Advertisement
ಸೋಷಿಯಲ್ ಮೀಡಿಯಾ ಕೂಡಾ ಅಡಿಕ್ಷನ್ ಆಗುತ್ತೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಕಳೆದ 7 ವರ್ಷಗಳಿಂದ ನಾನು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದವಳು. ಒಂದು ಹೋಟೆಲ್‌ಗೆ ಹೋದರೆ ಅದರ ಲೊಕೇಷನ್ ಶೇರ್ ಮಾಡುತ್ತಿದ್ದೆ, ಥಿಯೇಟರ್‌ನಲ್ಲಿ ಯಾವ ಸಿನಿಮಾ ನೋಡುತ್ತಿದ್ದೇನೆ ಎನ್ನುವುದನ್ನು ಜಗತ್ತಿಗೆ ಸಾರುತ್ತಿದ್ದೆ, ಮನೆಯಲ್ಲಿ ತಯಾರಿಸಿದ ಅಡುಗೆ ಫೋಟೋ ತೆಗೆದು ಆನ್‌ಲೈನ್ ಫಾಲೋವರ್ ಬಾಯಲ್ಲಿ ನೀರೂರಿಸುತ್ತಿದ್ದೆ. ಕುಟುಂಬದವರೊಂದಿಗೆ ತುಂಬಾ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ದಿನದ 24 ಗಂಟೆಯೂ ಕಡಿಮೆಯೇ ಎಂದೆನಿಸುತ್ತಿತ್ತು. ಹಾಗಿದ್ದಾಗಲೇ ಪತ್ರಿಕೆಯೊಂದರಲ್ಲಿ ಸೋಷಿಯಲ್ ಮೀಡಿಯಾ ಅಡಿಕ್ಷನ್ ಕುರಿತ ಅಂಕಣವೊಂದನ್ನು ಓದಿದೆ. ನನ್ನ ಬಗ್ಗೆಯೇ ಬರೆದಿದ್ದಾರೇನೋ ಎನ್ನುವಷ್ಟು ಖಚಿತವಾಗಿ ಬರೆದಿದ್ದರು. ಯಾವಾಗ ನಾನು ನನ್ನ ಗಂಡನಿಗಿಂತ, ಸೋಷಿಯಲ್ ಮೀಡಿಯಾಗೇ ಹೆಚ್ಚು ಸಮಯ ಕೊಡುತ್ತಿದ್ದೇನೆ ಎನ್ನುವುದು ಅರ್ಥವಾಯಿತೋ ಆವತ್ತೇ ನಾನೂ ಸೋಷಿಯಲ್ ಮೀಡಿಯಾ ಅಡಿಕ್ಟ್ ಅನ್ನೋದು ತಿಳಿದುಹೋಯಿತು. ಆ ಕೂಡಲೇ ಫೇಸ್‌ಬುಕ್ ಖಾತೆ ಡಿಲೀಟ್ ಮಾಡಿದೆ!
ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡುವ ಮುನ್ನ ಫೋಟೋಗಳನ್ನೆಲ್ಲಾ ಒಂದು ಕಡೆ ಸೇವ್ ಮಾಡಿಕೊಂಡೆ. ನಾನು ಸೋಷಿಯಲ್ ಮೀಡಿಯಾ ಅಡಿಕ್ಟ್ ಎನ್ನುವುದು ನನ್ನ ಅನುಭವಕ್ಕೆ ಬಂದಿದ್ದು ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡಿದಾಗಲೇ. ಮತ್ತೆ ಹೊಸದಾಗಿ ಫೇಸ್‌ಬುಕ್ ಅಕೌಂಟ್ ಓಪನ್ ಮಾಡೋಣ ಅಂತ ಪ್ರತಿ ಘಳಿಗೆಯೂ ಅನ್ನಿಸುತ್ತಿತ್ತು. ಕೆಲವೊಮ್ಮೆ ಗಂಡನ ಫೇಸ್‌ಬುಕ್ ಅಕೌಂಟ್ ತೆರೆದು ಫೇಸ್‌ಬುಕ್ ಪ್ರಪಂಚದೊಳಕ್ಕೆ ಇಣುಕುತ್ತಿದ್ದೆ. ಅಷ್ಟು ಸೆಳೆತ ಫೇಸ್‌ಬುಕ್ಕಿನದು. ಈಗ ಸೋಷಿಯಲ್ ಮೀಡಿಯಾ ಇಲ್ಲದೆ ಇರಬಲ್ಲೆ. ಶುರುವಿನಲ್ಲಿ ಫೇಸ್‌ಬುಕ್ ತ್ಯಜಿಸಿದ್ದರಿಂದ ನನಗೇನು ಲಾಭವಾಗಿದೆ ಎನ್ನುವುದನ್ನು ತಿ ಳಿಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಕ್ರಮೇಣ ಬದಲಾವಣೆ ನನ್ನ ಅರಿವಿಗೆ ಬಂದವು. ಸರಿ- ತಪ್ಪು ತಿಳಿದವು…
ಹಿಂದೆಲ್ಲಾ ಆಫೀಸಿನಿಂದ ಮನೆಗೆ ಹಿಂದಿರುಗುವಾಗ ಸ್ಮಾರ್ಟ್‌ಫೋನ್ ಕೈಗೆತ್ತಿಕೊಂಡು ಬೇರೆಯವರ ಜೀವನದಲ್ಲಿ ಏನೇನಾಗುತ್ತಿದೆ ಎಂದು ನೋಡುತ್ತಿದ್ದೆ. ಆ ಕೆಟ್ಟ ಕುತೂಹಲ ಈಗ ಇಲ್ಲ. ಇದರಿಂದಾಗಿ ಆ ಸಮಯವನ್ನು ನನ್ನದೇ ಬದುಕಿನ ಬಗ್ಗೆ ಯೋಚನೆ ಮಾಡಲು ವಿನಿಯೋಗಿಸಿಕೊಂಡೆ. ಆಟೋದಲ್ಲೋ, ಟ್ಯಾಕ್ಸಿಯಲ್ಲೋ ಪ್ರಯಾಣಿಸುವಾಗ ನನ್ನನ್ನು ನಾನೇ ಪರಾಮರ್ಶಿಸಲು ಶುರುಮಾಡಿದೆ. ಇದರಿಂದ ನನ್ನ ತಪ್ಪು ಸರಿ ನನಗೆ ತಿಳಿಯುತ್ತಾ ಹೋಯಿತು. ನನ್ನನ್ನು ನಾನು ಸುಧಾರಿಸಿಕೊಳ್ಳಲು ಅವಕಾಶ ಸಿಕ್ಕಿತು.
Related Articles
ಗಂಡ ಮತ್ತು ಮನೆಯವರ ಜೊತೆ ಹೆಚ್ಚು ಸಮಯ ಕಳೆಯಲಾರಂಭಿಸಿದೆ. ಸಮಯವಿಲ್ಲವೆಂದು ಎತ್ತಿಟ್ಟಿದ್ದ ಪುಸ್ತಕಗಳನ್ನೆಲ್ಲಾ ಓದಿಕೊಂಡೆ. ಬಿಟ್ಟು ಹೋಗಿದ್ದ ಹವ್ಯಾಸಗಳೆಲ್ಲಾ ಜೊತೆಯಾದವು. ಹಳೇ ಸ್ನೇಹಿತರೆಲ್ಲಾ ಸಿಕ್ಕರು. ಫ್ಯಾಮಿಲಿ ಟ್ರಿಪ್ ಹೋದೆವು. ನಿಧಾನವಾಗಿ ಬದುಕು ತುಂಬಾ ಇಂಟೆರೆಸ್ಟಿಂಗ್ ಅಂತನ್ನಿಸಲು ಶುರುವಾಯಿತು. ದಿನಗಳುರುಳುತ್ತಿದ್ದಂತೆ ಫೇಸ್‌ಬುಕ್ ಬಗ್ಗೆ ಆಸಕ್ತಿ ಕಡಿಮೆಯಾಯಿತು. ನಾನು ನಿಜವಾದ ಪ್ರಪಂಚಕ್ಕೆ ಕನೆಕ್ಟ್ ಆಗಿದ್ದೆ. ನಂತರ ಫೇಸ್‌ಬುಕ್ ಅಕೌಂಟ್ ಓಪನ್ ಮಾಡಿದೆ. ಈ ಬಾರಿ ಅಗತ್ಯ ಕಾರಣಗಳಿಗೆ ಮಾತ್ರ ಎಚ್ಚರಿಕೆಯಿಂದ ಬಳಸತೊಡಗಿದೆ. ಸೋಷಿಯಲ್ ಮೀಡಿಯಾನೇ ಬದುಕಲ್ಲ, ಬದುಕಿನ ಒಂದು ಪುಟ್ಟ ಭಾಗ ಅಷ್ಟೇ.
Advertisement
ಹವನ