Advertisement

ಹೆಸರು ಖರೀದಿಗೆ 546 ರೈತರಷ್ಟೇ ನೋಂದಣಿ

05:10 PM Oct 30, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಅಡಿ ಹೆಸರು ಹಾಗೂಉದ್ದು ಖರೀದಿ ಮಾಡಲು ತೆರೆದಿದ್ದ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರು ನೋಂದಣಿಗಾಗಿ ವಿಸ್ತರಿಸಿದ್ದ ಅವಧಿಯೂ ಗುರುವಾರ (ಅ. 29) ಮುಕ್ತಾಯಗೊಂಡಿದ್ದು, ಹೆಸರಿಗಾಗಿ 546 ಹಾಗೂ ಉದ್ದು ಮಾರಾಟಕ್ಕೆ 10 ಜನರೈತರಷ್ಟೇ ನೋಂದಣಿ ಮಾಡಿದ್ದಾರೆ.

Advertisement

ಬೆಂಬಲ ಬೆಲೆ ಕೊಡಿ ಎಂದು ಜಿಲ್ಲೆಯ ರೈತರು ದುಂಬಾಲು ಬಿದ್ದರೂಸರ್ಕಾರ ಸ್ಪಂದಿಸುತ್ತಿರಲಿಲ್ಲ. ಆದರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಂಬಲ ಬೆಲೆಅಡಿ ತೆರೆದಿರುವ ಹೆಸರು ಹಾಗೂ ಉದ್ದುಖರೀದಿ ಕೇಂದ್ರಗಳಿಗೆ ರೈತರಿಂದ ಸ್ಪಂದನೆ ಸಿಗದಂತಾಗಿದ್ದು, ರೈತರ ನೋಂದಣಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆ. 21ರಿಂದ ರೈತರ ನೋಂದಣಿಗೆ ಚಾಲನೆ ನೀಡಿದರೂ ಹೊಸದಾಗಿ ರೂಪಿಸಿದ್ದ ತಂತ್ರಾಂಶದಲ್ಲಿ ಉಂಟಾಗಿದ್ದ ಕೆಲ ತಾಂತ್ರಿಕ ಕಾರಣದಿಂದ ರೈತರ ನೋಂದಣಿಯೇ ಆರಂಭವಾಗಿರಲಿಲ್ಲ. ಬಳಿಕ ತಂತ್ರಾಂಶಬಂದು ಅಕ್ಟೋಬರ್‌ನಿಂದ ನೋಂದಣಿ  ಆರಂಭಗೊಂಡ ಬಳಿಕ ನೋಂದಣಿಗೆ ಕೊನೆಯ ದಿನವಾಗಿದ್ದ ಅ.15ರ ಬದಲಿಗೆ ಅ. 29ರ ವರೆಗೆ ವಿಸ್ತರಿಸಲಾಗಿತ್ತು. ಈ ಅವಧಿಯೂ ಮುಗಿದಿದ್ದು, ರೈತರ ನೋಂದಣಿಯಲ್ಲಿ ಮಾತ್ರ ಭಾರಿ ಇಳಿಕೆ ಉಂಟಾಗಿದೆ.

ಹಾಳಾದ ಹೆಸರು-ಉದ್ದಿನ ಕಾಳು ಬೆಳೆ :  ಧಾರವಾಡ ಜಿಲ್ಲೆಯಲ್ಲಿ 46,543 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಹೆಸರು ಬೆಳೆಯಲ್ಲಿ 44,245 ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದೆ. ಇದಲ್ಲದೇ 5684 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಉದ್ದು ಬೆಳೆಯ ಪೈಕಿ 5083 ಹೆಕ್ಟೇರ್‌ ಪ್ರದೇಶದ ಬೆಳೆ ಅತಿವೃಷ್ಟಿಯಿಂದ ಹಾನಿಯಾಗಿದೆ. ಅಳಿದುಳಿದು ರೈತರ ಕೈಗೆ ಸೇರಿರುವ ಕಾಳುಗಳು ಗುಣಮಟ್ಟದ ಕೊರತೆ ಎದುರಿಸುವಂತಾಗಿದೆ. ಹೀಗಾಗಿ ಬೆಂಬಲ ಬೆಲೆ ಕೇಂದ್ರದ ಗುಣಮಟ್ಟದ ನಿಯಮಗಳ ಸಹವಾಸ ಬೇಡವೇ ಎನ್ನುತ್ತಿರುವ ಹೆಸರು ಬೆಳೆದ ರೈತರು, ಈಗ ಹೆಸರು ಬೆಳೆ ಮಾರಾಟ ಮಾಡಿದರೆ ಬೆಳೆ ಹಾನಿ ಪರಿಹಾರ ಸಿಗದು ಎಂಬ ಲೆಕ್ಕಾಚಾರದಿಂದಲೂ ಹೆಸರು ಮಾರಾಟಕ್ಕೆ ಹಿಂದೇಟು ಹಾಕುವಂತಾಗಿದೆ.

