Advertisement

ದೇವರಿಗೇ ಪಾಠ ಮಾಡಬಲ್ಲರು ಪಿಎಂ ಮೋದಿ: Rahul Gandhi 

09:45 PM May 31, 2023 | Team Udayavani |

ಸಾಂತಾಕ್ಲಾರಾ/ಸ್ಯಾನ್‌ಫ್ರಾನ್ಸಿಸ್ಕೋ/ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ದೇವರಿಗಿಂತ ದೊಡ್ಡವರು ಎಂದು ತಿಳಿದುಕೊಂಡಿದ್ದಾರೆ. ಒಂದು ವೇಳೆ, ದೇವರು ಎದುರಿಗೆ ಬಂದರೆ ಮೋದಿಯವರೇ ಪಾಠ ಹೇಳಿಯಾರು ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ. ಆರು ದಿನಗಳ ಅಮೆರಿಕ ಪ್ರವಾಸದ ಮೊದಲ ದಿನ ಕ್ಯಾಲಿಪೋರ್ನಿಯದ ಸಾಂತಾಕ್ಲಾರಾದಲ್ಲಿ ಆಯೋಜಿಸಲಾಗಿದ್ದ “ಸ್ನೇಹದ ಬಜಾರ್‌’ (ಮೊಹಬ್ಬತ್‌ ಕೀ ದುಕಾನ್‌) ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

“ಭಾರತದಲ್ಲಿ ಎಲ್ಲಾ ವಿಚಾರಗಳೂ ತಮಗೇ ಗೊತ್ತು ಎಂದು ವಾದಿಸುವವರು ಇದ್ದಾರೆ. ಅಂಥವರಲ್ಲಿ ಪ್ರಧಾನಿ ಮೋದಿಯೂ ಒಬ್ಬರು. ಒಂದು ವೇಳೆ, ದೇವರು ಪ್ರತ್ಯಕ್ಷನಾಗಿ ಬಂದರೆ, ಮೋದಿಯವರು ಅವರಿಗೇ ಪಾಠ ಹೇಳಿಯಾರು. ಜಗತ್ತು ಹೇಗೆ ಸೃಷ್ಟಿಯಾಯಿತು ಮತ್ತು ಅದು ಹೇಗೆ ಕಾರ್ಯಾಚರಿಸುತ್ತದೆ ಎಂದು ವಿವರಿಸುವಷ್ಟೂ ಸಾಮರ್ಥ್ಯ ಅವರಲ್ಲಿದೆ. ಈ ಮೂಲಕ ದೇವರಿಗೇ ನಾನು ಏನನ್ನು ಸೃಷ್ಟಿಸಿದ್ದೇನೆ ಎಂಬಷ್ಟೂ ಗೊಂದಲ ಉಂಟು ಮಾಡಬಲ್ಲರು’ ಎಂದು ಕಟುವಾಗಿ ರಾಹುಲ್‌ ಟೀಕಿಸಿದ್ದಾರೆ.

ಆ ಗುಂಪು ಯುದ್ಧ ಕೌಶ್ಯಲ್ಯ ತಂತ್ರ ಮತ್ತು ಸೇನೆ, ಚರಿತ್ರೆಯಿಂದ ಇತಿಹಾಸಕಾರರು, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಎಲ್ಲಾ ಅಂಶಗಳ ಬಗ್ಗೆಯೂ ಮಾತನಾಡುತ್ತಾರೆ ಎಂದು ಲಘುಧಾಟಿಯಲ್ಲಿ ಹೇಳಿದರು. ಜಗತ್ತು ವಿಶಾಲವಾಗಿದೆ, ಅದರಲ್ಲಿರುವ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಲು ಒಬ್ಬ ವ್ಯಕ್ತಿಗೆ ಕಷ್ಟ. ಆದರೆ, ಭಾರತದಲ್ಲಿರುವ ಕೆಲವರು ಎಲ್ಲ ವಿಚಾರ ತಿಳಿದಿದ್ದೇವೆ ಎಂಬಂತೆ ಮಾತನಾಡುತ್ತಾರೆ ಎಂದರು ರಾಹುಲ್‌.

