ಕಾಸರಗೋಡು: ಭ್ರಷ್ಟಾಚಾರದಲ್ಲಿ ಕೇರಳ ಸರಕಾರ ನಂ. 1 ಆಗಿದ್ದು, ಭ್ರಷ್ಟಾಚಾರದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷ ಸ್ಪರ್ಧೆಯಲ್ಲಿ ತೊಡಗಿವೆ. ಇಲ್ಲಿ ರಾಜ್ಯಪಾಲರಿಗೂ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಐಕ್ಯರಂಗ- ಎಡರಂಗಗಳಿಂದ ಅಧಃಪತನದತ್ತ ಸಾಗಿರುವ ಕೇರಳವನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿಗೆ ಮಾತ್ರವೇ ಸಾಧ್ಯ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗ್ಯಾರಂಟಿ, ನೂತನ ಕೇರಳ ಎಂಬ ಘೋಷವಾಕ್ಯದೊಂದಿಗೆ ಎನ್‌ಡಿಎ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ನಡೆಯುವ ಕೇರಳ ಪಾದಯಾತ್ರೆಯನ್ನು ಕಾಸರಗೋಡು ತಾಳಿಪಡು³ ಮೈದಾನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ನವ ಕೇರಳ ನಿರ್ಮಿಸಲು ಎನ್‌ಡಿಎ ಪಾದಯಾತ್ರೆ ಆಯೋಜಿಸಲಾಗಿದೆ. ಪಾದಯಾತ್ರೆಯುದ್ದಕ್ಕೂ ಕೇರಳ ಸರಕಾರದ ಭ್ರಷ್ಟಾಚಾರ ಹಾಗು ಪ್ರಧಾನಿ ಮೋದಿ ಕೇರಳಕ್ಕೆ ನೀಡಿದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರ ಅರಿವಿಗೆ ತರಲು ಈ ಪಾದಯಾತ್ರೆ ಆರಂಭಗೊಂಡಿದ್ದು, ರಾಜ್ಯಾದ್ಯಂತ ಸಾಗಿದಾಗ ಕೇರಳದ ಸ್ಥಿತಿಯೇ ಬದಲಾಗಲಿದೆ ಎಂದರು.
ಹಲವರು ಬಿಜೆಪಿಗೆ
ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಕೆ. ನಾರಾಯಣನ್, ಸಿಪಿಎಂ ಪರಪ್ಪ ಲೋಕಲ್ ಸಮಿತಿ ಸದಸ್ಯ ಚಂದ್ರನ್ ಪೈಕ, ಪೈವಳಿಕೆ ಕಾಂಗ್ರೆಸ್ ಮಾಜಿ ಮಂಡಲ ಅಧ್ಯಕ್ಷ ಮಂಜುನಾಥ ಶೆಟ್ಟಿ, ಪೈವಳಿಕೆ ಕಾಂಗ್ರೆಸ್ ಮಾಜಿ ಮಂಡಲ ಅಧ್ಯಕ್ಷ ಲಕ್ಷ್ಮೀಶ ರೈ, ಕಾಂಗ್ರೆಸ್ ಮಾಜಿ ಮಂಜೇಶ್ವರ ಬ್ಲಾಕ್ ಕಾರ್ಯದರ್ಶಿ ಸಂದೀಪ್ ರೈ, ಅಖೀಲ ಕೇರಳ ಯಾದವ ಸಭಾ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಎಂ. ರಮೇಶ್ ಯಾದವ್, ನೀತಿ ಕೋ-ಆಪರೇಟಿವ್ ಮೆಡಿಕಲ್ಸ್ ಡೈರೆಕ್ಟರ್ ನ್ಯಾಯವಾದಿ ಪಿ. ಅರವಿಂದಾಕ್ಷನ್ ಸಹಿತ ಹಲವು ನೇತಾರರು ಬಿಜೆಪಿಗೆ ಸೇರ್ಪಡೆಗೊಂಡರು.
ಕೇಂದ್ರ ಸಂಸದೀಯ-ವಿದೇಶಾಂಗ ಸಚಿವ ವಿ. ಮುರಳೀಧರನ್ ಮುಖ್ಯ ಅತಿಥಿಯಾಗಿದ್ದರು. ಎನ್‌ಡಿಎ ರಾಜ್ಯ ಸಂಚಾಲಕ ತುಷಾರ್ ವೆಳ್ಳಾಪಳ್ಳಿ, ವೈಸ್ ಚೇರ್‌ಮನ್ ಪಿ.ಕೆ. ಕೃಷ್ಣದಾಸ್, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಮುಖಂಡರಾದ ಅಬ್ದುಲ್ಲ ಕುಟ್ಟಿ, ಶ್ರೀಕಾಂತ್, ಎಂ. ನಾರಾಯಣ ಭಟ್, ವಿಜಯ ಕುಮಾರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸತೀಶ್ಚಂದ್ರ ಭಂಡಾರಿ, ಸವಿತಾ ಟೀಚರ್, ಸುಧಾಮ ಗೋಸಾಡ, ಸುರೇಶ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ ಕುಳೂರು ಮೊದಲಾದವರಿದ್ದರು.