ಕೋಲಾರ: ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಮತ್ತು ನಿಗತ ಗುರಿ ಇದ್ದರೆ ಮಾತ್ರ ಸಮಾಜದಲ್ಲಿ ಸಾಧಕರಾಗಿ ಹೊರಹೊಮ್ಮಲು ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ವೆಂಕಟಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ರವಿ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಉದಯೋತ್ಸವ-2019’ ಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಸತ್ಸಂಗದಲ್ಲಿ ಸಾಗಬೇಕು, ನಿಮ್ಮ ಗುರಿ ಕೇವಲ ಕಲಿಕೆಯೇ ಆಗಿರಬೇಕು, ನೀವು ದಾರಿ ತಪ್ಪಿದರೆ ನಿಮ್ಮ ಜೀವನದ ಗುರಿ ತಲುಪಲು ಸಾಧ್ಯವೇ ಇಲ್ಲ ಎಂದರು.
ಸಾಕಷ್ಟು ಬದಲಾವಣೆ: ವಿದ್ಯೆಗೆ ವಿನಯವೇ ಭೂಷಣ, ಹೀಗಾಗಿ ಮೊಟ್ಟ ಮೊದಲಿಗೆ ವಿದ್ಯಾರ್ಥಿಗಳಲ್ಲಿ ವಿನಯ, ವಿಧೇಯತೆ ಬರಬೇಕು. ಅದರಿಂದಾಗಿ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಕಳೆದ 20 ವರ್ಷಗಳ ಹಿಂದೆ ಇದ್ದ ಶಿಕ್ಷಣದ ಪರಿಸ್ಥಿತಿಯೇ ಬೇರೆ, ಈಗ ಸಾಕಷ್ಟು ಬದಲಾವೆಯಾಗಿದೆ, ವಿದ್ಯಾರ್ಜನೆಗಾಗಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಬೆಳೆದುನಿಂತಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳು, ಪೋಷಕರು ಮುಂದಾಗಬೇಕು ಎಂದು ತಿಳಿಸಿದರು.
ಮತದಾನದ ಮಹತ್ವ ತಿಳಿಸಿ: ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳು ಪ್ರತಿಯೊಂದು ಹಂತದಲ್ಲಿಯೂ ಸಿದ್ಧರಾಗಬೇಕಿದ್ದು, ಉತ್ತಮ ಫಲಿತಾಂಶ ಪಡೆಯುವತ್ತ ಗಮನ ನೀಡಬೇಕು. ಚುನಾವಣೆ ಸಮೀಪಿಸಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳುವ ಜತೆಗೆ ಕಡ್ಡಾಯವಾಗಿ ಮತದಾನ ಮಾಡಬೇಕು, ಇತರರಿಗೂ ಮತದಾನದ ಮಹತ್ವವನ್ನು ತಿಳಿಸಿಕೊಡಬೇಕು ಎಂದರು.
ಆಯ್ಕೆ ನಿಮ್ಮದೇ: ಕೋಲಾರ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಎಸ್.ಆರ್.ಜಗದೀಶ್, ತಂತ್ರಜ್ಞಾನವು ವೇಗವಾಗಿ ಹೋಗುತ್ತಿರುವುದರಿಂದ ಜಗತ್ತು ಸಣ್ಣದಾಗುತ್ತಿದೆ. ಒಳ್ಳೆಯ ಮತ್ತು ಕೆಟ್ಟ ಗುಣಗಳೆರೆಡೂ ಇದ್ದು ಆಯ್ಕೆಯನ್ನು ಮಾಡಿಕೊಳ್ಳುವುದರ ಮೇಲೆ ನಿಮ್ಮ ಜೀವನ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.
ಒಳ್ಳೆಯ ರೀತಿ ಬಳಸಿ: ಫೇಸ್‌ಬುಕ್, ವಾಟ್ಸಪ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬಹುದಾಗಿದ್ದರೂ, ವಿದ್ಯಾರ್ಥಿಗಳಿಂದ ಅದರ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ವಿಷಾದಿಸಿ, ಇದು ವಿದ್ಯಾರ್ಥಿ ಜೀವನದ ಮೇಲೆ ಕೆಟ್ಟ ರೀತಿಯ ಪರಿಣಾಮ ಬೀರುತ್ತಿದ್ದು, ಅವುಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ನೀವೂ ಸಹ ದೇಶಕ್ಕೆ ಸತøಜೆಗಳಾಗುತ್ತೀರಿ, ಇಲ್ಲವಾದಲ್ಲಿ ಪೊಲೀಸ್ ಅತಿಥಿಗಳಾಗುತ್ತಿ ಎಂದು ಎಚ್ಚರಿಸಿದರು.
ಪಣತೊಡಬೇಕು: ರವಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮೂರಂಡಹಳ್ಳಿ ಡಾ.ಇ.ಗೋಪಾಲಪ್ಪ ಮಾತನಾಡಿ, ಯಾವ ವಸ್ತುವನ್ನು ಬೇಕಾದರೂ ಮತ್ತೂಬ್ಬರಿಂದ ಕಸಿದುಕೊಳ್ಳಬಹುದು. ಆದರೆ, ವಿದ್ಯೆಯನ್ನು ಕಸಿಯಲು ಸಾಧ್ಯವಿಲ್ಲ. ಹೀಗಾಗಿ ಅಮೂಲ್ಯ ವಿದ್ಯೆಯ ಸಂಪತ್ತನ್ನು ತಮ್ಮದಾಗಿಸಿಕೊಳ್ಳಲು ವಿದ್ಯಾರ್ಥಿಗಳು ಪಣತೊಡಬೇಕು ಎಂದರು. ಶಿಕ್ಷಣ ಸಂಸ್ಥೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.