Advertisement

ಉಡುಪಿ ಜಿಲ್ಲೆಯಲ್ಲಿ ಶೇ.7 ಮಂದಿಗಷ್ಟೇ ಸೋಂಕು ಶೇ.15 ಮಂದಿಗೆ ಲಕ್ಷಣ ; ಮರಣ ಪ್ರಮಾಣ ಶೇ. 0.18

02:05 AM Jul 13, 2020 | Hari Prasad |

ಉಡುಪಿ: ಕೋವಿಡ್‌ – 19ಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸಂಗ್ರಹಿಸಿದ ಮಾದರಿಗಳಲ್ಲಿ ಶೇ. 7.2ರಷ್ಟು ಸೋಂಕಿತರಿದ್ದಾರೆ.

Advertisement

ಅವರಲ್ಲಿ ಸೋಂಕು ಲಕ್ಷಣದವರು, ಲಕ್ಷಣವಿಲ್ಲದಿದ್ದರೂ ಹೈರಿಸ್ಕ್ ನವರು ಸುಮಾರು ಶೇ. 15 ಪ್ರಮಾಣದಷ್ಟಿದ್ದಾರೆ.

ಜಿಲ್ಲೆಯಲ್ಲಿ ಜು. 12ರ ವರೆಗೆ 22,327 ಜನರ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. ಅವರಲ್ಲಿ 1,608 ಜನರಿಗೆ ಸೋಂಕು ತಗಲಿದೆ. ಆದರೆ ಕೋವಿಡ್ 19 ಸೋಂಕು ಲಕ್ಷಣವಿರುವವರನ್ನು ಮತ್ತು ಹೈರಿಸ್ಕ್ ನವರನ್ನು (ಹಿರಿಯರು, ಚಿಕ್ಕಮಕ್ಕಳು, ಗರ್ಭಿಣಿಯರು) ಡಾ| ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿ ಲಕ್ಷಣವಿಲ್ಲದೆ ಇರುವವರನ್ನು ಕುಂದಾಪುರ, ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲಿ ದಾಖಲಿಸಲಾಗುತ್ತಿದೆ.

ಶೇ. 2.2 ಮಂದಿಗಷ್ಟೇ ವಿಶೇಷ ಚಿಕಿತ್ಸೆ
ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಇದುವರೆಗೆ 250 ಜನರನ್ನು ದಾಖಲಿಸಿಕೊಳ್ಳಲಾಗಿದೆ. ಅವರಲ್ಲಿಯೂ ಆಕ್ಸಿಜನ್‌, ವೆಂಟಿಲೇಟರ್‌, ಐಸಿಯು ಇತ್ಯಾದಿಗಳನ್ನು ಕೊಡಬೇಕಾದ ಪರಿಸ್ಥಿತಿ ಬಂದದ್ದು 35 ಮಂದಿಗೆ ಮಾತ್ರ. ರೋಗ ಲಕ್ಷಣ ಇರುವವರಲ್ಲಿಯೂ ಶೇ. 2.2 ಜನರಿಗೆ ಮಾತ್ರ ಈ ವಿಶೇಷ ಚಿಕಿತ್ಸೆಯನ್ನು ನೀಡಬೇಕಾಯಿತು.

ಮೃತ‌ರ ಸಂಖ್ಯೆ 3 (ಉಡುಪಿಯಲ್ಲಿ ದಾವಣಗೆರೆಯವರೊಬ್ಬರು ಮರಣ ಹೊಂದಿದ್ದರೂ ಆ ಜಿಲ್ಲೆಗೆ ಸೇರಿದೆ). ಇವರಲ್ಲಿ ಇಬ್ಬರು ಮನೆಯಲ್ಲಿಯೇ ಮರಣ ಹೊಂದಿದವರು. ಒಬ್ಬರಿಗೆ ಇತರ ಆರೋಗ್ಯ ಸಮಸ್ಯೆಗಳಿತ್ತು. ಉಡುಪಿಯಲ್ಲಿ ಸೋಂಕಿತರ ಪೈಕಿ ಮರಣ ಹೊಂದಿದವರ ಪ್ರಮಾಣ ಶೇ. 0.18. ಇದು ರಾಷ್ಟ್ರೀಯ ಮತ್ತು ರಾಜ್ಯದ ಸರಾಸರಿ ಪ್ರಮಾಣಕ್ಕಿಂತ ಸಾಕಷ್ಟು ಉತ್ತಮ ಮಟ್ಟದಲ್ಲಿದೆ. ಒಟ್ಟು 1,608 ಸೋಂಕಿತರ ಪೈಕಿ ಜು. 12ರ ವರೆಗೆ 1,273 ಮಂದಿ ಗುಣಮುಖರಾಗಿದ್ದು ಇದರ ಪ್ರಮಾಣ ಶೇ. 79.16.

