ಮೈಸೂರು: ಭೈರಪ್ಪನವರ ಸಾರ್ಥ ಕಾದಂಬರಿ ಭೌತಿಕ ಹಾಗೂ ಅಧ್ಯಾತ್ಮಿಕ, ಆಂತರಿಕ ಹಾಗೂ ಬಾಹ್ಯ ಪ್ರಯಾಣ ಕುರಿತದ್ದಾಗಿದೆ. ಕೃತಿಯಲ್ಲಿ ಬರುವ 8ನೇ ಶತಮಾನದ ನಾಗಭಟ್ಟ ಒಂದು ಕಡೆ ನೆಲೆ ನಿಲ್ಲುವುದಿಲ್ಲ. ಆತನ ಜೀವನವೇ ಒಂದು ಪ್ರಯಾಣ. ವಿವೇಚನೆಯ ಹುಡುಕಾಟ.
ಹೀಗೆಯೇ ಇಂದಿಗೂ ನಾಗಭಟ್ಟನಂತೆ ವಿವೇಚನೆ ಹುಡುಕಾಡುವ ಹೊಸ ತಲೆಮಾರನ್ನು ಕಾಣಬಹುದು ಎಂದು ಲೇಖಕಿ ಹಾಗೂ ಅಂಕಣಕಾರ್ತಿ ಶೆಫಾಲಿ ವೈದ್ಯ ಹೇಳಿದರು. ನಗರದ ಕಲಾಮಂದಿರದಲ್ಲಿ ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಏರ್ಪಡಿಸಿದ್ದ ಭೈರಪ್ಪ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ಥ ಕಾದಂಬರಿ ಕುರಿತು ಮಾತನಾಡಿದರು.
ಈ ಕಾದಂಬರಿಯ ಚಂದ್ರಿಕಾ ಪಾತ್ರವನ್ನು ಆವರಣ ಕಾದಂಬರಿಯ ಲಕ್ಷ್ಮಿ ಪಾತ್ರಕ್ಕಿಂತ, ವಂಶವೃಕ್ಷದ ಕಾತ್ಯಾಯಿನಿ ಪಾತ್ರಕ್ಕಿಂತ ಹೆಚ್ಚು ಇಷ್ಟಪಡುತ್ತೇನೆ. ಚಂದ್ರಿಕಾಳ ಗುರು ಹೇಳುವಂತೆ ಧಾರ್ಮಿಕ ಪುನರುತ್ಥಾನ ಅಗತ್ಯ. ಭಾರತದ ರೂಪಕವೇ ಸಾರ್ಥ. ಈ ಕೃತಿ ಸಂಸ್ಕೃತಿಯನ್ನು ಮತ್ತೆ ಕಟ್ಟುವುದನ್ನು ಹೇಳುತ್ತದೆ. ಸಾರ್ಥ ಕೃತಿಯನ್ನು ಮತ್ತೆ ಮತ್ತೆ ಓದಿದಾಗೆಲ್ಲ ವಿವಿಧ ಬಗೆಯ ಒಳನೋಟಗಳು ದೊರಕುತ್ತವೆ ಎಂದರು.
ಎಂಟನೇ ಶತಮಾನ ಬೌದ್ಧರು ಹಾಗೂ ಜೈನರ ಕಾಲ. ಇದೊಂದು ಸಂಕ್ರಮಣದ ಕಾಲವಾಗಿತ್ತು. ವೈದಿಕರು ಮತ್ತೆ ಪುನರ್ ಸ್ಥಾಪನೆಗೊಳ್ಳಲು ಯತ್ನಿಸುತ್ತಿದ್ದರು. ಬೌದ್ಧ ಧರ್ಮ ಪ್ರಧಾನವಾಗಿತ್ತು. ನಳಂದ ವಿಶ್ವವಿದ್ಯಾನಿಲಯ ಮಹಾಯಾನವನ್ನು ಬೋಧಿಸುತ್ತಿತ್ತು.
ಕಾದಂಬರಿಯಲ್ಲಿ ಬೌದ್ಧ ಬಿಕ್ಕುಗಳು ಜನರನ್ನು ಹೇಗೆ ಬೌದ್ಧರನ್ನಾಗಿ ಮಾಡಬೇಕೆಂದು ಚಿಂತಿಸುತ್ತಿದ್ದರು. ಈ ರೀತಿಯ ಧೋರಣೆ ಹಿಂದೂ ಅಥವಾ ಸನಾತನ ಧರ್ಮದಲ್ಲಿ ಕಂಡು ಬರುವುದಿಲ್ಲ. ಇಂದು ಹಿಂದೂಯೇತರ ಧರ್ಮಗಳು ಇದನ್ನೇ ಮಾಡುತ್ತಿವೆ ಎಂದು ಅವರು ಅಭಿಪ್ರಾಯಿಸಿದರು.
ಸಾರ್ಥ ಕಾದಂಬರಿಯಲ್ಲಿ ಅಂದಿನ ದಿನಗಳಲ್ಲಿ ಭಾರತ ಹೇಗಿತ್ತು ಎಂಬುದನ್ನು ನೋಡುತ್ತೇವೆ. ಸಾಹಿತ್ಯ ರಸಾನುಭವ ಉಂಟು ಮಾಡಬೇಕು. ಗುರುವಿನಂತೆ ಉಪದೇಶ ನೀಡಬೇಕು. ಅದನ್ನು ಸಾರ್ಥ ಮಾಡುತ್ತದೆ. ಹಲವಾರು ಬಾರಿ ಸಾರ್ಥ ಕೃತಿಯನ್ನು ಓದಿ ರಸಾನುಭವ ಹೊಂದಿದ್ದೇನೆ. ಓದುಗರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಭೈರಪ್ಪನವರಿಗೆ ಮಾತ್ರ ಸಾಧ್ಯ ಎಂದು ಅವರು ಶ್ಲಾ ಸಿದರು.
ಸಾಹಿತ್ಯಾತ್ಮಕ ಕಾಲ್ಪನಿಕತೆ ಹಾಗೂ ಸಂಶೋಧನೆಯ ಒಳನೋಟಗಳು ಭೈರಪ್ಪನವರ ಕೃತಿಗಳಲ್ಲಿ ಎದ್ದು ಕಾಣುತ್ತವೆ. ಭೈರಪ್ಪ ಅವರಂತೆ ಮತ್ತೂಬ್ಬ ಸಂವಾದಕ ನನಗೆ ಕಂಡು ಬಂದಿಲ್ಲ. ಭೈರಪ್ಪನವರು ಸಮಕಾಲೀನ ಸಮಸ್ಯೆಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಶೆಫಾಲಿ ಹೇಳಿದರು.