ಬಿಜೆಪಿ ಸೋಲಿಸಲು ಸಾಧ್ಯವಿದೆ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿದೆ. ಅದಕ್ಕಾಗಿ ಪ್ರತಿಪಕ್ಷಗಳೆಲ್ಲವೂ ಒಟ್ಟಾಗಿ, ಭಿನ್ನಾಭಿಪ್ರಾಯ ಮರೆತು ಕೈಜೋಡಿಸಬೇಕಾಗಿದೆ ಎಂದು ಹೇಳಿದ್ದಾರೆ. ಸಾಂತಾ ಕ್ಲಾರಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಶುರುವಾಗಿದೆ. ಇತ್ತೀಚೆಗೆ ಮುಕ್ತಾಯವಾದ ಕರ್ನಾಟಕ ವಿಧಾನಸಭೆ ಚುನಾವಣೆಯ ಜಯವೇ ಇದಕ್ಕೆ ಸಾಕ್ಷಿ ಎಂದರು. “ಕರ್ನಾಟಕದಲ್ಲಿ ಇತ್ತೀಚೆಗೆ ಮುಕ್ತಾಯವಾದ ವಿಧಾನಸಭೆ ಚುನಾವಣೆಯನ್ನು ಗಮನಿಸಿದರೆ, ನಮ್ಮ ಪಕ್ಷ ಬಿಜೆಪಿ ವಿರುದ್ಧ ಹೋರಾಟ ನಡೆಸಿ, ಅದನ್ನು ಸೋಲಿಸಿತು. ಅದಕ್ಕಾಗಿ ನಾವು ಬಳಸಿದ ವ್ಯೂಹವನ್ನು ಇನ್ನೂ ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ’ ಎಂದರು.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ವೆಚ್ಚ ಮಾಡಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಮೊತ್ತವನ್ನು ಬಿಜೆಪಿ ಖರ್ಚು ಮಾಡಿದೆ ಎಂದು ಆರೋಪಿಸಿದ್ದಾರೆ ರಾಹುಲ್‌ ಗಾಂಧಿ. ಹಿಂದೆ ಬಳಸದೇ ಇದ್ದ ಚುನಾವಣಾ ತಂತ್ರವನ್ನು ಕರ್ನಾಟಕದಲ್ಲಿ ಬಳಕೆ ಮಾಡಲಾಯಿತು ಮತ್ತು ಅದರ ಮೂಲಕ ಬಿಜೆಪಿಯ ವೈಫ‌ಲ್ಯವನ್ನು ಎತ್ತಿ ತೋರಿಸಿದ್ದೇವೆ. ಕರ್ನಾಟಕದಲ್ಲಿ ಭಾರತ್‌ ಜೋಡೋ ಯಾತ್ರೆ ವೇಳೆ ಅದನ್ನು ಅನುಸರಿಸಲಾಯಿತು. ಭಾರತ್‌ ಜೋಡೋ ಯಾತ್ರೆಯನ್ನು ತಡೆಯಲೂ ಯತ್ನಿಸಲಾಯಿತು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪರ್ಯಾಯ ಚಿಂತನೆಯೊಂದನ್ನು ಜನರ ಮುಂದಿಡಬೇಕಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

ತನಿಖಾ ಸಂಸ್ಥೆಗಳ ದುರುಪಯೋಗ: ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ದೂರಿದ ರಾಹುಲ್‌ ಗಾಂಧಿ, ಅವುಗಳ ಮೂಲಕ ಪ್ರತಿಪಕ್ಷಗಳನ್ನು ಮತ್ತು ಸರ್ಕಾರದ ವಿರುದ್ಧ ಮಾತನಾಡುವವರನ್ನು ಬೆದರಿಸಲಾಗುತ್ತಿದೆ ಎಂದರು. ಹೊಸ ಸಂಸತ್‌ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ರಾಜದಂಡ ವಿಚಾರವನ್ನು ತಿರಸ್ಕರಿಸಿದ ವಯನಾಡ್‌ನ‌ ಮಾಜಿ ಸಂಸದ “ಇದೊಂದು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡಿದ ತಂತ್ರ’ ಎಂದು ಬಣ್ಣಿಸಿದ್ದಾರೆ.

