ಅಥಣಿ: ಕೋವಿಡ್ 19 ವೈರಸ್ ಹಾವಳಿಯಿಂದ ಕರ್ನಾಟಕದಾದ್ಯಂತ ಲಾಕ್‌ಡೌನ್ ಜಾರಿಯಿಂದಾಗಿ ಬಹುತೇಕ ವಿಶ್ವವಿದ್ಯಾಲಯಗಳು ಈಗ ಅನಿವಾರ್ಯವಾಗಿ ಆನ್‌ಲೆ„ನ್ ತರಗತಿಗಳ ಮೊರೆ ಹೋಗಿವೆ. ಆದರೆ ಗ್ರಾಮೀಣ ಪ್ರದೇಶದ ಹಲವಾರು ವಿದ್ಯಾರ್ಥಿಗಳು ಇಂಟರ್‌ನೆಟ್, ಡಾಟಾ ಕೊರತೆಯಿಂದ ಆನಲೆ„ನ್ ತರಗತಿಗಳ ಪ್ರಯೋಜನ ಪಡೆಯದೆ ಪರದಾಡುವಂತಾಗಿದೆ.
ಕೋವಿಡ್ 19 ವೈರಸ್ ಹರಡದಂತೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಜಾರಿ ಮಾಡಿರುವುದರಿಂದ ಎಲ್ಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು ವಿದ್ಯಾರ್ಥಿಗಳಿಗೆ ಆ್ಯಪ್ ಮೂಲಕ ಪ್ರಾಧ್ಯಾಪಕರು ಬೋಧನೆ ಮಾಡುತ್ತಿದ್ದಾರೆ. ಆದರೆ ಇದರ ಲಾಭ ಗ್ರಾಮೀಣ ಪ್ರದೇಶದಲ್ಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಸ್ಮಾರ್ಟ್ ಫೋನ್ ಇದ್ದರೂ ಇಂಟರ್‌ನೆಟ್ ಸಮಸ್ಯೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಸರಿಯಾದ ಬೋಧನೆ ಪಡೆಯದೆ ಚಿಂತಾಕ್ರಾಂತರಾಗಿದ್ದಾರೆ.
ಒಂದು ಕಡೆ ಇಂಟರ್‌ನೆಟ್ ಸಮಸ್ಯೆಯಾದರೆ ಇನ್ನೊಂದು ಕಡೆ ಜೂನ್ ತಿಂಗಳಿನಲ್ಲಿ ಪದವಿ ಸ್ನಾತಕೋತರ ಅಂತಿಮ ಹಾಗೂ ಇತರೇ ತರಗತಿಗಳ ವಾರ್ಷಿಕ ಪರೀಕ್ಷೆ ನಡೆಸುವುದಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಮಾಹಿತಿ ಬಂದಿರುವುದರಿಂದ ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್‌ಗಿಂತ ಪರೀಕ್ಷೆ ಬರೆಯುವ ಭಯ ಹೆಚ್ಚಾಗಿದೆ.
ಮುಖ್ಯವಾಗಿ ಅಥಣಿ ತಾಲೂಕಿನಲ್ಲಿ ಬಿ.ಎ, ಬಿ.ಕಾಮ್, ಬಿ.ಎಸ್ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಎಡ್, ಎಮ್.ಎ, ಎಮ್.ಕಾಮ್, ಸೇರಿದಂತೆ ಇತರೆ ಕೋರ್ಸ್ ಗಳ ಕಾಲೇಜುಗಳಿದ್ದು ಸುಮಾರು ಒಂಭತ್ತು ಸಾವಿರಕ್ಕಿಂತಲೂ ಅಧಿಕ ವಿವಿಧ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ಸುಮಾರು ಶೇ.70 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರಿಗೂ ಈಗ ಆನಲೈನ್ ನಲ್ಲಿ ಆಡಿಯೋ, ವಿಡಿಯೋ ಮೂಲಕ ಪಾಠ ಮಾಡಲಾಗುತ್ತಿದೆ. ಇದಲ್ಲದೆ ಪ್ರಾಧ್ಯಾಪಕರು ವಾಟ್ಸ್ ಆ್ಯಪ್ ಮೂಲಕ ನೋಟ್ಸ್ ನೀಡುತ್ತಿದ್ದಾರೆ. ಆದರೆ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪ್ರಾಯೋಗಿಕ (ಪ್ರಾಕ್ಟಿಕಲ್) ಅಧ್ಯಾಯಗಳು ಸರಿಯಾಗಿ ಅರ್ಥವಾಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಆತಂಕ. ಲಾಕ್‌ಡೌನ್ ಆದೇಶ ಜಾರಿಯಲ್ಲಿರುವುದರಿಂದ ಅನಿವಾರ್ಯವಾಗಿ ಆನ್‌ಲೈನ್ ಬೊಧನೆ ಆರಂಭಿಸಲಾಗಿದೆ.
