Advertisement

ಆನ್‌ ಲೈನ್‌ ವ್ಯವಸ್ಥೆ ಇನ್ನೂ ಆಫ್ ಲೈನ್‌ !

02:44 AM May 26, 2022 | Team Udayavani |

ಉಡುಪಿ: ಪಿಯುಸಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದರೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗ‌ಳ ಪೋರ್ಟಲ್‌ಗ‌ಳು ತೆರೆದು ಕೊಳ್ಳದ ಕಾರಣ ವಿದ್ಯಾರ್ಥಿಗಳು ವಸತಿ ಗಾಗಿ ಬೇರೆಡೆ ಅಲೆದಾಡುವಂತಾಗಿದೆ.

Advertisement

ಈ ವರ್ಷದಿಂದ ಮೆಟ್ರಿಕ್‌ ಅನಂತರದ ಹಾಸ್ಟೆಲ್‌ಗ‌ಳಲ್ಲಿ ಪ್ರವೇಶಕ್ಕೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಆ ಬಳಿಕ ಕೌನ್ಸೆಲಿಂಗ್‌ ಮೂಲಕ ವಸತಿ ವ್ಯವಸ್ಥೆ ಒದಗಿಸಲಾಗುತ್ತದೆ. ಆದರೆ ಪೋರ್ಟಲ್‌ ಅಪ್‌ ಡೇಟ್‌ ಆಗುವ ಹಂತದಲ್ಲಿದೆ. ಈಗಾಗಲೇ ಅರ್ಜಿ ಸಲ್ಲಿಕೆಯೇ ತಡವಾಗಿದ್ದು, ಇನ್ನು ಕೌನ್ಸೆಲಿಂಗ್‌ ಗೆ ಮತ್ತಷ್ಟು ಸಮಯ ತಗಲುವುದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಉಡುಪಿ, ದಕ್ಷಿಣ ಜಿಲ್ಲೆಗಳ ಪಿಯು ಕಾಲೇಜುಗಳಲ್ಲಿ ಅವಕಾಶ ದಕ್ಕಿಸಿಕೊಳ್ಳಲು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಕೊಪ್ಪಳ, ಗದಗ ಮೊದಲಾದ ಜಿಲ್ಲೆಗಳ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹಾಗಾಗಿ ವಸತಿಗಾಗಿ ಸರಕಾರಿ ಹಾಸ್ಟೆಲ್‌ಗ‌ಳಿಗೆ ಮೊರೆ ಹೋದರೆ, “ಆನ್‌ಲೈನ್‌ನಲ್ಲಿ ಅರ್ಜಿ ಹಾಕಬೇಕು’ ಎಂಬ ಉತ್ತರ ವಸತಿ ನಿಲಯ ಮೇಲ್ವಿಚಾರಕರಿಂದ ಕೇಳಿ ಬರುತ್ತಿದೆ.

ಪಿಜಿಗೆ ಹಣ ವ್ಯಯ
ಹಾಸ್ಟೆಲ್‌ ಸೀಟು ಹಂಚಿಕೆ ಯಾಗಲು ಇನ್ನೂ ಹಲವು ದಿನ ಬೇಕಿರುವುದರಿಂದ ವಿದ್ಯಾರ್ಥಿಗಳು ದುಬಾರಿ ಹಣ ವ್ಯಯಿಸಿ ಖಾಸಗಿ ವಸತಿ ಗೃಹ (ಪಿಜಿ) ಗಳನ್ನೇ ಆಶ್ರಯಿಸಬೇಕಿದೆ.

ಉಡುಪಿ ಜಿಲ್ಲೆಯಲ್ಲಿ ಮೆಟ್ರಿಕ್‌ ಅನಂತರದ 9 ಬಾಲಕರ, 14 ಬಾಲಕಿಯರ ಹಾಸ್ಟೆಲ್‌ ಸೇರಿ 23 ಹಾಸ್ಟೆಲ್‌ಗ‌ಳಿವೆ. ದ.ಕ. ಜಿಲ್ಲೆಯಲ್ಲಿ 17 ಬಾಲಕರ, 32 ಬಾಲಕಿಯರ ಹಾಸ್ಟೆಲ್‌ ಸೇರಿ 49 ಹಾಸ್ಟೆಲ್‌ಗ‌ಳಿವೆ. ಉಭಯ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ 15ಕ್ಕೂ ಅಧಿಕ ಹಾಸ್ಟೆಲ್‌ಗ‌ಳಿವೆ.

Advertisement

ಕೌನ್ಸೆಲಿಂಗ್‌ ಮೂಲಕ ಸೀಟು ಹಂಚಿಕೆ
ಕೌನ್ಸೆಲಿಂಗ್‌ ಮೂಲಕ ಸೀಟು ಹಂಚಿಕೆ ಆಗಬೇಕಿರುವುದರಿಂದ ಅದಕ್ಕೆ ಸಂಬಂಧಿಸಿದ ಪೋರ್ಟಲನ್ನು ಅಪ್‌ಡೇಟ್‌ ಮಾಡಲಾಗುತ್ತಿದ್ದು, ಪರಿಶೀಲನೆಯ ಹಂತದಲ್ಲಿದೆ. ಅರ್ಜಿ ಹಾಕಿದ ಅನಂತರ ಕೌನ್ಸೆಲಿಂಗ್‌ ವ್ಯವಸ್ಥೆಯಲ್ಲಿ ಮೆರಿಟ್‌ ಮತ್ತು ಕೆಟಗರಿ ಆಧಾರದಲ್ಲಿ ಸೀಟು ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next