ಕುಸಿದ ಪ್ರಮಾಣ : 2018ರಲ್ಲಿ ರಾಜ್ಯದಲ್ಲಿ 23 ಸಾವಿರ ಮೆಟ್ರಿಕ್‌ ಟನ್‌ ಹೆಸರು ಖರೀದಿಗೆ ಚಾಲನೆ ನೀಡಿ, ಜಿಲ್ಲೆಗಳ ಆಯಾ ಕೇಂದ್ರಗಳಿಗೆ ಇಂತಿಷ್ಟು ಪ್ರಮಾಣ ನಿಗದಿ ಮಾಡಿ ಅಷ್ಟೇ ಖರೀದಿ ಮಾಡುವಂತೆ ಸೂಚಿಸಲಾಗಿತ್ತು. ಆದರೆ ರೈತರಿಂದ ಖರೀದಿ ಪ್ರಮಾಣ ಹೆಚ್ಚಿಸುವಂತೆ ಒತ್ತಡ ಹೆಚ್ಚಾಗಿದ್ದರಿಂದ ರಾಜ್ಯ ಸರ್ಕಾರವೇ ಹೆಚ್ಚಳ ಮಾಡಿದ್ದರಿಂದ ಒಟ್ಟು 27,500 ಮೆಟ್ರಿಕ್‌ ಟನ್‌ ಹೆಸರು ಖರೀದಿ ಮಾಡಲಾಗಿತ್ತು. 2019ರಲ್ಲಿ ನೆರೆ ಹೊಡೆತಕ್ಕೆ ಹೆಸರು ಬೆಳೆ ಕೈ ಕೊಟ್ಟಿರುವುದನ್ನು ಗಮನಿಸಿ ಕೇಂದ್ರ ಸರ್ಕಾರವು ರಾಜ್ಯದಿಂದ 12 ಸಾವಿರ ಮೆಟ್ರಿಕ್‌ ಟನ್‌ ಖರೀದಿಗೆ ಅಷ್ಟೇ ಅವಕಾಶ ಮಾಡಿ ಕೊಡಲಾಗಿತ್ತು. ಆದರೆ ಈ ವರ್ಷ ಹೆಸರು ಸಂಪೂರ್ಣ ಹಾಳಾಗಿರುವ ಕಾರಣ ಖರೀದಿ ಕೇಂದ್ರ ತೆರೆದರೂ ಸಹ ರೈತರು ತಮ್ಮ ಬೆಳೆ ಮಾರಾಟ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ.

ಗುಣಮಟ್ಟದಲ್ಲಿ ಫೇಲ್‌ ಆಗುವ ಆತಂಕ :  ಜಿಲ್ಲೆಯಲ್ಲಿ ತೆರೆದಿದ್ದ 9 ಖರೀದಿ ಕೇಂದ್ರಗಳ ಪೈಕಿ ಹೆಬಸೂರಿನ ಪಿಕೆಪಿಎಸ್‌ ಕೇಂದ್ರ ಆರಂಭವೂ ಆಗಿಲ್ಲ. ಅಲ್ಲಿಂದ ರೈತರ ನೋಂದಣಿಗಾಗಿ ಬೇಡಿಕೆಯೂ ಬಂದಿಲ್ಲ. ಧಾರವಾಡದ ಎಪಿಎಂಸಿ ಮುಖ್ಯ ಪ್ರಾಂಗಣ-137, ಹುಬ್ಬಳ್ಳಿ ಅಮರಗೋಳದ ಎಪಿಎಂಸಿಮುಖ್ಯ ಪ್ರಾಂಗಣ-108, ಉಪ್ಪಿನಬೆಟಗೇರಿಯ ಪಿಕೆಪಿಎಸ್‌-110 ರೈತರು ನೋಂದಣಿ ಮಾಡಿಸಿದ್ದೇ ಹೆಚ್ಚು ಅನ್ನುವಂತಾಗಿದ್ದು, ಉಳಿದ ಕೇಂದ್ರಗಳಲ್ಲಿ ಬೆರಳಿಕೆಯಷ್ಟೆ. ಇನ್ನೂ ಧಾರವಾಡದ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ-8 ಜನ ರೈತರು ಉದ್ದು ಕಾಳು ಮಾರಾಟಕ್ಕೆ ಹೆಸರು ನೋಂದಣಿ ಮಾಡಿದ್ದರೆ ಉಪ್ಪಿನಬೆಟಗೇರಿಯ ಪಿಕೆಪಿಎಸ್‌ ಕೇಂದ್ರದಲ್ಲಿ ಯಾವ ರೈತರೂ ನೋಂದಣಿ ಮಾಡಿಸಿಲ್ಲ. ಸದ್ಯ ಈ ನೋಂದಣಿ ಮಾಡಿಸಿದ ರೈತರ ಬಳಿಯ ಹೆಸರು ಹಾಗೂ ಉದ್ದು ಸಹ ಗುಣಮಟ್ಟದ ಕೊರತೆ ಕಂಡುಬಂದಿದ್ದು, ಗುಣಮಟ್ಟದ ಪರೀಕ್ಷೆಯಲ್ಲಿ ತಿರಸ್ಕಾರ ಆಗುವ ಆತಂಕವೂ ರೈತರಲ್ಲಿದೆ.

