ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಪತ್ತೇದಾರಿ ಪ್ರತಿಭಾ’ ಧಾರಾವಾಹಿಯಲ್ಲಿ ಅದೊಂದು ದಿನ ಮೇಘನಾ ಗಾಂವ್ಕರ್ ಕಾಣಿಸಿಕೊಂಡುಬಿಟ್ಟರು. ಶುರುವಾಯ್ತು ನೋಡಿ, ಒಂದರ ಹಿಂದೊಂದು ಸುದ್ದಿಗಳು. ಮೇಘನಾಗೆ ಅವಕಾಶವಿಲ್ಲ ಎಂದು ಕಿರುತೆರೆಗೆ ಹೋದರಂತೆ, ಅವರು ಮತ್ತೆ ಚಿತ್ರಗಳಲ್ಲಿ ನಟಿಸುವುದಿಲ್ಲವಂತೆ, ಅದಂತೆ, ಇದಂತೆ … ಎಂದು ಒಂದರ ಹಿಂದೊಂದು ಸುದ್ದಿಗಳು ಬಂದವು.
ಕೊನೆಗೆ ಮೇಘನಾ ಟ್ವೀಟ್ ಮಾಡುವವರೆಗೂ, ಈ ಅಂತೆ-ಕಂತೆಗಳು ನಿಲ್ಲಲಿಲ್ಲ. ಖುದ್ದು ಮೇಘನಾ ಟ್ವೀಟ್ ಮಾಡಿ, ತಾವು ಧಾರಾವಾಹಿಯಲ್ಲಿ ನಟಿಸುವುದಕ್ಕೆ ನವೀನ್ ಕೃಷ್ಣ ಅವರ ಸ್ನೇಹವೇ ಕಾರಣ, ಅವರು ಬಂದು ಕೇಳಿದ್ದಕ್ಕೆ ಧಾರಾವಾಹಿಯಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ ಮತ್ತು ತನ್ನ ಮೊದಲ ಆದ್ಯತೆ ಯಾವುತ್ತೂ ಸಿನಿಮಾಗೆ ಎಂದು ಹೇಳಿಕೊಳ್ಳುವವರೆಗೂ ಇವೆಲ್ಲಾ ಮುಂದುವರೆದಿತ್ತು. ಈ ಮಧ್ಯೆ ನವೀನ್ ಕೃಷ್ಣ ಸಹ ಟ್ವೀಟ್ ಮಾಡಿ, ನನ್ನ ಕರೆಗೆ ಓಗುಟ್ಟು ಅವರು ನಟಿಸುವುದಕ್ಕೆ ಒಪ್ಪಿಕೊಂಡರೇ ಹೊರತು, ಬೇರೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲಿಗೆ ಸಿನಿಮಾದಿಂದ ರಿಟೈರ್ ಆಗುವ ಮೇಘನಾ ಅವರ ಸುದ್ದಿ ಕ್ರಮೇಣ ಕಡಿಮೆಯಾಯಿತು.
