ಲಾಕ್‌ಡೌನ್‌ನಲ್ಲಿ ಜನ ಓಟಿಟಿ ಕಡೆಗೆ ಹೆಚ್ಚು ವಾಲಿದ ಪರಿಣಾಮ ಈಗ ಹೊಸ ಹೊಸ ಓಟಿಟಿ ವೇದಿಕೆಗಳು ಹುಟ್ಟಿಕೊಳ್ಳುತ್ತಿವೆ. ಕನ್ನಡದಲ್ಲೂ ಒಂದಷ್ಟು ಓಟಿಟಿಗಳು ಹುಟ್ಟಿಕೊಳ್ಳುತ್ತಿವೆ. ಆ ಸಾಲಿಗೆ “ಓನ್ಲಿ ಕನ್ನಡ’ ಸೇರುತ್ತದೆ.
ಇದು ಹೊಸದಾಗಿ ಆರಂಭವಾದ ಓಟಿಟಿ ವೇದಿಕೆ. “ಪ್ರಯೋಗ್ ಸ್ಟುಡಿಯೋ’ ಆರಂಭಿಸಿದ್ದ ಪ್ರದೀಪ್ ಅವರು ಈಗ ಓನ್ಲಿ ಕನ್ನಡ ಆರಂಭಿಸಿದ್ದಾರೆ. ಇತ್ತೀಚೆಗೆ ಈ ಓಟಿಟಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
“ಓನ್ಲಿ ಕನ್ನಡ’ ಇದು ಬರೀ ಕನ್ನಡಕ್ಕೆ ಮಾತ್ರ ಸೀಮಿತ. ಆದರೆ ಕರ್ನಾಟಕದ ಪ್ರಾದೇಶಿಕ ಭಾಷೆಗಳಾದ ಕೊಡವ, ತುಳು, ಕೊಂಕಣಿ, ಬ್ಯಾರಿ ಭಾಷೆಗಳಿಗೂ ಈ ಓಟಿಟಿ ಲಭ್ಯವಿದೆ.
ಇದನ್ನೂ ಓದಿ:ಕನ್ನಡದ ಹಿರಿಯ ನಟ ಶಂಕರ್ ರಾವ್ ವಿಧಿವಶ
ಈ ಬಗ್ಗೆ ಮಾತನಾಡುವ ಪ್ರದೀಪ್,”ನಾನು ಹಾಗೂ ನಿರ್ಮಾಪಕ ಮಂಜುನಾಥ್ ತುಂಬಾ ದಿನಗಳ ಹಿಂದೆ ಇದರ ಬಗ್ಗೆ ಯೋಚನೆ ಮಾಡಿದ್ದೆವು. ನಂತರ ಇದರ ಬಗ್ಗೆ ತಲೆ ಕೆಡೆಸಿಕೊಳ್ಳಲಿಲ್ಲ. ಈಗ ಕಾರ್ಯರೂಪಕ್ಕೆ ತಂದಿದ್ದೀನಿ. ಇದಕ್ಕೆ ಹಲವರ ಸಹಕಾರವಿದೆ. ಇದರಲ್ಲಿ ಬರೀ ಸಿನಿಮಾವಷ್ಟೇ ಅಲ್ಲದೇ ಯಕ್ಷಗಾನ, ಸಂಗೀತ, ನಾಟಕ, ನೃತ್ಯ ಮುಂತಾದ ಕಾರ್ಯಕ್ರಮಗಳನ್ನು ಓಟಿಟಿ ಮೂಲಕ ಬಿತ್ತರಿಸಲಾಗುವುದು. ಈ ಸಂಬಂಧ ನವೆಂಬರ್ ನಲ್ಲಿ ರಾಜ್ಯಪ್ರವಾಸ ಕೈಗೊಳ್ಳುತ್ತೇವೆ’ ಎನ್ನುತ್ತಾರೆ.
“ನಮ್ಮ ಓಟಿಟಿಯಲ್ಲಿ ಯಾವುದೇ ಅಶ್ಲೀಲ ಸಂಭಾಷಣೆಯ ಸಿನಿಮಾಗಳನ್ನಾಗಲಿ ಅಥವಾ ಕಾರ್ಯಕ್ರಮಗಳನ್ನಾಗಲಿ ಪ್ರಸಾರ ಮಾಡುವುದಿಲ್ಲ. ಡಬ್ಬಿಂಗ್ ಸಿನಿಮಾಗಳು ಕೂಡ ಪ್ರಸಾರವಾಗುವುದಿಲ್ಲ’ ಎಂದು ಪ್ರದೀಪ್ ಮಾಹಿತಿ ನೀಡಿದರು.