1980ರ ದಲಿತರಂತೆ ಈಗಿನ ಮುಸ್ಲಿಮರ ಪರಿಸ್ಥಿತಿ
ಭಾರತದಲ್ಲಿ ಮುಸ್ಲಿಂ ಸಮುದಾಯ ಆತಂಕದ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ಆರೋಪಿಸಿದ ರಾಹುಲ್‌ ಗಾಂಧಿಯವರು, “1980ರ ದಶಕದಲ್ಲಿ ದಲಿತ ಸಮುದಾಯ ದೇಶದಲ್ಲಿ ಆತಂಕದ ಸ್ಥಿತಿಯನ್ನು ಎದುರಿಸುತ್ತಿತ್ತು. ಅದೇ ಸ್ಥಿತಿಯನ್ನು ಈಗ ಮುಸ್ಲಿಂ ಸಮುದಾಯದವರು ಭಾರತದಲ್ಲಿ ಎದುರಿಸುತ್ತಿದ್ದಾರೆ’ ಎಂದು ದೂರಿದ್ದಾರೆ. ಆದರೆ, ಅದನ್ನು ಸ್ನೇಹದ ಭಾವನೆಯಿಂದಲೇ ಎದುರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿಯಮ, ನಿರ್ಧಾರಗಳಿಂದಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಮಾತ್ರವಲ್ಲ, ದಲಿತರು ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದವರಿಗೂ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ. 1980ರ ದಶಕದಲ್ಲಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದವರಿಗೆ ದಲಿತರ ಕಠಿಣ ಪರಿಸ್ಥಿತಿಯ ನೆನಪು ಇರಬಹುದು. ಅದೇ ಸ್ಥಿತಿಯನ್ನು ಈಗ ಮುಸ್ಲಿಂ ಸಮುದಾಯದವರು ಭಾರತದಲ್ಲಿ ಎದುರಿಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದ ನಿಯಮಗಳು ಮುಸ್ಲಿಮರನ್ನೇ ನೇರವಾಗಿ ಗುರಿಯಾಗಿಸಿಕೊಂಡಿವೆ ಎಂದು ರಾಹುಲ್‌ ದೂರಿದರು. ಸಿಖ್‌, ಕ್ರಿಶ್ಚಿಯನ್‌, ದಲಿತರು ಮತ್ತು ಬುಡಕಟ್ಟು ಸಮುದಾಯದವರಿಗೆ ತೊಂದರೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಖಲಿಸ್ತಾನಿಗಳ ಅಡ್ಡಿ
ರಾಹುಲ್‌ ಬಾಷಣ ಮತ್ತು ಸಂವಾದದ ವೇಳೆ ಖಲಿಸ್ತಾನಿಗಳು ಅಡ್ಡಿಪಡಿಸಿದ ಘಟನೆ ನಡೆದಿದೆ, ಕೆಲಕಾಲ ಕಾರ್ಯಕ್ರಮಕ್ಕೂ ಅಡ್ಡಿಯಾಗಿದೆ. ಇದರಿಂದ ವಿಚಲಿತರಾಗದ ರಾಹುಲ್‌ “ಸ್ವಾಗತ, ಸ್ವಾಗತ ದ್ವೇಷದ ಅಂಗಡಿಯಲ್ಲಿ ಸ್ನೇಹದ ಅಂಗಡಿ ಇದೆ’ ಎಂದು ಪ್ರತಿಕ್ರಿಯೆ ನೀಡಿದರು. ಅವರ ಬಗ್ಗೆ ನಾವು ಕೋಪಗೊಳ್ಳುವುದಿಲ್ಲ. ಅವರ ಮಾತುಗಳನ್ನು ನಾವು ಕೇಳಿಸಿಕೊಳ್ಳುತ್ತೇವೆ. ನಾವು ಮತ್ತು ಕಾಂಗ್ರೆಸ್‌ ಪ್ರತಿಯೊಬ್ಬರ ಬಗ್ಗೆಯೂ ಸ್ನೇಹದ ಭಾವನೆಯನ್ನು ಹೊಂದಿದೆ’ ಎಂದರು. ಅದಕ್ಕೆ ಅಲ್ಲಿ ಇದ್ದವರು ಭಾರತವನ್ನು ಜೋಡಿಸಿ ಎಂಬ ಪ್ರತಿ ಘೋಷಣೆಯನ್ನೂ ಹಾಕಿದರು.

ನಾನು ಸಂಸದಲ್ಲ; ಸಾಮಾನ್ಯ ವ್ಯಕ್ತಿ
ಅಮೆರಿಕಕ್ಕೆ ಮಂಗಳವಾರ ಸ್ಯಾನ್‌ ಪ್ರಾನ್ಸಿಸ್ಕೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ವಲಸೆ ವಿಭಾಗದಲ್ಲಿ ಎರಡು ಗಂಟೆಗಳ ಕಾಲ ಕಾದು, ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಇದ್ದ ಕೆಲವರು ಅಚ್ಚರಿಪಟ್ಟು ವಿವಿಐಪಿಯಾದ ನೀವು ಯಾಕೆ ಸರತಿಯಲ್ಲಿ ನಿಂತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, “ನಾನು ಈಗ ಸಂಸದನಲ್ಲ. ಸಾಮಾನ್ಯ ವ್ಯಕ್ತಿ’ ಎಂದು ಉತ್ತರಿಸಿದ್ದಾರೆ. ಅವರು ಆಗಮಿಸಿದ್ದ ವಿಮಾನದಲ್ಲಿ ಆಗಮಿಸಿದ್ದ ಕೆಲವರು ರಾಹುಲ್‌ ಜತೆಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ.

