Advertisement

ಸರ್ಕಾರಿ ಶಾಲೆಯ ಏಕೈಕ ವಿದ್ಯಾರ್ಥಿನಿಗೆ ಒಬ್ಬನೇ ಶಿಕ್ಷಕ!

11:26 AM May 07, 2017 | |

ದೊಡ್ಡಬಳ್ಳಾಪುರ: ಆ ಶಾಲೆಯಲ್ಲಿ ಇರುವುದೇ ಓರ್ವ ವಿದ್ಯಾರ್ಥಿ. ಆ ವಿದ್ಯಾರ್ಥಿಗೊಬ್ಬ ಶಿಕ್ಷಕ. ವಿದ್ಯಾರ್ಥಿ ಬಾರದಿದ್ದರೆ ಶಾಲೆಗೇ ರಜೆ. ಸರ್ಕಾರ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಯನ್ನು ಮುಚ್ಚಬಾರದೆಂಬ ನಿಯಮ ಮಾಡಿರುವುದರಿಂದ ಶಾಲೆಯನ್ನು ಹೇಗಾದರೂ ಮುಂದುವರಿಸಬೇಕು. ಆದರೆ ವಿದ್ಯಾರ್ಥಿಗಳಿಲ್ಲದಿದ್ದರೆ ಹೇಗೆ ಎನ್ನುವುದು ಶಿಕ್ಷಣ ಇಲಾಖೆಗೆ ತಲೆಬಿಸಿಯಾಗಿದೆ.

Advertisement

ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿ ಹೊನ್ನಾವರ ಗ್ರಾಪಂ ವ್ಯಾಪ್ತಿಯ ಹೊನ್ನಾದೇವಿಪುರದ ಕಿರಿಯ ಪ್ರಾಥಮಿಕ
ಶಾಲೆಯ 4ನೇ ತರಗತಿಯಲ್ಲಿ ಒಬ್ಬಳೇ ವಿದ್ಯಾರ್ಥಿನಿ ಇದ್ದು, ಈಕೆ ಐದನೇ ತರಗತಿಗೆ ಅಲ್ಲೇ ವಿದ್ಯಾಭ್ಯಾಸ ಮುಂದುವರಿಸಿದರೆ ಶಾಲೆ ಮುಂದುವರಿಸಬಹುದು. ಇಲ್ಲದಿದ್ದರೆ ಶಾಲೆ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಸಕ್ಕರೆಗೊಲ್ಲಹಳ್ಳಿ ಗ್ರಾಪಂ ಸಂಕರಸನಹಳ್ಳಿ ಶಾಲೆಯಲ್ಲಿಯೂ 3ನೇ ತರಗತಿಗೆ ಓರ್ವ
ವಿದ್ಯಾರ್ಥಿ ಇದ್ದಾನೆ. ಅಂತೆಯೇ ತಾಲೂಕಿನ ಮಧುರೆ ಹೋಬಳಿ ಕುಂಟರಕುಂಟೆ ಪಾಳ್ಯ, ಗೂಳ್ಯದಲ್ಲಿಯೂ ಒಬ್ಬನೇ ವಿದ್ಯಾರ್ಥಿಯಿರುವ ಶಾಲೆಗಳಿದ್ದು, ಅತ್ತ ಮುಚ್ಚಲೂ ಆಗದೆ, ಇತ್ತವ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಆಗುತ್ತಿದೆ. 2015ನೇ ಸಾಲಿನಲ್ಲಿ ತಾಲೂಕಿನಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇದ್ದ 10,830 ವಿದ್ಯಾರ್ಥಿಗಳ ಸಂಖ್ಯೆ ಕಳೆದ ಸಾಲಿನಲ್ಲಿ 10,287ಕ್ಕೆ ಕುಸಿದಿದೆ.

ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಏಕೆ?: ಹತ್ತು ಹಲವು ಸೌಲಭ್ಯಗಳನ್ನು ನೀಡಿದರೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಏಕೆ ಸೇರಿಸುತ್ತಿಲ್ಲ ಎಂದು ಮಧ್ಯಮ ವರ್ಗದವರನ್ನು ಕೇಳಿದರೆ, ಮೊದಲನೆಯದಾಗಿ ಇಂಗ್ಲಿಷ್‌ ಭಾಷೆ ಸರ್ಕಾರಿ ಶಾಲೆಗಳಲ್ಲಿ ಕಲಿಸುವುದಿಲ್ಲ.

ಮೂಲ ಸೌಕರ್ಯವಿಲ್ಲ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸುತ್ತಿದ್ದೇವೆಂದು ಹೇಳಿಕೊಳ್ಳುವುದು ಘನತೆಗೆ ಕಡಿಮೆ ಎನ್ನುತ್ತಾರೆ ಪೋಷಕರು. ಸರ್ಕಾರಿ ಶಾಲೆಗಳು ಬಡವರಿಗಷ್ಟೇ ಸೀಮಿತ ಎಂಬಂತಾಗಿದೆ. ಆರ್‌ಟಿಇ ಕಾಯ್ದೆ ಸರ್ಕಾರಿ ಶಾಲೆಗಳ ದಾಖಲಾತಿಗೆ ಮುಳುವಾಗುತ್ತಿದೆ ಎನ್ನಲಾಗಿದೆ. 

Advertisement

ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳ ಕುರಿತು ಪ್ರಚಾರ ಕೈಗೊಂಡು ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರದಿಂದ ನೀಡಲಾಗುವ ವಿವಿಧ ಸೌಲಭ್ಯ ಗಳ ಕುರಿತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಪ್ರಚಾರ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಪೋಷಕರು ಗಮನ ಹರಿಸಬೇಕು.
– ಹನುಮಂತಪ್ಪ, ಬಿಇಒ

– ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next