ಬೆಂಗಳೂರು: ಬಿಬಿಎಂಪಿಯಲ್ಲಿ ಜಾರಿಗೊಳಿಸಿರುವ ಆನ್‌ಲೈನ್ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಹಲವಾರು ಗೊಂದಲಗಳು ಸೃಷ್ಟಿಯಾಗಿದೆ. ತೆರಿಗೆದಾದರರು ತಮಗಾದ ಸಮಸ್ಯೆ ಬಗ್ಗೆ ಪಾಲಿಕೆಗೆ ದೂರು ನೀಡಿ ವರ್ಷಗಳು ಕಳೆದರೂ ಅಧಿಕಾರಿಗಳು ಮಾತ್ರ ಅವುಗಳ ಇತ್ಯರ್ಥಕ್ಕೆ ಮುಂದಾಗಿಲ್ಲ.
ತೆರಿಗೆದಾರರು 2017-18ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸುವ ವೇಳೆ ಆಗಿರುವ ತೊಂದರೆಗಳ ಪರಿಹಾರ ಕೋರಿ ಪಾಲಿಕೆಗೆ ನೀಡಿರುವ ದೂರುಗಳಿಗೆ ಅಧಿಕಾರಿಗಳಿಂದ ಯಾವುದೇ ಕ್ರಮಕೈಗೊಂಡಿಲ್ಲ. ಇವೆಲ್ಲ ಕಾರಣಗಳಿಂದಾಗಿ ಕೆಲ ನಾಗರಿಕರು ತೆರಿಗೆ ಪಾವತಿಸಲು ಸಿದ್ಧವಿದ್ದರೂ ಸಮಸ್ಯೆಗಳ ಕಾರಣಕ್ಕೆ ತೆರಿಗೆ ಪಾವತಿಸಲಾಗದೆ ಪಾಲಿಕೆಯಿಂದ ನೀಡುವ ಶೇ.5ರಷ್ಟು ರಿಯಾಯಿತಿ ತಪ್ಪಿಸಿಕೊಂಡಿದ್ದಾರೆ.
ಆನ್‌ಲೈನ್ ತೆರಿಗೆ ಪಾವತಿಯಲ್ಲಿ ಆಗುವ ಗೊಂದಲಗಳ ಕುರಿತು ಪಾಲಿಕೆಯ ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್ ಸಿಸ್ಟಂಗೆ ದೂರುಗಳನ್ನು ನೀಡುವಂತೆ ಅಧಿಕಾರಿಗಳು ತೆರಿಗೆದಾರರಿಗೆ ಮಾಹಿತಿ ನೀಡಿದ್ದಾರೆ. ಅದರ ಹಿನ್ನೆಲೆಯಲ್ಲಿ ಸಾವಿರಾರು ತೆರಿಗೆದಾರರು ತೆರಿಗೆ ಪಾವತಿ ವೇಳೆ ಆಗಿರುವ ತೊಂದರೆಗಳನ್ನು ಈ ಮೇಲ್ ಮೂಲಕ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.
ಪಾಲಿಕೆಯಿಂದ ಅಭಿವೃದ್ಧಿಪಡಿಸಿದ ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್ ಸಿಸ್ಟಂಗೆ 2014ರಿಂದ ಈವರೆಗೆ 3452 ದೂರುಗಳು ಬಂದಿವೆ. ಆದರೆ, ಪಾಲಿಕೆಯ ಅಧಿಕಾರಿಗಳು ಇತ್ಯರ್ಥಪಡಿಸಿದ ದೂರುಗಳು ಕೇವಲ 236 ಮಾತ್ರ. ಉಳಿದ 312 ದೂರುಗಳನ್ನು ಪಾಲಿಕೆ ಇತ್ಯರ್ಥಕ್ಕೆ ಕೈಗೆತ್ತಿಕೊಂಡಿದೆ, ಇನ್ನುಳಿದ 2904 ದೂರುಗಳು ಇತ್ಯರ್ಥವಾಗದೆ ಉಳಿದಿವೆ. ಜತೆಗೆ 2017ರಲ್ಲಿ ಹೊಸದಾಗಿ 97 ದೂರುಗಳು ದಾಖಲಾಗಿದ್ದು, ಅಧಿಕಾರಿಗಳಿಂದ ದೂರುದಾರರಿಗೆ ದೂರು ಸ್ವೀಕರಿಸಿರುವ ಕುರಿತು ಸಂದೇಶ ಬಂದಿದೆಯೇ ಹೊರತು, ಪರಿಹಾರ ಸಿಕ್ಕಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ಆನ್‌ಲೈನ್ ತೆರಿಗೆ ಪಾವತಿಯಲ್ಲಿ ಆಗುವ ಸಮಸ್ಯೆಗಳ ಬಗ್ಗೆ ದೂರು ನೀಡಲು ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗಿದೆ. ಆದರೆ, ತೆರಿಗೆದಾರರಿಂದ ಬರುವ ದೂರುಗಳನ್ನು ಪರಿಶೀಲನೆ ನಡೆಸಿ ಇತ್ಯರ್ಥಪಡಿಸಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಿಲ್ಲ. ಪರಿಣಾಮ ಪಾಲಿಕೆಯಿಂದ ಪ್ರತಿವರ್ಷ ತೆರಿಗೆ ಗೊಂದಲ ಕುರಿತಂತೆ ನೂರಾರು ದೂರುಗಳು ಸಲ್ಲಿಕೆಯಾದರೂ ಅವುಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.
* 3452- 2014ರಿಂದ ಈ ವರೆಗೆ ಪಾಲಕೆಯಲ್ಲಿ ದಾಖಲಾಗಿರುವ ದೂರುಗಳು
* 236-ಪಾಲಿಕೆ ಪರಿಹರಿಸಿರುವ ದೂರುಗಳ ಸಂಖ್ಯೆ
* 312- ಗೊಂದಲ ಪರಿಹರಿಸುವುದಾಗಿ ಪಾಲಿಕೆಯಿಂದ ದೃಢಪಟ್ಟಿರುವ ದೂರುಗಳು
* 2904- ಇತ್ಯರ್ಥಗೊಳ್ಳದ ದೂರುಗಳ ಸಂಖ್ಯೆ