೆ ಈ ಸೊಬಗಿನಾಚೆ ಮಳೆಗಾಲದಲ್ಲಿ ಇಲ್ಲಿನ ಜನರ ಸಾಹಸದ ಬದುಕೊಂದಿದೆ.
ಜೂನ್‌ನಿಂದ ಆರಂಭವಾಗಿ ಬಹುಪಾಲು ಸಪ್ಟೆಂಬರ್ ಕೊನೆಯ ವರೆಗೂ ಬಿಡದೇ ಸುರಿಯುವ ಮಳೆಗೆ ವಿದ್ಯುತ್ ಹೆಸರಿಲ್ಲದಂತೆ ಮಾಯವಾಗಿರುತ್ತದೆ. ರಸ್ತೆಗಳು ವಾಹನ ಸಂಚಾರಕ್ಕೆ ಸಾಧ್ಯವೇ ಇಲ್ಲ ಎಂಬಷ್ಟು ಕೆಟ್ಟಿರುತ್ತವೆ. ರಸ್ತೆಯ ನಡುವಲ್ಲಿ ಹೊಂಡಗಳು. ನಿಮ್ಮ ಅದೃಷ್ಟಕ್ಕೇನಾದರೂ ರಸ್ತೆ ಕಾಣಿಸಿದರೆ ಅದುವೇ ಭಾಗ್ಯ ಎಂಬಂತಾಗಿರುತ್ತದೆ.
ಕಾಡಿನ ನಡುವಿನ ಕುಗ್ರಾಮದಲ್ಲಿ ಸುಮಾರು 3 ತಿಂಗಳ ಕಾಲ ದ್ವೀಪದಲ್ಲಿರುವಂತೆ ಬದುಕಬೇಕಾದ ಪರಿಸ್ಥಿತಿಯಲ್ಲೂ ಮಳೆಗಾಲವನ್ನು ಸಂಭ್ರಮಿಸುತ್ತಾರೆ ಇಲ್ಲಿನ ಜನ. ಮಳೆಗಾಲ ಒಮ್ಮೆ ಆರಂಭವಾದರೆ ದಿನಬಳಕೆಯ ವಸ್ತುವನ್ನು ತರುವುದಕ್ಕೆ ಪೇಟೆ ಕಡೆ ಹೋಗುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣ ವಾಗುತ್ತದೆ.
ಇಷ್ಟೆಲ್ಲಾ ಅನಾನುಕೂಲತೆಗಳಿದ್ದರೂ ಮಲೆನಾಡಿನ ಯಾರೊಬ್ಬರೂ ಮಳೆಯನ್ನು ತಮಾಷೆಗೂ ಬೈದವರಲ್ಲ. ಯಾಕೆಂದರೆ ಮಳೆ ಅನ್ನ ನೀಡುವ ದೇವತೆಂಬುದು ಅಲ್ಲಿಯ ಜನರ ನಂಬಿಕೆ. ಅತಿ ವೃಷ್ಟಿಗೂ ಅನಾವೃಷ್ಟಿಗೂ ಮನುಷ್ಯನ ದುರಾಸೆಯನ್ನೇ ಬೈಯುತ್ತಾರೆಯೇ ಹೊರತು ಮಳೆರಾಯನನ್ನು ಶಪಿಸಿದವರಲ್ಲ.