ಈಗಾಗಲೇ ಬಹುತೇಕ ಶಿಕ್ಷಣ ಸಂಸ್ಥೆಗಳು ಈ ರೀತಿಯ ಬೋಧನೆಗೆ ಚಾಲನೆ ನೀಡಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆಟ್ ವರ್ಕ್, ಡಾಟಾ ಸಮಸ್ಯೆ ಇರುವುದು ನಿಜ. ಆದರೆ ಈಗ ವಿದ್ಯಾರ್ಥಿಗಳು ಹೊಂದಾಣಿಕೆ ಮಾಡಿಕೊಂಡು ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ರಾಚವಿ ಕುಲಪತಿಗಳ ಹೇಳಿಕೆ.
ಹಲವಾರು ಸಮಸ್ಯೆಗಳ ನಡುವೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಉನ್ನತ ಹಂತದ ಅಧಿಕಾರಿಗಳು ಚರ್ಚಿಸಿ ಸೂಕ್ತ ನಿರ್ಣಯಗಳನ್ನು ತೆಗೆದುಕೊಂಡು ನಮ್ಮ ಆತಂಕ ದೂರ ಮಾಡಬೇಕು.
-ಮಹಾದೇವ ರೋಕಡಿ, ಪಾಲಕರು, ಅಥಣಿ
ನಮ್ಮ ಹಳ್ಳಿಯಲ್ಲಿ ಸರಿಯಾದ ನೆಟ್‌ವರ್ಕ್ ಇಲ್ಲ. ಅನಿವಾರ್ಯವಾಗಿ ಮೊಬೆ„ಲ್‌ನ್ನು ಗಂಟೆಗಟ್ಟಲೇ ಕೈಯಲ್ಲಿ ಹಿಡಿದು ಕುಳಿತು ಕೊಳ್ಳಬೇಕಾಗುವುದರಿಂದ ಬಾಕಿ ಕೆಲಸಗಳನ್ನು ಮಾಡಲಾಗುತ್ತಿಲ್ಲ.
-ಪ್ರಶಾಂತ ತೇಲಿ, ವಿದ್ಯಾರ್ಥಿ, ಚಮಕೇರಿ
ವಿದ್ಯಾರ್ಥಿಗಳಿಗೆ ಆನ್‌ಲೈನ್ ಬೋಧನೆ ಮಾಡಬೇಕು ಎಂಬ ಕೇಂದ್ರ ಸರ್ಕಾರದ ನಿರ್ದೇಶನದಂತೆ ಈಗಾಗಲೇ ತರಗತಿಗಳು ಆರಂಭಗೊಂಡಿವೆ. ಮೊದಲು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿತ್ತು. ಆದರೆ ಈಗ ಶೇ. 70ರಿಂದ 80ರಷ್ಟು ಈ ಆನ್‌ಲೈನ್ ಪ್ರಕ್ರಿಯೆ ಚೆನ್ನಾಗಿ ನಡೆದಿದೆ.
-ಪ್ರೊ| ಎಂ. ರಾಮಚಂದ್ರಗೌಡ, ಕುಲಪತಿ ರಾಣಿ ಚನ್ನಮ್ಮ ವಿವಿ
-ಸಂತೋಷ ರಾ ಬಡಕಂಬಿ