Advertisement

ಶೀಘ್ರ ಬಿಡುಗಡೆ
ರೋಗ ಲಕ್ಷಣ ಇರುವವರಲ್ಲಿಯೂ ಶೇ. 90 ಜನರನ್ನು ಹತ್ತೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿನಿತ್ಯ 8-10 ಜನ ಬಿಡುಗಡೆಗೊಳ್ಳುತ್ತಿದ್ದಾರೆ.

ಎಂತಹ ಚಿಕಿತ್ಸೆ?
‘ನಾವು ಸಾಕ್ಷ್ಯಾಧಾರಿತ ವೈದ್ಯಕೀಯ ಪದ್ಧತಿಯನ್ನು (ಎವಿಡೆನ್ಸ್‌ ಬೇಸ್ಡ್ ಮೆಡಿಸಿನ್‌) ಕಟ್ಟುನಿಟ್ಟು  ಪಾಲಿಸುತ್ತೇವೆ. ಅನಾವಶ್ಯಕ ಔಷಧ ಕೊಡುವುದಿಲ್ಲ. ರೋಗಿಯಿಂದ ರೋಗಿಗೆ ವೈರಸ್‌ ಬೇರೆ ಬೇರೆ ತೆರನಾದ ಪರಿಣಾಮ ಬೀರಬಹುದು. ಆ ದಾಳಿಗೆ ಪ್ರತಿಯಾದ ಸಾಕ್ಷ್ಯಾಧಾರಿತ ಚಿಕಿತ್ಸೆಯನ್ನು ಮಾತ್ರ ಕೊಡುತ್ತೇವೆ. ಆಕ್ಸಿಜನ್‌ ಕಡಿಮೆ ಇದ್ದಾಗ ಕವುಚಿ ಮಲಗುವುದೂ ಒಂದು ಉತ್ತಮ ಚಿಕಿತ್ಸೆ’ ಎಂದು ಡಾ| ಟಿಎಂಎ ಪೈ ಆಸ್ಪತ್ರೆಯ ನೋಡಲ್‌ ಅಧಿಕಾರಿ ಡಾ| ಶಶಿಕಿರಣ್‌ ಬೆಟ್ಟು ಮಾಡುತ್ತಾರೆ.

ಸೋಂಕು ಪೀಡಿತರಿಂದ ಅನ್ಯರಿಗೆ ಅಪಾಯ!
ಸೋಂಕಿನ ಲಕ್ಷಣ ಇಲ್ಲದವರಿಂದ ಅವರ ಸ್ವಂತಕ್ಕೆ ಯಾವ ಅಪಾಯವೂ ಇಲ್ಲ, ಆದರೆ ಬೇರೆಯವರಿಗೆ ಅಪಾಯ ಹೆಚ್ಚಿಗೆ ಇದೆ. ಇದುವೇ ಕೋವಿಡ್ 19 ವೈರಾಣುವಿನ ಅಪಾಯ. ಆದ್ದರಿಂದ ಎಷ್ಟೇ ಪರಿಚಯಸ್ಥರಿರಲಿ ಆರು ಅಡಿ ಅಂತರ ಕಾಪಾಡಲೇಬೇಕು ಮತ್ತು ಮಾಸ್ಕ್ ಧರಿಸಲೇಬೇಕು.

ಮತ್ತೆ ಮತ್ತೆ ತಿಳಿ ಹೇಳಬೇಕಾಗುತ್ತದೆ
ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು, ಅನಗತ್ಯವಾಗಿ ಗುಂಪು ಸೇರಬಾರದು, ಕೈಗಳನ್ನು ಆಗಾಗ್ಗೆ ತೊಳೆದುಕೊಂಡೇ ಮುಖವನ್ನು ಮುಟ್ಟಿಕೊಳ್ಳಬೇಕು. ಇದೆಲ್ಲವೂ ಹಳೆಯ ಸಂಗತಿಗಳಾದರೂ ನಾವು ಮತ್ತೆ ಮತ್ತೆ ಜನರಿಗೆ ನೆನಪಿಸಬೇಕಾಗಿದೆ. ಮುಖ್ಯವಾಗಿ ಬಸ್‌ಗಳಲ್ಲಿ ಪೀಕ್‌ ಅವಧಿಯಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡದೆ ಜನರು ಪ್ರಯಾಣಿಸುತ್ತಿದ್ದಾರೆ. ಈ ಅವಧಿಯಲ್ಲಿ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಡಿಸುವುದು ಅನಿವಾರ್ಯ, ಬೇರೆ ದಾರಿ ಇಲ್ಲ.
– ಡಾ| ಶಶಿಕಿರಣ್‌ ಉಮಾಕಾಂತ, ಡಾ| ಟಿಎಂಎ ಪೈ ಆಸ್ಪತ್ರೆಯ ನೋಡಲ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next