Advertisement

ವಿದ್ಯಾರ್ಥಿ ಬಸ್‌ಪಾಸ್‌ಗೆ ಆನ್‌ಲೈನ್‌ ಕಂಟಕ!ಹೆಚ್ಚುವರಿ ವೆಚ್ಚ ಭರಿಸಲು ಪರದಾಟ

06:13 PM Jan 25, 2021 | Team Udayavani |

ಮಸ್ಕಿ: ಶಾಲೆ-ಕಾಲೇಜು ವಿದ್ಯಾರ್ಥಿಗಳ ಬಸ್‌ ಪಾಸ್‌ ವಿತರಣೆಗೆ ಈ ಬಾರಿ ಆನ್‌ಲೈನ್‌ ಅರ್ಜಿ ಆರಂಭಿಸಲಾಗಿದೆ. ಆದರೆ ಹಲವು ತಾಂತ್ರಿಕ ಅಡಚಣೆಗಳಿಂದ ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ದೊರೆಯದೇ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಸಾವಿರಾರು ವಿದ್ಯಾರ್ಥಿಗಳಿಗೆ ಈ ಬಾರಿಯ ಹೊಸ ನಿಯಮ ಫಜೀತಿ ಸೃಷ್ಟಿಸಿದೆ.

Advertisement

ಪ್ರತಿ ವರ್ಷ ಆಯಾ ಶಾಲಾ-ಕಾಲೇಜುಗಳಲ್ಲೇ ಬಸ್‌ಪಾಸ್‌ ಗೆ ಅರ್ಜಿ ಸ್ವೀಕರಿಸಿ ಪಾಸ್‌ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕು ಹರಡಲಿದೆ ಎನ್ನುವ ಕಾರಣಕ್ಕೆ ಸಾರಿಗೆ ಇಲಾಖೆಯಿಂದ ಹಂಚಿಕೆ ಮಾಡುವ ಬಸ್‌ಪಾಸ್‌ಗೆ ಸ್ವತಃ ವಿದ್ಯಾರ್ಥಿಗಳೇ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕುವ ಪದ್ಧತಿ ತರಲಾಗಿದೆ. ಆದರೆ ಈ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲಕ್ಕಿಂತ ಅನನೂಕೂಲವೇ ಹೆಚ್ಚಾಗಿದ್ದು, ನಿತ್ಯ
ಅಲೆದಾಡುವ ಸಂಕಷ್ಟ ಎದುರಾಗಿದೆ.

ಏನಿದು ತೊಡಕು?: ಸಾರಿಗೆ ಇಲಾಖೆಯಿಂದ ನೀಡುವ ಬಸ್‌ಪಾಸ್‌ಗಾಗಿ ಎಸ್ಸಿ, ಎಸ್ಟಿ ವರ್ಗದ ವಿದ್ಯಾರ್ಥಿಗಳಿಗೆ 150 ರೂ. ನಿಗದಿಪಡಿಸಿದ್ದರೆ, ಸಾಮಾನ್ಯ ವರ್ಗದ
ವಿದ್ಯಾರ್ಥಿಗಳಿಗೆ 1080 ರೂ. ಶುಲ್ಕ ನಿಗದಿ  ಮಾಡಲಾಗಿದೆ. ಆದರೆ ಈ ಬಾರಿ ಶುಲ್ಕದ ಜತೆಗೆ ಹೆಚ್ಚುವರಿ ಹೊರೆಯೂ ವಿದ್ಯಾರ್ಥಿಗಳ ಮೇಲೆ ಬಿದ್ದಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಹಾಕಬೇಕಿರುವುದರಿಂದ ವಿದ್ಯಾರ್ಥಿಗಳು ತಾಲೂಕು ಕೇಂದ್ರ ಅಥವಾ ಹೋಬಳಿ ಮಟ್ಟದಲ್ಲಿನ ಕಂಪ್ಯೂಟರ್‌ ಸೆಂಟರ್‌ಗಳಿಗೆ ತೆರಳಿ ಅರ್ಜಿ
ಸಲ್ಲಿಸಬೇಕು. ಪಾಸ್‌ ಶುಲ್ಕದ ಜತೆಗೆ ಹೆಚ್ಚುವರಿಯಾಗಿ ಬ್ರೌಸಿಂಗ್‌ ಸೆಂಟರ್‌ಗಳು ವಿಧಿಸುವ 100 ರೂ. ಹಣ ಭರಿಸಬೇಕಿದೆ. ಇದು ಮಾತ್ರವಲ್ಲ, ಒಂದು ವೇಳೆ
ಪಾಸ್‌ಗೆ ಅರ್ಜಿ ಹಾಕುವ ವಿದ್ಯಾರ್ಥಿಯ ಆಧಾರ್‌ ಸಂಖ್ಯೆಗೂ ಮೊಬೈಲ್‌ ನಂಬರ್‌ಗೂ ತಾಳೆ ಇರಬೇಕು. ಒಂದು ವೇಳೆ ಆಧಾರ್‌ಕಾರ್ಡ್‌ಗೆ ಮೊಬೈಲ್‌ ನಂಬರ್‌ ಲಿಂಕ ಇರದೇ ಹೋದರೆ, ಅಂತಹ ವಿದ್ಯಾರ್ಥಿಗಳ ಅರ್ಜಿ ತಿರಸ್ಕಾರವಾಗುತ್ತಿವೆ.

