ಕುಂದಾಪುರ: ಮಾರ್ಚ್ 25ರಿಂದ ಆರಂಭವಾಗುವ ಎಸೆಸೆಲ್ಸಿ ಪರೀಕ್ಷೆಯನ್ನು ಮಕ್ಕಳು ಗೊಂದಲ ಹಾಗೂ ಭಯರಹಿತವಾಗಿ ಬರೆಯಬೇಕೆನ್ನುವ ಆಶಯದಿಂದ ಉಡುಪಿ ಜಿಲ್ಲೆಯ ವಿವಿಧ ಕೇಂದ್ರ ಗಳಲ್ಲಿ ಗುರುವಾರ ಅಣಕು ಪರೀಕ್ಷೆ ನಡೆಸಲಾಯಿತು. ಬೇರೆ ಯಾವ ಜಿಲ್ಲೆಯಲ್ಲೂ ಈ ಪರೀಕ್ಷೆ ನಡೆಸಿಲ್ಲ.
ಪಬ್ಲಿಕ್ ಪರೀಕ್ಷೆ ಮಾದರಿ ಯಲ್ಲೇ ವಿದ್ಯಾರ್ಥಿಗಳು ನಿಯೋಜಿಸಿ ದಂತೆಯೇ ಬೇರೆ ಶಾಲೆಯ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆದರು. ಸಮಯ ಪಾಲನೆ, ಶಿಸ್ತು ಇತ್ಯಾದಿ ಎಲ್ಲವೂ ಅದೇ ಮಾದರಿ. ಈ ಉತ್ತರಪತ್ರಿಕೆಯನ್ನು ಇನ್ನೊಬ್ಬ ವಿದ್ಯಾರ್ಥಿ ಮೌಲ್ಯಮಾಪನ ಮಾಡುವುದು. ಫಲಿತಾಂಶವೂ ಅಲ್ಲೇ!
ಯಾಕಾಗಿ?: ಪಬ್ಲಿಕ್ ಪರೀಕ್ಷೆಯ ಭಯ ನಿವಾರಣೆ, ಪರೀಕ್ಷಾ ಕೇಂದ್ರದ ಕುರಿತು ವಿದ್ಯಾರ್ಥಿಗೆ ಪೂರ್ವದಲ್ಲೇ ಮಾಹಿತಿ, ನೋಟಿಸ್ ಬೋರ್ಡ್, ನೀರು,ಶೌಚಾಲಯ ಇರುವ ಸ್ಥಳ ಗುರುತಿಸಿ ಇಟ್ಟುಕೊಳ್ಳುವುದು, ವಿವಿಧ ಅಂತಸ್ತು ಕೊಠಡಿಗಳ ಪರೀಕ್ಷಾ ಕೇಂದ್ರದಲ್ಲಿ ತಮಗೆ ನಿಗದಿಪಡಿಸಿದ ಸ್ಥಳ ಹುಡುಕುವುದು ಇತ್ಯಾದಿ ಮಾಹಿತಿ ಇದ್ದರೆ ಪರೀಕ್ಷಾ ದಿನ ಗೊಂದಲ ಉಂಟಾಗುವುದಿಲ್ಲ. ವಿದ್ಯಾರ್ಥಿಗಳೇ ಮೌಲ್ಯಮಾಪನ ಮಾಡುವುದರಿಂದ ಪುನರ್ಮನನ ಮಾಡಿದಂತಾಗುತ್ತದೆ, ಬೇರೆ ವಿದ್ಯಾರ್ಥಿಗಳು ಹೇಗೆ ಉತ್ತರಿಸಿದ್ದಾರೆ, ಉತ್ತರಿಸುವಾಗ ಎಡವಿ ದ್ದೆಲ್ಲಿ ಎಂದು ಗೊತ್ತಾಗುತ್ತದೆ ಎನ್ನುತ್ತಾರೆ ಕುಂದಾಪುರ ಶಿಕ್ಷಣಾಧಿ ಕಾರಿ ಶೋಭಾ ಶೆಟ್ಟಿ.
ಅಣಕು ಪರೀಕ್ಷೆಗಾಗಿ ಜಿಲ್ಲಾ ಶಿಕ್ಷಣ ಇಲಾಖೆ 2 ತಿಂಗಳ ಸಿದ್ಧತೆ ನಡೆಸಿದೆ. ಸರಕಾರದ ಅನುದಾನ ಇಲ್ಲದ ಕಾರಣ ದಾನಿಗಳ ಮೂಲಕ ವೆಚ್ಚಗಳನ್ನು ಸರಿದೂಗಿಸಲಾಗಿದೆ ಎಂದು ಎಸೆಸೆಲ್ಸಿ ಜಿಲ್ಲಾ ನೋಡೆಲ್ ಅಧಿಕಾರಿ ಬಾಲಕೃಷ್ಣ ತಿಳಿಸಿದ್ದಾರೆ.
ಐದು ಅಂಶಗಳ ಸೂತ್ರ
ಫಲಿತಾಂಶ ವೃದ್ಧಿಗಾಗಿ ಇಲಾಖೆ ಐದು ಅಂಶಗಳ ಸೂತ್ರ ರೂಪಿಸಿದೆ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಸಹಿತ ಶಿಕ್ಷಕರು, ಶಿಕ್ಷಣಾಧಿಕಾರಿ ಮುಂಜಾನೆ, ಸಂಜೆ ಮಕ್ಕಳ ಮನೆ ಭೇಟಿ ನಡೆಸಿ ಪೋಷಕರಿಗೆ ಅವರವರ ಮಕ್ಕಳ ಅಧ್ಯಯನಕ್ಕೆ ಸಲಹೆ, ಪ್ರತೀ ವಿಷಯದ ಅಧ್ಯಾಪಕರಿಗೂ ಪ್ರತೀ ತಾಲೂಕಿನಲ್ಲಿ 2 ಕಾರ್ಯಾಗಾರಗಳ ಆಯೋಜನೆ, ಎಲ್ಲ ಬಗೆಯ ವಿದ್ಯಾರ್ಥಿಗಳಿಗೆ ಅತ್ಯುನ್ನತ ಸಾಧನೆ ಮಾಡಲು ಅಭಿ ಪ್ರೇರಣ ತರಗತಿ ಆಯೋಜನೆ, ತಾಯಂದಿರ ಸಭೆ ನಡೆಸಿ ಸಲಹೆ ನೀಡಲಾಗಿದೆ.
18ನೇ ಸ್ಥಾನ: ಫಲಿತಾಂಶದಲ್ಲಿ ಉಡುಪಿ 2015ರಿಂದ 18ರ ವರೆಗೆ ಅಗ್ರಸ್ಥಾನ ದಲ್ಲಿದ್ದು, 2016ರಲ್ಲಿ 2ನೇ ಸ್ಥಾನಕ್ಕೆ ಇಳಿದಿತ್ತು. ಬಳಿಕ 2019ರಲ್ಲಿ 5ನೇ, 2020ರಿಂದ 2022ರ ವರೆಗೆ 9 ಹಾಗೂ 12 ನೇ ಸ್ಥಾನದಿಂದ 2023ರಲ್ಲಿ 18ನೇ ಸ್ಥಾನ ಪಡೆದಿತ್ತು. ಜಿಲ್ಲಾವಾರು ರ್‍ಯಾಂಕ್ ಕುಸಿದರೂ ಶೇ. ಫಲಿತಾಂಶ 88-89ರಲ್ಲಿದೆ.