Advertisement

ಬಕ್ರೀದ್ ಹಿನ್ನೆಲೆ : ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಒಂದು ಬಾರಿಗೆ 50 ಮಂದಿಗೆ ಮಾತ್ರ ಅವಕಾಶ

07:21 AM Jul 17, 2021 | Team Udayavani |

ಬೆಂಗಳೂರು : ಮುಸ್ಲೀಮರ ಎರಡನೇ ದೊಡ್ಡ ಹಬ್ಬವಾಗಿರುವ ಬಕ್ರೀದ್ ಅನ್ನು ಇದೇ ತಿಂಗಳ 21 ರಂದು  ಆಚರಣೆ ಮಾಡಲಾಗುತ್ತಿದೆ. ಈ ವೇಳೆ ಮಸೀದಿಗಳಲ್ಲಿ ಒಂದು ಬಾರಿ 50 ಜನರು ಮಾತ್ರ ಪ್ರಾರ್ಥನೆ ಮಾಡಲು ಅವಕಾಶ ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

Advertisement

ಈ ಬಗ್ಗೆ ಮಾರ್ಗಸೂಚಿಯನ್ನು ಪ್ರಕಟ ಮಾಡಿದ್ದು,  ಪ್ರಾರ್ಥನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ನಮಾಜ್‌ ಮಾಡುವಾಗ ಕನಿಷ್ಠ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು. 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ಪ್ರಾರ್ಥನೆ ಮಾಡಲು ಮಸೀದಿ ಪ್ರವೇಶಿಸುವ ಮುನ್ನ ದೇಹದ ತಾಪಮಾನ ಪರೀಕ್ಷಿಸಬೇಕು. ಕೈಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ಪ್ರಾರ್ಥನೆ ಮಾಡಲು ಬೇಕಿರುವ ಮುಸಲ್ಲಾವನ್ನು (ಬಟ್ಟೆ) ಮನೆಯಿಂದಲೇ ತರುವಂತೆ ಸೂಚಿಸಬೇಕು. ಪರಸ್ಪರ ಆಲಿಂಗನ ಮತ್ತು ಹಸ್ತಲಾಘವಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.

ಈ ಹಬ್ಬದಲ್ಲಿ ಪ್ರಾಣಿ ವಧೆ ಮಾಡುವ ಸಂಪ್ರದಾಯ ಇದ್ದು, ಇದಕ್ಕೆ ನಿರ್ಬಂಧ ಹೇರಲಾಗಿದೆ. ಬಕ್ರೀದ್‌ ಹಬ್ಬದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮಾಡುವುದನ್ನು ನಿಷೇಧಿಸಲಾಗಿದೆ. ರಸ್ತೆಗಳು, ಪಾದಚಾರಿ ಮಾರ್ಗಗಳು, ಆಸ್ಪತ್ರೆಗಳ ಆವರಣಗಳು, ನರ್ಸಿಂಗ್‌ ಹೋಂಗಳ ಒಳ ಮತ್ತು ಹೊರಾಂಗಣಗಳು, ಶಾಲಾ, ಕಾಲೇಜುಗಳ ಒಳಾಂಗಣ ಮತ್ತು ಹೊರಾಂಗಣ, ಆಟದ ಮೈದಾನ, ಮಸೀದಿ ಮತ್ತು ಇತರೆ ಧಾರ್ಮಿಕ ಸ್ಥಳಗಳು, ಉದ್ಯಾನದ ಒಳಗೆ, ಹೊರಗೆ ಸೇರಿದಂತೆ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಾಣಿವಧೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next