ಚಾಮರಾಜನಗರ: ಜಾನಪದ ಬೇರೆಲ್ಲಾ ಕಲಾ ಪ್ರಕಾರಗಳಿಗಿಂತಲೂ ಉತ್ಕೃಷ್ಟ ಕಲಾ ಪ್ರಕಾರ. ರಂಗಭೂಮಿಯಲ್ಲಿ ಜಾನಪದಕ್ಕಿರುವ ಮೌಲ್ಯ ಮತ್ತು ಸೆಳೆತದ ಗುಣ ಬೇರ್ಯಾವುದಕ್ಕೂ ಇಲ್ಲ ಎಂದು ಚಲನಚಿತ್ರ ನಟ ಹಾಗೂ ರಂಗ ನಿರ್ದೇಶಕ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಸಿದ್ದಯ್ಯನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಉದ್ಘಾಟನೆ ಹಾಗೂ ಆಡು ಬಾ ನನ ಕಂದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಮತ್ತು ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಕಂಸಾಳೆ ನುಡಿಸುವುದರ ಮೂಲಕ ಉದ್ಘಾಟಿಸಿದರು.
ಪಟ್ಟಣದ ರಂಗಭೂಮಿ ಚಟುವಟಿಕೆಗಳಿಗಿಂತ ಗ್ರಾಮೀಣ ರಂಗಭೂಮಿ ಸರ್ವಶ್ರೇಷ್ಠ. ನಿಜವಾದ ಕಲೆ, ಸಂಸ್ಕೃತಿ ಹಾಗೂ ಸ್ವಾಭಾವಿಕ ಅಭಿನಯ ಗ್ರಾಮೀಣ ಪ್ರದೇಶದ ಜನರಲ್ಲಿದೆ. ನೈಜ ಕಲೆ ಮತ್ತು ಸಂಸ್ಕೃತಿಯ ಉಗಮ ಕೇಂದ್ರ ಹಳ್ಳಿಗಳು. ಶಾಲಾ ವಿದ್ಯಾರ್ಥಿಗಳಿಗೆ ರಂಗಶಿಕ್ಷಣ ಅತ್ಯಾಗತ್ಯ; ಇದರಿಂದ ಜ್ಞಾಪಕಶಕ್ತಿ ಸಂವರ್ಧಿಸುತ್ತದೆ. ಸಂಕೋಚ, ಹಿಂಜರಿಕೆ, ಭಯ ದೂರವಾಗಿ ವಿದ್ಯಾರ್ಥಿಯ ಪರಿಣಾಮಕಾರಿ ಕಲಿಕೆಗೆ ನಾಂದಿಯಾಗುತ್ತದೆ ಎಂದರು.
ಕಿರಣ್ ಗಿರ್ಗಿ ಅವರು ಮಕ್ಕಳ ರಂಗತರಬೇತಿ ಶಿಬಿರ ನಡೆಸಲು ಬೇರಾವುದೇ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ ತನ್ನ ಹುಟ್ಟೂರಿನಲ್ಲಿ ಗ್ರಾಮೀಣ ಸೊಗಡಿನ ಕುಗ್ರಾಮದಲ್ಲಿ ಶಿಬಿರ ನಡೆಸಿರುವುದು ಮಹತ್ವದ ಕಾರ್ಯ. ಇಲ್ಲಿನ ಕಲಿಕಾ ಶಿಬಿರದ ಮಕ್ಕಳಿಗೆ ಹಾಗೂ ಕಿರಣ್ ಗಿರ್ಗಿಯವರಿಗೆ ಹಾಗೂ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಗೆಳೆಯರಿಗೆ ಮುಂದಿನ ದಿನಗಳಲ್ಲಿ ವಿಫುಲ ಅವಕಾಶಗಳು ತೆರೆದುಕೊಳ್ಳಲಿವೆ. ಶಿಬಿರಕ್ಕೆ ಮಾತ್ರ ಮಕ್ಕಳ ಸಾಂಸ್ಕೃತಿಕತೆ ಸೀಮಿತವಾಗಿರದೆ ನಿತ್ಯ ನಿರಂತರವಾಗಿ ಬಳಕೆಯಾಗಲಿ ಎಂದರು.
ಸಾಹಿತಿ ಸೋಮಶೇಖರ ಬಿಸಲ್ವಾಡಿ ಮಾತನಾಡಿ, ಬೇಸಿಗೆ ರಜೆಯಲ್ಲಿ ಬಿಸಿಯೂಟದೊಂದಿಗೆ ಬೇಸಿಗೆ ಶಿಬಿರವನ್ನು ನಡೆಸುವ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದಾದ್ಯಂತ ನಡೆಸುತ್ತಿದೆ. ಇದೊಂದು ಮಾದರಿ ಶಿಬಿರ. ಈ ಶಿಬಿರದ ಮೂಲಕ ಶಾಲೆ ಮತ್ತು ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಇತಿಹಾಸ ನಿರ್ಮಿಸಿವೆ. 24 ದಿವಸಗಳ ಈ ಶಿಬಿರದಲ್ಲಿ ದುಡಿದ ಎಲ್ಲ ಸಂಪನ್ಮೂಲ ವ್ಯಕ್ತಿಗಳು ಪ್ರಶಂಸನಾರ್ಹರು ಎಂದರು.
ಸಾಹಿತಿ ಕೆ.ವೆಂಕಟರಾಜು, ರಂಗನಟ ಬರ್ಟಿ ಒಲಿವೆರಾ, ಹಿರಿಯ ವೃತ್ತಿರಂಗ ನಿರ್ದೇಶಕ ಜಾಯ್‌ಫುಲ್ ಜಯಶೇಖರ್, ರಂಗಾಯಣ ಕಲಾವಿದೆ ಸರೋಜಾ ಹೆಗಡೆ, ಗಾಯಕ ಮಹಾಲಿಂಗ್ ಗಿರ್ಗಿ, ಕಲೆ ನಟರಾಜು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್, ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ರಂಗಸ್ವಾಮಿ, ಮುಖ್ಯ ಶಿಕ್ಷಕ ಚಿಕ್ಕಬಸವ, ಗ್ರಾ.ಪಂ. ಸದಸ್ಯರಾದ ನಂಜುಂಡಸ್ವಾಮಿ, ಶೈಲಜಾ ಗೋವಿಂದರಾಜು, ಶಿವಪ್ರಸಾದ್, ಚಂದ್ರಮ್ಮ ನಾಗರಾಜು, ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಅಧ್ಯಕ್ಷ ಕಿರಣ್ ಗಿರ್ಗಿ, ಕಾರ್ಯದರ್ಶಿ ಶಿವಕುಮಾರ್, ಶಿವಶಂಕರ್, ಜೇಮ್ಸ್ ದೇಶ್ವಳ್ಳಿ, ನವೀನ್ ಉಡಿಗಾಲ, ಮೂರ್ತಿ ಕೆಂಗಾಕಿ ಹಾಗೂ ಗ್ರಾಮದ ಮುಖಂಡರು, ಶಾಲೆಯ ಶಿಕ್ಷಕವೃಂದ ಉಪಸ್ಥಿತರಿದ್ದರು.