Advertisement

ಕೇವಲ 16 ವರ್ಷದ ಮನುಗೆ ಎರಡನೇ ಚಿನ್ನ

08:20 AM Mar 07, 2018 | |

ನವದೆಹಲಿ: ಕೇವಲ 16 ವರ್ಷದ ಭಾರತದ ಮಹಿಳಾ ಶೂಟರ್‌ ಮನು ಭಾಕರ್‌ ಈ ಬಾರಿಯ ಐಎಸ್‌ಎಸ್‌ಎಫ್ ವಿಶ್ವಕಪ್‌
ಶೂಟಿಂಗ್‌ನಲ್ಲಿ ಸತತ 2ನೇ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಈ ಮೂಲಕ ಹಿರಿಯರ ವಿಭಾಗದಲ್ಲಿ ಬಲವಾದ ಹೆಜ್ಜೆ ಗುರುತು
ಮೂಡಿಸಿದ್ದಾರೆ. ಆದರೆ ಈ ಸಾಧನೆ ಮಾಡಿದ ಅತೀ ಕಿರಿಯ ಶೂಟರ್‌ ಹೌದೋ? ಅಲ್ಲವೋ? ಅನ್ನುವುದರ ಬಗ್ಗೆ ಅಖೀಲ
ಭಾರತೀಯ ರಾಷ್ಟ್ರೀಯ ರೈಫ‌ಲ್‌ ಸಂಸ್ಥೆ (ಎನ್‌ಆರ್‌ಎಐ) ಖಚಿತಪಡಿಸಿಲ್ಲ.

Advertisement

ಮಂಗಳವಾರ ನಡೆದ 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಮನು ಭಾಕರ್‌ ಮತ್ತು ಓಂ ಪ್ರಕಾಶ್‌ ಮಿತರ್ವಾಲ್‌ ಜೋಡಿ 
ಚಿನ್ನದ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಮನು ಮಹಿಳೆಯರ ವೈಯಕ್ತಿಕ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಭಾಕರ್‌ ಮತ್ತು ಓಂ ಪ್ರಕಾಶ್‌ ಅರ್ಹತಾ ಸುತ್ತಿನಲ್ಲಿ 770 ಅಂಕ ಪಡೆದು ದ್ವಿತೀಯ ಸ್ಥಾನಿಯಾಗಿ ಫೈನಲ್‌ಗೇರಿದ್ದರು. ಭಾರತದ ಮಹಿಮಾ ಅಗರ್ವಾಲ್‌ ಮತ್ತು ಶಹjರ್‌ ರಿಜ್ವಿ ನಾಲ್ಕನೇ ಸ್ಥಾನ ಪಡೆದು ಫೈನಲ್‌ ತಲುಪಿದ್ದರು. ಐದು ತಂಡಗಳ ಫೈನಲ್‌ನಲ್ಲಿ ಭಾರತಕ್ಕೆ ಜರ್ಮನಿಯ ಜೋಡಿ ಪ್ರಬಲ ಸವಾಲು ನೀಡಿತ್ತು. ಅಂತಿಮ ಆರು ಶೂಟ್‌ಗಳು ಬಾಕಿ ಉಳಿದಿರುವಾಗ ಜರ್ಮನಿ 0.1 ಅಂಕದಿಂದ ಮುನ್ನಡೆಯಲ್ಲಿತ್ತು. ಆದರೆ ಭಾಕರ್‌ ಮತ್ತು ಓಂ ಪ್ರಕಾಶ್‌ ಭರ್ಜರಿಯಾಗಿ ಗುರಿಯಿಟ್ಟು ಜರ್ಮನಿ 
ಜೋಡಿಗಿಂತ ಒಂದಂಕ ಮುನ್ನಡೆ ಸಾಧಿಸಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಯಿತು. 

ಭಾಕರ್‌ ಸಾಹಸ: ಹರ್ಯಾಣದ ಜಾಜರ್‌ ಮೂಲದ ಮನು ಭಾಕರ್‌ ವಿಶ್ವಮಟ್ಟದ ಈ ಸ್ಪರ್ಧೆಯಲ್ಲಿ ಸತತ ಎರಡು ಚಿನ್ನ ಗೆಲ್ಲುವ 
ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ಬರೀ ಎರಡು ವರ್ಷಗಳ ಹಿಂದೆ ಶೂಟಿಂಗ್‌ ಕ್ಷೇತ್ರ ಆಯ್ದುಕೊಂಡಿದ್ದ ಭಾಕರ್‌ ಇದೀಗ ಚಿನ್ನ ಗೆದ್ದಿರುವುದು ಸಣ್ಣ ಸಾಧನೆಯೇನೂ ಅಲ್ಲ. ದಾಖಲೆಯೊಂದಿಗೆ ಚಿನ್ನ ಗೆದ್ದಿರುವುದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಮನು, ಇದು ಕೇವಲ ನಡೆದು ಹೋಗಿದೆ. ಪದಕ ಗೆಲ್ಲುವ ಬಗ್ಗೆ ಆಲೋಚನೆ ಮಾಡಿರಲಿಲ್ಲ. ಮಾತ್ರವಲ್ಲದೇ ದಾಖಲೆಯ ಬಗ್ಗೆ ನನಗೇನೂ ತಿಳಿದಿಲ್ಲ ಎಂದರು.

ಕಳೆದ ಡಿಸೆಂಬರ್‌ನಲ್ಲಿ ತಿರುವನಂತಪುರದಲ್ಲಿ ನಡೆದ 61ನೇ ರಾಷ್ಟ್ರೀಯ ಶೂಟಿಂಗ್‌ ಸ್ಪರ್ಧೆಯ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಮನು ಅನುಭವಿ ಹೀನಾ ಸಿಧು ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಗೆದ್ದಿದ್ದರು. ಸಿಧು ಅವರ ಹೆಸರಲ್ಲಿದ್ದ ದೀರ್ಘ‌ ಕಾಲದ ರಾಷ್ಟ್ರೀಯ ದಾಖಲೆಯನ್ನು ಕೂಡ ಮುರಿದಿದ್ದರು. 

ದೀಪಕ್‌, ಮೆಹುಲಿಗೆ ಕಂಚು: ದೀಪಕ್‌ ಕುಮಾರ್‌ ಮತ್ತು ಮೆಹುಲಿ ಘೋಷ್‌ 10 ಮೀ. ಏರ್‌ ರೈಫ‌ಲ್‌ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ
ಪದಕ ಗೆದ್ದಿದ್ದಾರೆ. ಇದು ಭಾರತಕ್ಕೆ ಲಭಿಸಿದ ಆರನೇ ಪದಕವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next