ಬೆಂಗಳೂರು: ದಿನನಿತ್ಯ ನೂರಾರು ಮಂದಿ ತಮ್ಮನ್ನು ಕಾಣಲು ಆಗಮಿಸುತ್ತಿರುವುದರಿಂದ ಅಧಿಕೃತ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಬೆಂಗಳೂರಿನಲ್ಲಿರುವ ಸಂದರ್ಭದಲ್ಲಿ ಪ್ರತಿ ಶನಿವಾರ ಸಾರ್ವಜನಿಕರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಇರುವ ಸಂದರ್ಭಗಳಲ್ಲಿ ಪ್ರತಿ ಶನಿವಾರ ಮಾತ್ರ ಬೆಳಗ್ಗೆ 11ರಿಂದ ಸಂಜೆ 4.30 ರವರೆಗೆ ಕುಮಾರಕೃಪಾ ರಸ್ತೆಯಲ್ಲಿರುವ ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.
ಸಾರ್ವಜನಿಕರು ಅನಿಯಮಿಯತವಾಗಿ ಮುಖ್ಯಮಂತ್ರಿಯವರ ಜೆ.ಪಿ.ನಗರದ ನಿವಾಸ, ಗೃಹ ಕಚೇರಿ ಕೃಷ್ಣಾ ಹಾಗೂ ವಿಧಾನಸೌಧಕ್ಕೆ ಭೇಟಿ ನೀಡುತ್ತಿರುವುದರಿಂದ ಮುಖ್ಯಮಂತ್ರಿಗಳ ಕೆಲಸ ಕಾರ್ಯಗಳು ಹಾಗೂ ನಿಗದಿತ ಕಾರ್ಯಕ್ರಮ, ಸಭೆ, ಸಮಾರಂಭಗಳಿಗೆ ಸಕಾಲಕ್ಕೆ ಭಾಗವಹಿಸಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಸಾರ್ವಜನಿಕ ಭೇಟಿಗೆ ಸಮಯ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಈ ಭೇಟಿಯ ಸಂದರ್ಭದಲ್ಲಿ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದ ಅಹವಾಲುಗಳು ಮತ್ತು ಖಾಸಗಿ ಅಹವಾಲುಗಳಿಗೆ ಅವಕಾಶವಿರುವುದಿಲ್ಲ. ವೈದ್ಯಕೀಯ ಪರಿಹಾರ ನಿಧಿಗೆ ಕೋರಿಕೆ ಸಲ್ಲಿಸುವವರು ಆಧಾರ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್, ಆಸ್ಪತ್ರೆಯ ಬಿಲ್ ಮತ್ತು ಚಿಕಿತ್ಸೆಯ ವಿವರಗಳ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಸರ್ಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಮಾತ್ರ ಸಾರ್ವಜನಿಕರು ಲಿಖೀತ ಮನವಿಗಳನ್ನು ಸಲ್ಲಿಸಬಹುದು. ಮುಖ್ಯಮಂತ್ರಿಗಳ ಸೂಚನೆಯಂತೆ ಅಂತಹ ದೂರುಗಳ ಬಗ್ಗೆ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಮೊಬೈಲ್ ಎಸ್‌ಎಂಎಸ್ ಮೂಲಕ ಮಾಹಿತಿ ಒದಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.