Advertisement

ನಾಳೆ ನೂತನ ಸಚಿವರಾಗಿ 10 ಮಂದಿ ಪ್ರಮಾಣ ವಚನ

09:27 AM Feb 06, 2020 | Sriram |

ಬೆಂಗಳೂರು: ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಿಜೆಪಿ ಸರಕಾರ ರಚನೆಗೆ ಕಾರಣರಾದ ಬಳಿಕ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದವರ ಪೈಕಿ ಮಹೇಶ್‌ ಕುಮಟಳ್ಳಿ ಹೊರತುಪಡಿಸಿ ಉಳಿದ 10 ಮಂದಿ ಗುರುವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Advertisement

ಉಪಚುನಾವಣೆ ಫ‌ಲಿತಾಂಶ ಪ್ರಕಟವಾಗಿ ಎರಡು ತಿಂಗಳು ಕಳೆಯುವ ಹೊತ್ತಿಗೆ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದೆ. ರಮೇಶ್‌ ಜಾರಕಿಹೊಳಿ, ಆನಂದ್‌ ಸಿಂಗ್‌, ಶ್ರೀಮಂತ ಪಾಟೀಲ್‌, ಶಿವರಾಮ ಹೆಬ್ಟಾರ್‌, ಬಿ.ಸಿ.ಪಾಟೀಲ್‌, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜು, ಕೆ. ಗೋಪಾಲಯ್ಯ, ಡಾ| ಕೆ. ಸುಧಾಕರ್‌, ನಾರಾಯಣಗೌಡ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಗುರುವಾರ ರಾಜಭವನದಲ್ಲಿ ಪ್ರಮಾಣ ವಚನ ಬೋಧಿಸಲಿದ್ದಾರೆ.

ಉಪಚುನಾವಣೆಯಲ್ಲಿ ಗೆದ್ದವರ ಪೈಕಿ 10 ಮತ್ತು ಮೂಲ ಬಿಜೆಪಿಯ ಮೂವರು ಸೇರಿದಂತೆ 13 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಬಿಎಸ್‌ವೈ ಚಿಂತಿಸಿದ್ದರು. ಆದರೆ ಸಿ.ಪಿ. ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡುವುದಕ್ಕೆ ಮೂಲ ಬಿಜೆಪಿಗರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ವರಿಷ್ಠರು, ಸದ್ಯಕ್ಕೆ ಉಪ ಚುನಾವಣೆಯಲ್ಲಿ ಗೆದ್ದವರಿಗಷ್ಟೇ ಸಚಿವ ಸ್ಥಾನ ನೀಡುವಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಎರಡನೇ ಸಂಪುಟ ವಿಸ್ತರಣೆಯಲ್ಲಿ ಮೂಲ ಬಿಜೆಪಿಗರಾರಿಗೂ ಸಚಿವ ಸ್ಥಾನ ಸಿಗದಂತಾಗಿದೆ.

ಈ ನಡುವೆ ಉಮೇಶ್‌ ಕತ್ತಿ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ತಮಗೂ ಮಂತ್ರಿಗಿರಿ ನೀಡುವಂತೆ ಮನವಿ ಮಾಡಿದರು. ಅನಂತರ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ಕತ್ತಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಖಚಿತ ಎಂದರಲ್ಲದೆ, ಕುಮಟಳ್ಳಿ ಅವರಿಗೆ ಸಚಿವರಲ್ಲದ ಬೇರೆ ಹೆಚ್ಚಿನ ಹೊಣೆ ನೀಡಲಾಗುವುದು ಎಂದರು.

ನೂತನ ಸಚಿವರಾಗಲಿರುವ 10 ಮಂದಿಗೂ ಮುಖ್ಯಮಂತ್ರಿ ಬಿಎಸ್‌ವೈ ಬುಧವಾರ ಖುದ್ದಾಗಿ ಕರೆ ಮಾಡಿ ಗುರುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಆಹ್ವಾನ ನೀಡಿದ್ದಾರೆ. ಇದರಿಂದ ಸಂತಸಗೊಂಡ ಸಚಿವಾಕಾಂಕ್ಷಿಗಳು ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಧನ್ಯವಾದ ಅರ್ಪಿಸಿದರು.

Advertisement

ಬುಧವಾರ ಸಿಎಂ ಬಿಎಸ್‌ವೈ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಿದ ಬಳಿಕ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್‌, ಸಿಎಂ ಖುದ್ದಾಗಿ ಕರೆ ಮಾಡಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿದ್ದಾರೆ. ನನ್ನ ಜೀವನದಲ್ಲಿ ಇದೊಂದು ಅವಿಸ್ಮರಣೀಯ ದಿನ. ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇನೆ. ನಾನು ಪೊಲೀಸ್‌ ಇಲಾಖೆಯಲ್ಲಿದ್ದ ಕಾರಣ ಗೃಹ ಖಾತೆ ಸಿಗಲಿದೆ ಎಂದು ಮಾತು ಕೇಳಿಬಂದಿದೆ. ಸಿಎಂ ನಿರ್ಧಾರಕ್ಕೆ ಬದ್ಧ ಎಂದರು.

ವರಿಷ್ಠರ ಸೂಚನೆಯಂತೆ ಖಾತೆ
ಉಪಚುನಾವಣೆಯಲ್ಲಿ ಗೆದ್ದವರ ಪೈಕಿ 10 ಮಂದಿ ಗುರುವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಖಾತೆ ಹಂಚಿಕೆಗಾಗಿ ಇನ್ನೂ ಕೆಲವು ದಿನ ಕಾಯಬೇಕಾಗುವ ಲಕ್ಷಣ ಕಾಣುತ್ತಿದೆ. ಬಹುತೇಕ ನೂತನ ಸಚಿವರು ಪ್ರಭಾವಿ ಖಾತೆಗಳಿಗೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ವರಿಷ್ಠರ ಸೂಚನೆಯಂತೆಯೇ ಖಾತೆ ಹಂಚಿಕೆ ಮಾಡಲು ಸಿಎಂ ನಿರ್ಧರಿಸಿದಂತಿದೆ. ದಿಲ್ಲಿ ವಿಧಾನಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾದ ಬಳಿಕ ಯಡಿಯೂರಪ್ಪ ದಿಲ್ಲಿಗೆ ತೆರಳಿ ಖಾತೆ ಹಂಚಿಕೆ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next