ಇಷ್ಟಕ್ಕೂ ಯಾಕೆ ಇಂಥದ್ದೊಂದು ಸುದ್ದಿ ಹುಟ್ಟಿಕೊಂಡಿತು ಎಂಬುದಕ್ಕೂ ಕಾರಣವಿದ್ದೇ ಇದೆ. ಸುಖಾಸುಮ್ಮನೆ ಈ ರೀತಿ ಆಗುವುದಿಲ್ಲ. ಅದೇನೆಂದರೆ, “ಚಾರ್‌ಮಿನಾರ್’ ಚಿತ್ರದ ಯಶಸ್ಸಿನ ನಂತರವೂ, ಮೇಘನಾ ಒಪ್ಪಿದ್ದು ಮತ್ತು ನಟಿಸಿದ್ದು ಒಂದೇ ಒಂದು ಚಿತ್ರದಲ್ಲಿ. ಅದೂ “ಸಿಂಪಲ್ಲಾಗಿನ್ನೊಂದ್ ಲವ್‌ಸ್ಟೋರಿ’ ಮಾತ್ರ. ಮಿಕ್ಕಂತೆ ಮೇಘನಾ ಯಾವುದೇ ಚಿತ್ರದಲ್ಲೂ ನಟಿಸಿಲ್ಲ. ಹಾಗಾಗಿ ಮೇಘನಾಗೆ ಅವಕಾಶಗಳು ಕಾಡುತ್ತಿರಬಹುದು ಎಂಬ ಪ್ರಶ್ನೆಗಳು ಮೊದಲು ಶುರುವಾದವು. ಯಾವಾಗ ಅವರು “ಪತ್ತೇದಾರಿ ಪ್ರತಿಭಾ’ ಚಿತ್ರದಲ್ಲಿ ನಟಿಸಿದರೋ, ಅವಕಾಶ ಸಿಗುತ್ತಿಲ್ಲವಾದ್ದರಿಂದಲೇ ಅವರು ಕಿರುತೆರೆಗೆ ಹೋದರು ಎನ್ನುವಂತಹ ಸುದ್ದಿಗಳು ಹುಟ್ಟಿಕೊಂಡವು. ಕೊನೆಗೆ ಇದಕ್ಕೆಲ್ಲಾ ಉತ್ತರಿಸುವ ಮೂಲಕ, ಇಡೀ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.
ಇನ್ನು ಮೇಘನಾ ಖುಷಿಯಾಗಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ಕಾಶ್ಮೀರಕ್ಕೆ ಹೋಗಿ ತಣ್ಣಗೆ ವಾಪಸ್ಸು ಬಂದಿದ್ದಾರೆ. ಮೇಘನಾ ಕಾಶ್ಮೀರಕ್ಕೆ ಹೋಗಿದ್ದು ಶೂಟಿಂಗ್‌ಗಲ್ಲ. ಅದಕ್ಕೆ ಬೇರೆಯದೇ ಕಾರಣವಿದೆ. ಮೇಘನಾ ಅಲ್ಲಿಗೆ ಹೋಗುವುದಕ್ಕೆ ಮುಖ್ಯ ಕಾರಣ ಹುಟ್ಟುಹಬ್ಬ. ಕಳೆದ ಕೆಲವು ವರ್ಷಗಳಿಂದ, ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಮನೆಯಿಂದ ಬೇರೆ ಸ್ಥಳದಲ್ಲಿ ಆಚರಿಸಿಕೊಳ್ಳುವ ಸಂಪ್ರದಾಯವನ್ನು ಮೇಘನಾ ಹುಟ್ಟುಹಾಕಿದ್ದಾರೆ. ಅದರಂತೆ ಅವರು ಈ ಬಾರಿ ಕಾಶ್ಮೀರದ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಅಲ್ಲೇ ತಮ್ಮ ಫ್ಯಾಮಿಲಿಯ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂಾªರೆ.
ಸರಿ ಮುಂದೇನು ಎಂಬ ಪ್ರಶ್ನೆ ಎಲ್ಲರಿಗೂ ಇದ್ದಂತೆ, ಅವರಿಗೂ ಇದೆ. ಅದಕ್ಕೆ ಕಾದು ನೋಡುವುದಕ್ಕೆ ಅವರು ತೀರ್ಮಾನಿಸಿದ್ದಾರೆ. ಒಳ್ಳೆಯ ಕಥೆ ಬಂದ ತಕ್ಷಣ, ಮೇಘನಾ ಇನ್ನೊಂದು ಸಿನಿಮಾ ಒಪ್ಪಿಕೊಳ್ಳುತ್ತಾರಂತೆ. ಆದರೆ, ಆ ಇನ್ನೊಂದು ಒಳ್ಳೆಯ ಕಥೆ ಇರುವ ಸಿನಿಮಾ ಯಾವಾಗ ಬರುತ್ತದೆ ಎಂಬುದು ಮಾತ್ರ ಸದ್ಯಕ್ಕೆ ರಹಸ್ಯವಾಗಿಯೇ ಉಳಿದಿದೆ.