Advertisement

ರೈತರ ಅಳಲು : ಅಅಧಿಕ ಮಳೆಯಿಂದ ಹಾಳಾಗಿ ಅಳಿದುಳಿದು ಕೈಗೆ ಬಂದಿರುವ ಹೆಸರಿಗೆ ಗುಣಮಟ್ಟದ ಕೊರತೆ. ಈ ಕೊರತೆ ಇರುವ ಹೆಸರಿಗೆ ಖರೀದಿ ಕೇಂದ್ರಗಳಲ್ಲಿ ಬೆಲೆಯಿಲ್ಲ. ಇನ್ನು ಗುಣಮಟ್ಟದ ಹೆಸರಿಗೆ ಬೆಂಬೆಲೆಗಿಂತ ಮಾರುಕಟ್ಟೆಯಲ್ಲಿಯೇ ಉತ್ತಮ ಬೆಲೆಯುಂಟು.ಇದಲ್ಲದೇ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಲು ತಿಂಗಳು, ಮಾರಾಟ ಮಾಡಲು ಮತ್ತೂಂದು ತಿಂಗಳು, ಮಾರಾಟ ಮಾಡಿದ ಬಳಿಕ ಹಣ ಖಾತೆಗೆ ಜಮೆ ಆಗಲು ಮತ್ತೆರಡು ತಿಂಗಳು. ಈ ಮಧ್ಯೆ ಹೆಸರು ಖರೀದಿಸಲು ಗುಣಮಟ್ಟದ ಕೊರತೆ ನೀಡಿ ತಿರಸ್ಕರಿಸಿದರೆ ಮುಗಿದೇ ಹೋಯ್ತು. ಹೀಗಾಗಿ ಈ ಸಹವಾಸವೇ ಬೇಡ ಎನ್ನುತ್ತಿರುವ ರೈತರು ವ್ಯಾಪಾರಸ್ಥರಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುವಂತಾಗಿದೆ.

ಜಿಲ್ಲೆಯಲ್ಲಿ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಅ. 29ಕ್ಕೆ ಮುಕ್ತಾಯಗೊಂಡಿದೆ. ಈ ಅವಧಿಯೊಳಗೆ ಹೆಸರು ಮಾರಾಟಕ್ಕಾಗಿ546 ಹಾಗೂ ಉದ್ದು ಬೆಳೆ ಮಾರಾಟಮಾಡಲು ಕೇವಲ 10 ಜನ ರೈತರಷ್ಟೇ ನೋಂದಣಿ ಮಾಡಿದ್ದು, 2 ರಿಂದ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಗಾಯತ್ರಿ ಪವಾರ, ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಹುಬ್ಬಳ್ಳಿ

ಮಳೆಯಿಂದ ಹಾಳಾಗಿಅಳಿದುಳಿದಿರುವ ಹೆಸರು ಗುಣಮಟ್ಟದ ಕೊರತೆ ಎದುರಿಸುವಂತಾಗಿದ್ದು, ಖರೀದಿಗೆ ನೋಂದಣಿ ಮಾಡಿಸಿದರೂ ಖರೀದಿಆಗುವ ವಿಶ್ವಾಸವೇ ಇಲ್ಲ. ಒಂದು ವೇಳೆಮಾರಾಟವಾದರೂ ಆ ಹಣಕ್ಕಾಗಿ 2-3 ತಿಂಗಳು ಕಾಯಬೇಕು. ಈಗಾಗಲೇ ಬೆಳೆ ಹಾಳಾಗಿ ಆರ್ಥಿಕ ಸ್ಥಿತಿಯೂ ಹಾಳಾಗಿದ್ದು, ಹಿಂಗಾರಿನ ಸಿದ್ಧತೆಯ ಹಣಕ್ಕಾಗಿ ವ್ಯಾಪಾರಸ್ಥರಿಗೆ ಹೆಸರು ಮಾರಾಟ ಮಾಡಿದ್ದೇನೆ. ಸುರೇಶ ಹೆಬ್ಬಳ್ಳಿ, ಹೆಸರು ಬೆಳೆದ ರೈತ

 

­ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next