Advertisement

ಬೆಳಗಾವಿ ವಿಭಾಗದ 74 ಸಾವಿರ ಶಿಕ್ಷಕರಿಗೆ ಆನ್‌ಲೈನ್‌ ತರಬೇತಿ

01:58 PM Jul 11, 2020 | Suhan S |

ಧಾರವಾಡ: ಕೋವಿಡ್ ದಿಂದ ಕುಸಿದಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತೆ ಚುರುಕುಗೊಳಿಸಲು ಜೂ.1 ರಿಂದ ಜೂ.30ರವರೆಗೆ ವಾಯುವ್ಯ ಕರ್ನಾಟಕ ಭಾಗದ ತಮ್ಮ ಕಚೇರಿ ವ್ಯಾಪ್ತಿಯ 9 ಜಿಲ್ಲೆಗಳಲ್ಲಿ ಆನ್‌ಲೈನ್‌ ಮೂಲಕ ಒಟ್ಟು ಸುಮಾರು 74 ಸಾವಿರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ಬೋಧನಾ ಪುನಶ್ಚೇತನ ತರಬೇತಿ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಹೇಳಿದ್ದಾರೆ.

Advertisement

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಳಗಾವಿ ವಿಭಾಗದ 9 ಜಿಲ್ಲೆಗಳಲ್ಲಿರುವ ಒಟ್ಟು ಸುಮಾರು 56 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ಹಾಗೂ ವಿಭಾಗದ ಸುಮಾರು 18 ಸಾವಿರ ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ಈ ಆನ್‌ಲೈನ್‌ ತರಬೇತಿ ನೀಡಲಾಗಿದೆ. ಸರಕಾರಕ್ಕೆ ಯಾವುದೇ ವೆಚ್ಚ ಬಾರದಂತೆ ಶೂನ್ಯ ಬಜೆಟ್‌ ಯೋಜನೆ ಮೂಲಕ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ವಿಷಯವಾರು ಬಳಸಿಕೊಂಡು ಈ ಆನ್‌ ಲೈನ್‌ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಇದು ರಾಜ್ಯದಲ್ಲೇ ಶೂನ್ಯ ಬಜೆಟ್‌ ತರಬೇತಿ ಯೋಜನೆಯ ಮೊದಲ ಪ್ರಯೋಗವಾಗಿದ್ದು, ಸಂಪೂರ್ಣ ಯಶಸ್ಸು ಕಂಡಿದೆ ಎಂದು ಅವರು ತಿಳಿಸಿದ್ದಾರೆ.

ಗೂಗಲ್‌ ಮೀಟ್‌ ಆ್ಯಪ್‌ ಲಿಂಕ್‌: ವಾಯವ್ಯ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಹಾವೇರಿ, ಗದಗ, ಶಿರಸಿ ಹಾಗೂ ಚಿಕ್ಕೋಡಿ ಜಿಲ್ಲೆಗಳ ಡಯಟ್‌ಗಳು ಗೂಗಲ್‌ ಮೀಟ್‌ ಆ್ಯಪ್‌ ಲಿಂಕ್‌ ಬಳಸಿಕೊಂಡು ಈ ತರಬೇತಿಗಳನ್ನು ಅಚ್ಚುಕಟ್ಟಾಗಿ ನಡೆಸಲು ಸೂಚಿಸಲಾಗಿತ್ತು. ಎಲ್ಲ 9 ಜಿಲ್ಲೆಗಳಲ್ಲಿ 3 ವಿಧದ ತರಬೇತಿಯನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ 1ರಿಂದ 3ನೇ ನಲಿ-ಕಲಿ ತರಗತಿಗಳ ಪರಿಸರ ವಿಷಯಗಳ ಕುರಿತು ಹಾಗೂ 4 ರಿಂದ 7ನೇ ತರಗತಿಗಳ ವಿಷಯವಾರು ಕಠಿಣ ಸಂಗತಿಗಳಿಗೆ ಬೋಧನಾ ಮಾರ್ಗದರ್ಶನ ತರಬೇತಿ ನೀಡಲಾಗಿದೆ. ಪ್ರೌಢ ಶಾಲಾ ಹಂತದಲ್ಲಿ 8 ರಿಂದ 10ನೇ ತರಗತಿಗಳ ವಿಷಯವಾರು ತರಬೇತಿ ಆಯೋಜಿಸಲಾಗಿದೆ. ವಿಶೇಷವಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿಯ ಪರಿಷ್ಕೃತಗೊಂಡ ಗಣಿತ-ವಿಜ್ಞಾನ ಪಠ್ಯಕ್ರಮ ಕುರಿತು ಸುಲಭ ಬೋಧನಾ ಮಾರ್ಗದರ್ಶಿ ತರಬೇತಿ ನೀಡಲಾಗಿದೆ. ಶಾಲಾ ಪರಿಸರ ಶುಚಿತ್ವ, ಶಾಲಾ ಕೊಠಡಿಗಳ ಸ್ಯಾನಿಟೈಜರ್‌ ಮಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಮಾಹಿತಿ ಒದಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದ್ದಾರೆ.

9 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಜರುಗುತ್ತಿರುವ ಈ ಆನ್‌ಲೈನ್‌ ತರಬೇತಿಯ ಪ್ರಯೋಜನ ಅಧಿಕವಾಗಿದೆ. ಸರಕಾರದ ಬೊಕ್ಕಸಕ್ಕೆ ಯಾವುದೇ ವೆಚ್ಚ ಬರದಂತೆ ಶಿಕ್ಷಕರಿಗೆ ನೀಡಲಾಗುವ ತರಬೇತಿ ಮೊಬೈಲ್‌ ಸಂಪರ್ಕ ಜಾಲ ಬಂಧದಲ್ಲಿ ನಡೆಯುವುದರಿಂದ ವೇಳೆಯ  ಉಳಿತಾಯವಾಗಿದೆ. ಶಿಕ್ಷಕ-ಶಿಕ್ಷಕಿಯರು ಶಾಲೆಯಿಂದ ಹೊರಬರದೇ ಅವರು ಇದ್ದ ಸ್ಥಳದಲ್ಲೇ ಅವರಿಗೆ ಬೋಧನಾ ಮಾರ್ಗದರ್ಶನ ಪ್ರಾಪ್ತವಾಗಿದೆ. ಜತೆಗೆ ತರಬೇತಿ ನಡೆಯುವ ಸ್ಥಳಕ್ಕೆಪ್ರಯಾಣಿಸುವ ಶ್ರಮ-ಪ್ರಯಾಣದ ವೆಚ್ಚದ ಉಳಿತಾಯವಾಗಿದೆ. -ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next