ವರುಣ ದೇವನಿಗೆ ಪೂಜೆ ಸಲ್ಲಿಸಿ ಮಳೆಗಾಲವನ್ನು ಸ್ವಾಗತಿಸುವ ಇಲ್ಲಿನ ಜನರು ಬಿತ್ತಿದ ಬೀಜಗಳೇ ಕೆಲವೊಮ್ಮೆ ಮಳೆ ಯಲ್ಲಿ ಕೊಚಿಕೊಂಡು ಹೋಗಿರುತ್ತದೆ. ಅತಿ ವೃಷ್ಟಿಗೆ ನೆಟ್ಟ ಸಸಿಗಳೆಲ್ಲಾ ಕೊಳೆತು ಹೋಗಿರುತ್ತದೆ. ಪ್ರತಿವರ್ಷ ಇಂಥ ಸನ್ನಿವೇಶಗಳನ್ನು ಎದುರಿಸಲೇಬೇಕಾದರೂ ಇಲ್ಲಿನ ಜನರು ವರುಣನಿಗೆ ಶಾಪ ಹಾಕುವವರಲ್ಲ. ಊರಿನ ಸಾಲು ಮನೆಗಳ ಎದುರಿನಲ್ಲೊಂದು ದೊಡ್ಡ ಅಂಗಳ, ಅಂಗಳದಾಚೆ ಹೊಳೆ, ಹೊಳೆಯಾಚೆ ತೋಟ ಇದು ಮಲೆನಾಡಿನ ಬಹುಪಾಲು ಮನೆಗಳ ಪರಿಸ್ಥಿತಿಯಾಗಿದೆ. ತೋಟಕ್ಕಾ ಗಲಿ, ಶಾಲೆಗಾಗಲಿ ಹೋಗಬೇಕೆಂದರೆ ಹೊಳೆ ದಾ ಟಿಯೇ ಹೋಗಬೇಕು. ಮಳೆಗಾಲದಲ್ಲಿ ತುಂಬುವ ಹೊಳೆ ದಾಟಿ ಹೋಗುವುದೆಂದರೆ ಸಾಹಸವೇ ಸರಿ.
ಜೂನ್‌ನಿಂದ ಆರಂಭವಾಗಿ ಆಗಸ್ಟ್ ವರೆಗೂ ಶಾಲೆಗೆ ಹೊಗುವ ಮಕ್ಕಳಿಗೆ ಅರ್ಧಕರ್ಧ ದಿನ ರಜವೇ. ಶಾಲೆಗೆ ರಜಾ ಸಿಕ್ಕುತ್ತದೆಂಬ ಕಾರಣಕ್ಕೆ ಮಳೆ ಇನ್ನಷ್ಟು ಜೋರಾಗಿ ಸುರಿಯಲಿ ಎಂದು ಹಾರೈಸುವ ಮಕ್ಕಳೂ ಸಿಗುತ್ತಾರೆ. ಬೇಸಿಗೆಯ ಬಿಸಿಲಿಗೆ ಒಣಗಿ ನಿರ್ಜೀವವಾಗಿ ನಿಂತಿದ್ದ ಮರಗಳು, ಇದ್ದಕ್ಕಿದ್ದಂತೆ ಮುಂಗಾರು ಮಾಂತ್ರಿಕನ ಮಳೆ ಸ್ಪರ್ಶದಿಂದ ಹಸುರಂಗಿ ತೊಟ್ಟು ನಲಿಯುತ್ತವೆ. ಪ್ರಕೃತಿಯು ರಮಣೀಯತೆಯ ನಡುವೆ, ಹಾವು ಚೇಳು, ಜಿಗಣೆಯಂತ ಕ್ರೀಮಿಕೀಟಗಳು ಮನೆಯೊಳಗೇ ಬಂದು ಪ್ರಾಣಘಾತುಕ ಸಂದರ್ಭಗಳು ಎದುರಾಗುವುದು ಇಲ್ಲಿ ಮಾಮೂಲಿ. ಈ ಎಲ್ಲ ಪರಿಸ್ಥಿತಿಯನ್ನು ಎದುರಿಸಿ ಮಳೆರಾಯನಿಗೆ ಶಪಿಸುವವರಲ್ಲ. ಇದು ಮಳೆಗಾಲದ ಮಲೆನಾಡಿನ ಜನರ ಒಂದು ಅನುಭವ.
-ದೀಕ್ಷಾ ಮುಚ್ಚಂಡಿ
ಮಹಿಳಾ ವಿವಿ ವಿಜಯಪುರ