ನಾನು ಹೆಚ್ಚಾಗಿ ಎಂದೂ ಮನೆಯಿಂದ ದೂರ ಉಳಿದವನಲ್ಲ. ಸಂಬಂಧಿಕರು, ಅಜ್ಜಿ, ತಾತಾ ಮುಂತಾದವರ ಮನೆಗೆ ಹೋದವನು ಅಲ್ಲಾ, ಹೋದರು ಒಂದೊ ಎರಡೊ ದಿನ ಅಷ್ಟೇ. ಹಾಗಿದ್ದರೂ ಜೀವನದ ಕೆಲವು ಅನಿವಾರ್ಯ ಪರಿಸ್ಥಿತಿ ಎಲ್ಲವನ್ನು ಕಲಿಸಿ ಬಿಡುತ್ತದೆ ಎಂಬುದನ್ನು ಅರಿಯುವ ದಿನ ಕೂಡ ಸನ್ನಿಹಿತವಾಯಿತು ಎನ್ನಬಹುದು.
ಇದು ನಾನು ಮನೆ ಬಿಟ್ಟು ಬಂದ ಮೊದಲ ಸಲವಾಗಿತ್ತು. ವಾರ ಮತ್ತು ತಿಂಗಳು ಎಂದೂ ಮನೆಯಿಂದ ದೂರ ಉಳಿದವನೇ ಅಲ್ಲ ನಾನು. ನನಗೆ ಹಾಸ್ಟೆಲ್ ಅಲ್ಲಿ ನೀಡುವ ಊಟ ಅಷ್ಟೊಂದು ಸರಿ ಹೋಗುತ್ತಿರಲಿಲ್ಲ. ಸಂಜೆ ಆದರೆ ನಮ್ಮ ಅವ್ವ ಮಾಡಿ ಕೊಡುತ್ತಿದ್ದ ರೊಟ್ಟಿ ಮುಟಗಿ ನೆನಪಾಗುವುದು. ಅದೇನೋ ಊರಲ್ಲಿ ಇದ್ದಾಗ ಪ್ರತಿದಿನ ತಿನ್ನುತ್ತಿದ್ದೆ. ಆವಾಗ ನನಗೆ ಅದು ದೊಡ್ಡದು ಎಂದು ಅನಿಸಿರಲಿಲ್ಲ. ಆದರೆ ಅವ್ವ ಊಟಕ್ಕಾಗಿ ರೊಟ್ಟಿ ಮಾಡುವಾಗ ನಮಗೆ ಮುಟಗಿ ಮಾಡಿಕೊಡುತ್ತಾಳೆ ಎಂದು ನಾನು ತಿಳಿದಿದ್ದೆ. ಆದರೆ ಅದನ್ನೇ ರೊಟ್ಟಿ ಮಾಡಿ ಕೊಟ್ಟರೆ ನಾನು ತಿನ್ನುತಿರಲಿಲ್ಲ ಅದಕ್ಕೆ ಹೀಗೆ ರೊಟ್ಟಿ ಮುಟಗಿ ಮಾಡಿ ಕೊಡುತ್ತಾಳೆ ಎಂದು ನನಗೆ ತಿಳಿಯಲು ತುಂಬಾ ವರ್ಷಗಳೇ ಬೇಕಾದವು.
ಹೆಚ್ಚೇನು ಇಲ್ಲ ದಪ್ಪಗೆ ಮಾಡಿದ ರೊಟ್ಟಿ ಅದಕ್ಕೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಬೆಳ್ಳುಳ್ಳಿ ಉಪ್ಪು ಖಾರ ಇಲ್ಲವೇ ಹಸಿ ಮೆಣಸು ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಕುಟ್ಟಿದರೆ ರೊಟ್ಟಿ ಮುಟಗಿ ತಯಾರಾಗಿ ಬಿಡುತ್ತಿತ್ತು. ಆದರೆ ಅದರ ಘಮ ಮತ್ತು ರುಚಿ ಎಂದು ನನ್ನ ಬಿಟ್ಟು ಹೋಗೆ ಇಲ್ಲ. ನಾನು ಇಂದಿಗೂ ಹಾಸ್ಟೆಲ್‌ನಲ್ಲಿ ಎಂ.ಎ. ಓದುವಾಗಲೂ ಊರಿಗೆ ಹೋದಾಗ ಅವ್ವ ರೊಟ್ಟಿ ಮಾಡುವ ಸಮಯಕ್ಕೆ ಮನೆಯಲ್ಲಿ ಹಾಜರಿರುತ್ತೇನೆ.
ಏಕೆಂದರೆ ಅದೇ ರೊಟ್ಟಿ ಮುಟಗಿ ಸವಿಯಲು. ಹಳ್ಳಿ ಜನರು ಅಷ್ಟೇ ಅಲ್ಲದೆ ಹಳ್ಳಿಯಿಂದ ಬಂದು ಪೇಟೆ ಜನ ಆದವರು ಇದನ್ನು ತಿಂದೆ ತಿಂದಿರುತ್ತಾರೆ. ರೊಟ್ಟಿ ಮುಟಗಿ ಎಂದಿಗೂ ನನಗೆ ಇದೊಂದು ಒಳ್ಳೆಯ ಉಪಾಹಾರ, ಲಘು ಉಪಾಹಾರ ಎಲ್ಲವೂ ಆಗಿದೆ. ಇದನ್ನು ದೂರದಿಂದ ನೋಡಿದರೆ ಹೆಚ್ಚು. ಹಾಗಿದ್ದರೂ ಮನದಲ್ಲಿ ಮೂಡುವ ಒಂದು ಸಾಲು ಎಂದರೆ ರೊಟ್ಟಿ ಮುಟಗಿ ರುಚಿ ಸವಿದವನೆ ಬಲ್ಲ.
-ಮಲ್ಲು ಹಳೆಮನಿ
ವಿವಿ ಧಾರವಾಡ