ನವಿಮುಂಬಯಿ, ಎ. 4: ಶಂಕಿತ ಕೋವಿಡ್ 19 ಪ್ರಕರಣಗಳು ಮತ್ತು ವೈರಸ್ ಪೀಡಿತರ ಸಂಖ್ಯೆಯು ಏರಿಕೆಯಾಗುತ್ತಿರುವ ಸಮಯದಲ್ಲಿ ನವಿಮುಂಬಯಿ ಮಹಾನಗರ ಪಾಲಿಕೆಯು (ಎನ್‌ಎಂಎಂಸಿ) ಆನ್‌ಲೈನ್ ಮತ್ತು ದೂರವಾಣ ಎರಡರಲ್ಲೂ ವೈದ್ಯಕೀಯ ಸಮೀಕ್ಷೆಯನ್ನು ಕೈಗೊಳ್ಳುವ ಮೂಲಕ ಗರಿಷ್ಠ ಜನರನ್ನು ತಲುಪುವ ಹೊಸ ಆಲೋಚನೆಯೊಂದಿಗೆ ಹೊರಬಂದಿದೆ.
ಈ ಸಮೀಕ್ಷೆಗಾಗಿ ಎನ್‌ಎಂಎಂಸಿಯ ಆರೋಗ್ಯ ಇಲಾಖೆಯು ಪ್ರಯಾಣ ಮತ್ತು ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಸಿದ್ಧಪಡಿಸಿದೆ. ಸಮೀಕ್ಷೆಯು 7 ಪ್ರಶ್ನೆಗಳನ್ನು ಹೊಂದಿದ್ದು, ನಿವಾಸಿಗರು ಇದಕ್ಕೆ ಸ್ವಯಂ ಪ್ರೇರಣೆಯಿಂದ ಉತ್ತರಿಸಬಹುದಾಗಿದೆ ಎಂದು ಎನ್‌ಎಂಎಂಸಿಯ ಮುಖ್ಯ ಆರೋಗ್ಯ ಅಧಿಕಾರಿ ಬಾಳಾಸಾಹೇಬ್ ಸೋನಾವಣೆ ಹೇಳಿದ್ದಾರೆ.
ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಹೊರತುಪಡಿಸಿ, ನಿವಾಸಿಗಳಿಗೆ ಮುಖ್ಯವಾಗಿ ಅವರ ಪ್ರಯಾಣದ ಇತಿಹಾಸದ ಬಗ್ಗೆ ಕೇಳಲಾಗುತ್ತದೆ. ನಿವಾಸಿಗಳು ಅವರು ಎನ್‌ಎಂಎಂಸಿ ವ್ಯಾಪ್ತಿಗೆ ಒಳಪಡುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕೂಡ ನಮೂದಿಸಬೇಕಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸಮೀಕ್ಷೆ ವೇಳೆ ಕೇಳಲಾಗುವ ಇತರ ಪ್ರಶ್ನೆಗಳಲ್ಲಿ, ನಿಮಗೆ ಜ್ವರವಿದೆಯೇ? ನಿಮಗೆ ಗಂಟಲು ನೋವು ಇದೆಯೇ? ನಿಮಗೆ ಶೀತವಿದೆಯೇ? ನಿಮಗೆ ಉಸಿರಾಟದ ತೊಂದರೆ ಇದೆಯೇ? ಕಳೆದ ಒಂದು ತಿಂಗಳಲ್ಲಿ ನೀವು ಭಾರತದ ಹೊರಗೆ ಪ್ರಯಾಣಿಸಿರುವ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದೀರಾ? ಎಂಬ ಪ್ರಶ್ನೆಗಳಿಗೆ ನಾಗರಿಕರಿಂದ ಉತ್ತರವನ್ನು ಕೇಳಲಾಗುವುದು. ಮಹಾನಗರ ಪಾಲಿಕೆ ಕೂಡ ನಾಗರಿಕರಿಗೆ ಸರಿಯಾದ ಮಾಹಿತಿಯನ್ನು ಹಂಚಿಕೊಳ್ಳಲು ವಿನಂತಿಸಿದೆ, ಇಲ್ಲದಿದ್ದರೆ ಸಮೀಕ್ಷೆಯ ಉದ್ದೇಶವು ವಿಫಲವಾಗಲಿದೆ ಎಂದು ಆರೋಗ್ಯ ಅಧಿಕಾರಿ ನುಡಿದಿದ್ದಾರೆ.
ನಾಗರಿಕರು ಸರಿಯಾದ ಮಾಹಿತಿಯನ್ನು ಹಂಚಿಕೊಳ್ಳಲು ಚಿಂತಿಸಬೇಕಾಗಿಲ್ಲ ಅಥವಾ ಭಯಪಡಬೇಕಾಗಿಲ್ಲ. ಯಾರಾದರೂ ದೇಶದ ಹೊರಗೆ ಪ್ರಯಾಣಿಸಿದರೆ ಅಥವಾ ಅಂತಹ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿದ್ದರೆ, ಅವರು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬೇಕು. ಇದು ಸಾಂಕ್ರಾಮಿಕ ರೋಗದ ಮೇಲೆ ನಿಯಂತ್ರಣ ಹೊಂದಲು ಸಹಾಯ ಮಾಡಲಿದೆ ಎಂದು ಸೋನಾವಣೆ ತಿಳಿಸಿದ್ದಾರೆ.
ಸಮೀಕ್ಷೆ ಹೇಗೆ? : ಜನರು ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಎರಡು ಆಯ್ಕೆಗಳಿವೆ. ಜನರು ಮನಪಾ ಒದಗಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ ಗೂಗಲ್ ಡಾಕ್ ಭರ್ತಿ ಮಾಡುವ ಮೂಲಕ ಅಥವಾ ಲ್ಯಾಂಡ್‌ಲೈನ್‌ನಿಂದ (022-35155012) ಸ್ವಯಂಚಾಲಿತ ಕರೆಗೆ ಪ್ರತಿಕ್ರಿಯಿಸುವ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಮನಪಾ ಇದಕ್ಕೆ ಯಾವುದೇ ಗಡುವನ್ನು ನಿಗದಿಪಡಿಸಿಲ್ಲ.