ನವದೆಹಲಿ: ಕೋವಿಡ್ 19 ಮಹಾಮಾರಿ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಅಮೆರಿಕ, ಸ್ಪೇನ್, ಇಟಲಿ, ಇರಾನ್ ದೇಶಗಳು ಕಂಗಾಲಾಗಿವೆ. ಭಾರತದಲ್ಲಿಯೂ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸೋಂಕು ತಡೆಗಾಗಿ ಲಾಕ್ ಡೌನ್ ಜಾರಿಗೊಳಿಸಿದರೂ ಕೂಡಾ ಜನರು ಸ್ವಯಂ ಪ್ರೇರಿತರಾಗಿ ಮುತುವರ್ಜಿ ವಹಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ಬಯಲಾಗಿದೆ.
ಭಾರತದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 433ಕ್ಕೆ ಏರಿದೆ. ಏತನ್ಮಧ್ಯೆ ಇಂತಹ ತುರ್ತು ಸ್ಥಿತಿಯಲ್ಲಿಯೂ ದೇಶದ ಶೇ.27ರಷ್ಟು ಜನರು ಮಾತ್ರ ಮನೆಯಲ್ಲಿ ಉಳಿದಿದ್ದು, ಶೇ.73ರಷ್ಟು ಜನರು ಯಾವುದೇ ಮುಂಜಾಗ್ರತಾ ಕ್ರಮ ವಹಿಸಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಐಎಎನ್ ಎಸ್- ಸಿ ವೋಟರ್, ಇಂಟರ್ ನ್ಯಾಷನಲ್ ಅಸೋಸಿಯೇಶನ್ ಕೋವಿಡ್ ಟ್ರ್ಯಾಕರ್ 1 ಜಂಟಿಯಾಗಿ ಜಗತ್ತಿನ 22 ದೇಶಗಳಲ್ಲಿ ಸಮೀಕ್ಷೆಯನ್ನು ನಡೆಸಿದ್ದು, ಬರೋಬ್ಬರಿ 22 ಸಾವಿರ ಮಂದಿಯ ಎಕ್ಸ್ ಕ್ಲೂಸಿವ್ ಸಂದರ್ಶನ ನಡೆಸಿ ಮಾಹಿತಿಯನ್ನು ಕಲೆ ಹಾಕಿರುವುದಾಗಿ ವರದಿ ವಿವರಿಸಿದೆ.
ಜಾಗತಿಕವಾಗಿ ಶೇ.45ರಷ್ಟು ಮಂದಿ ಮಾತ್ರ ಮನೆಯಲ್ಲಿ ಉಳಿದಿದ್ದಾರೆ. ಸಾಮಾಜಿಕ, ಗುಂಪು ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದೇಶದ 75ಕ್ಕೂ ಅಧಿಕ ಜಿಲ್ಲೆಗಳಲ್ಲಿ ರಾಜ್ಯದ ಒಂಬತ್ತು ಸ್ಥಳಗಳಲ್ಲಿ ಲಾಕ್ ಡೌನ್ ಮಾಡುವಂತೆ ಆದೇಶ ನೀಡಲಾಗಿತ್ತು. ಆದರೆ ಮಂಗಳೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಜನರು ಗುಂಪು, ಗುಂಪಾಗಿ ಓಡಾಡುವುದು, ಖರೀದಿಗೆ ಮುಗಿ ಬೀಳುವುದು ಕಂಡು ಬಂದಿದೆ.
ಕೋವಿಡ್ 19 ಮಹಾಮಾರಿ ಹರಡದಂತೆ ಜನರು ಎಷ್ಟರ ಮಟ್ಟಿಗೆ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ ಎಂಬ ಬಗ್ಗೆ ದೇಶದ ಪ್ರತಿ ಮಹಿಳೆ ಮತ್ತು ಪುರುಷರಲ್ಲಿ ಕಳೆದ ಎರಡು ವಾರಗಳಲ್ಲಿ ಮುಖಾಮುಖಿ ಹಾಗೂ ಮೊಬೈಲ್, ಅಂತರ್ಜಾಲದ ಮೂಲಕ ಸಂದರ್ಶನ ನಡೆಸಿ ಸಮೀಕ್ಷೆ ನಡೆಸಲಾಗಿತ್ತು ಎಂದು ತಿಳಿಸಿದೆ.