ವಿದೇಶಕ್ಕೆ ಹೋದಾಗ ರಾಹುಲ್‌ಗೆ ಜಿನ್ನಾ ಭೂತ ಆವರಿಸುತ್ತದೆ
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ವಿದೇಶ ಪ್ರವಾಸ ಮಾಡಿದ ಸಂದರ್ಭಗಳಲ್ಲೆಲ್ಲ ಅವರಿಗೆ ಮೊಹಮ್ಮದ್‌ ಅಲಿ ಜಿನ್ನಾ ಅವರ ಭೂತ ಆವರಿಸಿಕೊಳ್ಳುತ್ತದೆ ಎಂದು ಬಿಜೆಪಿ ಟೀಕಿಸಿದೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಲಾಗುತ್ತಿದೆ ಎಂಬ ರಾಹುಲ್‌ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಮುಖಾ¤ರ್‌ ಅಬ್ಟಾಸ್‌ ನಖ್ವಿ “ರಾಹುಲ್‌ ಗಾಂಧಿಯವರು ವಿದೇಶ ಪ್ರವಾಸ ಮಾಡಿದ ಸಂದರ್ಭದಲ್ಲೆಲ್ಲ ಅವರಿಗೆ ಜಿನ್ನಾ ಅವರ ಭೂತ ಆವರಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಅವರು ಉಗ್ರ ಸಂಘಟನೆ ಅಲ್‌-ಖೈದಾದಂಥವವರ ಸಂಪರ್ಕ ಹೊಂದಿದವರಂತೆ ಇರುತ್ತಾರೆ. ಅವರು ಸ್ವದೇಶಕ್ಕೆ ವಾಪಸಾದ ಮೇಲೆ ಭೂತೋಚ್ಚಾಟನೆ ಪ್ರಕ್ರಿಯೆಗೆ ಒಳಗಾಗುವುದು ಉತ್ತಮ’ ಎಂದು ಟೀಕಿಸಿದ್ದಾರೆ. ಪ್ರಧಾನಿ ಮೋದಿ ಕುಟುಂಬ ರಾಜಕೀಯ ವ್ಯವಸ್ಥೆ ನಾಶ ಮಾಡಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ರಾಹುಲ್‌ಗೆ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಇರುವ ಮುಸ್ಲಿಂ ಸಮುದಾಯವನ್ನು ಬಬಲ್‌ ಗಮ್‌ನಂತೆ ಹೆಚ್ಚು ದುರುಪಯೋಗ ಮಾಡಿದ್ದೇ ಕಾಂಗ್ರೆಸ್‌ ಎಂದೂ ನಖ್ವಿ ಟೀಕಿಸಿದ್ದಾರೆ.

ಏನೂ ಗೊತ್ತಿಲ್ಲದ ವ್ಯಕ್ತಿ ದಿಢೀರನೆ ಹೇಗೆ ಎಲ್ಲವನ್ನೂ ತಿಳಿದ ವ್ಯಕ್ತಿಯಾಗಿ ಬದಲಾಗುತ್ತಾನೆ ಎನ್ನುವ ವಿಚಾರವೇ ಹಾಸ್ಯಾಸ್ಪದ. ತನ್ನ ಕುಟುಂಬದ ಆಚೆಗೆ ಇತಿಹಾಸ ಜ್ಞಾನವೇ ಇಲ್ಲದ ವ್ಯಕ್ತಿ ಇತಿಹಾಸದ ಬಗ್ಗೆ ಮಾತನಾಡುತ್ತಾನೆ. ತನ್ನ ಕುಟುಂಬದ ಪರಿಮಿತಿಯನ್ನು ಮೀರದ ವ್ಯಕ್ತಿ ದೇಶವನ್ನು ಮುನ್ನಡೆಸಲು ಬಯಸುತ್ತಿದ್ದಾನೆ. ಅದು ಸಾಧ್ಯವಿಲ್ಲ ನಕಲಿ ಗಾಂಧಿಯವರೇ.
-ಪ್ರಹ್ಲಾದ್‌ ಜೋಶಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next