ಇಲ್ಲೂ ಸಂಕಷ್ಟ: ಪಾಸ್‌ ಪಡೆಯಲು ಬಯಸುವ ವಿದ್ಯಾರ್ಥಿಗಳು ಆಧಾರ್‌ ಕಾರ್ಡ್‌ಗೆ ಮೊಬೈಲ್‌ ನಂಬರ್‌ ಲಿಂಕ್‌ ಮಾಡಿಸಲೇಬೇಕು. ಇದಕ್ಕಾಗಿ ಆಧಾರ್‌ ಕಾರ್ಡ್‌ ಅಪ್ಡೆಟ್‌ ಮಾಡಿಸಬೇಕಿದೆ. ಆಧಾರ್‌ ಕಾರ್ಡ್‌ ಅಪ್ಡೆಟ್‌ಗೆ ಕೇವಲ ಕಂದಾಯ ಇಲಾಖೆ ಅಧೀನದ ತಹಶೀಲ್ದಾರ್‌ ಕಚೇರಿ ಇಲ್ಲವೇ ಆಯಾ ನಾಡ ಕಚೇರಿಗಳಲ್ಲಿ ಮಾತ್ರ ಅವಕಾಶವಿದೆ. ತಾಲೂಕಿನ ಬಹುತೇಕ ನಾಡ ಕಚೇರಿಯಲ್ಲಿ ಆಧಾರ್‌ ಕಾರ್ಡ್‌ ಅಪ್ಡೆಟ್‌ ಮಾಡುತ್ತಿಲ್ಲ. ತಹಶೀಲ್ದಾರ್‌ ಕಚೇರಿಯಲ್ಲಿ ಮಾತ್ರ ಈ ಅವಕಾಶ ಕಲ್ಪಿಸಲಾಗಿದೆ. ತಾಂತ್ರಿಕ ಸಮಸ್ಯೆ ಇರುವ ಎಲ್ಲ ವಿದ್ಯಾರ್ಥಿಗಳು ತಾಲೂಕು ಕೇಂದ್ರದಲ್ಲಿಯೇ ಆಧಾರ್‌ ಕಾರ್ಡ್‌ ಅಪ್ಡೆಟ್‌ಗಾಗಿ ಬೆಳಗ್ಗೆ 8ರಿಂದ ರಾತ್ರಿ 8ಗಂಟೆವರೆಗೂ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೂ ಹೆಚ್ಚುವರಿಯಾಗಿ 100ರೂ. ಶುಲ್ಕ ಭರಿಸಬೇಕು. ಶುಲ್ಕ ಎಷ್ಟಾದರೂ  ಸರಿಯೇ ಸಕಾಲಕ್ಕೆ ಸೇವೆ ಸಿಗುತ್ತಿಲ್ಲ ಎನ್ನುವ ಬೇಸರ ವಿದ್ಯಾರ್ಥಿಗಳು, ಪಾಲಕರದ್ದಾಗಿದೆ.

ವಿದ್ಯಾರ್ಥಿಗಳು, ಪಾಲಕರ ಒತ್ತಡದ ಮೇರೆಗೆ ಹಾಲಾಪೂರ ನಾಡ ಕಚೇರಿಯಲ್ಲಿ ಆಧಾರ್‌ ಕಾರ್ಡ್‌ ಅಪ್ಡೆàಟ್‌ಗೆ ಅವಕಾಶ ನೀಡಲಾಗಿದೆ. ಆದರೆ ಸಮರ್ಪಕ
ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪಗಳಿವೆ. ಒಟ್ಟಿನಲ್ಲಿ ಈ ಬಾರಿ ಬಸ್‌ಪಾಸ್‌ ವ್ಯವಸ್ಥೆಯೇ ಅಯೋಮಯವಾಗಿದ್ದು, ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಲ್ಲಿನ ತರಗತಿ ಬಿಟ್ಟು ಕಳೆದ ಎರಡು ವಾರಗಳಿಂದ ಪಾಸ್‌ಗಾಗಿಯೇ ಅಲೆಯುತ್ತಿದ್ದಾರೆ.

Advertisement

ಜ.30 ಕೊನೆಯ ದಿನ
ಬಸ್‌ಪಾಸ್‌ಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ಜ.30 ಕೊನೆಯ ದಿನವಾಗಿದೆ. ಇನ್ನು ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಹಾಕಬೇಕಿದೆ. ಆದರೆ ತಾಂತ್ರಿಕ ತೊಂದರೆ ಎದುರಾಗಿರುವುದು ವಿದ್ಯಾರ್ಥಿಗಳನ್ನು ಹೈರಾಣಾಗಿದೆ. ಬಸ್‌ಪಾಸ್‌ ಶುಲ್ಕ ಜತೆಗೆ ಖಾಸಗಿ ವಸೂಲಿ ಬೇರೆ. ಈ ಬಗ್ಗೆ ಜಿಲ್ಲಾ ತಾಲೂಕು ಆಡಳಿತಗಳು ಎಚ್ಚೆತ್ತು ಎಲ್ಲ ನಾಡ ಕಚೇರಿಯಲ್ಲೂ ವಿದ್ಯಾರ್ಥಿಗಳಿಗೆ ಅಗತ್ಯವಿರುವ ತಾಂತ್ರಿಕ ತೊಡಕು ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಪಾಲಕರು.

ಬಸ್‌ಪಾಸ್‌ಗೆ ಬೇಡಿಕೆ ಇರುವ ಬಹುತೇಕ ವಿದ್ಯಾರ್ಥಿಗಳ ಆಧಾರ್‌ ಕಾರ್ಡ್‌ಗೆ ಮೊಬೈಲ್‌ ನಂಬರ್‌ ಲಿಂಕ್‌ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ  ತೊಂದರೆಯಾಗುತ್ತಿದೆ. ಈ ಬಗ್ಗೆ ತಾಲೂಕು ಆಡಳಿತವೇ ಕ್ರಮ ಕೈಗೊಳ್ಳಬೇಕು.
ದುರ್ಗರಾಜ್‌, ಕರವೇ ಅಧ್ಯಕ್ಷ.

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next